
30 ವರ್ಷಗಳ ಬಳಿಕ ಮತ್ತೆ ಒಂದಾದ ಚಿಯಾನ್ ವಿಕ್ರಮ್ ಮತ್ತು ಶಮ್ಮಿ ತಿಲಕನ್
3 ದಶಕದ ಬಳಿಕ ಚಿಯಾನ್ ವಿಕ್ರಮ್-ಶಮ್ಮಿ ತಿಲಕನ್ ಒಂದೇ ಫ್ರೇಮ್ನಲ್ಲಿ
ಖ್ಯಾತ ನಟ ಶಮ್ಮಿ ತಿಲಕನ್ ಈಗ 'ಚಿಯಾನ್ 63' ಚಿತ್ರಕ್ಕೆ ಸೇರ್ಪಡೆ. ಸೂಪರ್ ಹಿಟ್ 'ಧ್ರುವಂ' ಚಿತ್ರದ ಬಳಿಕ 30 ವರ್ಷಗಳ ನಂತರ ವಿಕ್ರಮ್ ಜೊತೆ ತೆರೆ ಹಂಚಿಕೊಳ್ಳಲಿರುವ ನಟ.
ಕಾಲಿವುಡ್ನ ಸ್ಟಾರ್ ನಟ ಚಿಯಾನ್ ವಿಕ್ರಮ್ ಅಭಿನಯದ ಬಹುನಿರೀಕ್ಷಿತ 'ಚಿಯಾನ್ 63' ಈ ಚಿತ್ರದ ಮೂಲಕ ಮಲಯಾಳಂನ ಖ್ಯಾತ ನಟ ಶಮ್ಮಿ ತಿಲಕನ್ ಅವರು ಚಿಯಾನ್ ವಿಕ್ರಮ್ ಅವರೊಂದಿಗೆ ಬರೋಬ್ಬರಿ ಮೂರು ದಶಕಗಳ ನಂತರ ತೆರೆ ಹಂಚಿಕೊಳ್ಳುತ್ತಿದ್ದಾರೆ.
ಆನಂದ್ ಶಂಕರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಬಿಗ್ ಬಜೆಟ್ ಸಿನಿಮಾದಲ್ಲಿ ಶಮ್ಮಿ ತಿಲಕನ್ ಅವರು ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿರುವುದನ್ನು ಅವರ ಪುತ್ರ ಅಭಿಮನ್ಯು ಶಮ್ಮಿ ತಿಲಕನ್ ಸಾಮಾಜಿಕ ಜಾಲತಾಣದ ಮೂಲಕ ಅಧಿಕೃತವಾಗಿ ಖಚಿತಪಡಿಸಿದ್ದಾರೆ. ಈ ಜೋಡಿಯು ಈ ಹಿಂದೆ 1993ರಲ್ಲಿ ತೆರೆಕಂಡಿದ್ದ ಸೂಪರ್ ಹಿಟ್ ಮಲಯಾಳಂ ಸಿನಿಮಾ 'ಧ್ರುವಂ' ಮತ್ತು 1995ರಲ್ಲಿ ಬಿಡುಗಡೆಯಾಗಿದ್ದ 'ಸ್ಟ್ರೀಟ್' ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿತ್ತು. ಇದೀಗ ಸುಮಾರು 31 ವರ್ಷಗಳ ದೀರ್ಘ ಅವಧಿಯ ನಂತರ ಈ ಇಬ್ಬರು ದಿಗ್ಗಜ ನಟರು ಮತ್ತೆ ಒಂದೇ ಫ್ರೇಮ್ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.
ನಟ ವಿಕ್ರಮ್ ಅವರನ್ನು ಇತ್ತೀಚೆಗೆ ಭೇಟಿಯಾದ ನೆನಪನ್ನು ಹಂಚಿಕೊಂಡಿರುವ ಅಭಿಮನ್ಯು, "ಕಳೆದ ಬಾರಿ ನಾನು ವಿಕ್ರಮ್ ಸರ್ ಅವರನ್ನು ನೋಡಿದಾಗ 'ಸ್ಟ್ರೀಟ್' ಸಿನಿಮಾದ ಸೆಟ್ನಲ್ಲಿ ಕೇವಲ ಆರು ತಿಂಗಳ ಮಗುವಾಗಿದ್ದೆ. ಈಗ 30 ವರ್ಷಗಳ ನಂತರ ಅವರು ನನ್ನ ತಂದೆಯ ಜೊತೆ ಮತ್ತೆ ನಟಿಸುತ್ತಿರುವುದು ಒಂದು ಅದ್ಭುತ ಮ್ಯಾಜಿಕ್ನಂತೆ ಭಾಸವಾಗುತ್ತಿದೆ" ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.
ಈ ಚಿತ್ರವನ್ನು ಸಮೀರ್ ಅಬ್ದುಲ್ ಅವರು ಚಿತ್ರಕಥೆ ಬರೆದಿದ್ದು, 'ಇರು ಮುಗನ್' ಚಿತ್ರದ ಯಶಸ್ಸಿನ ಬಳಿಕ ವಿಕ್ರಮ್ ಮತ್ತು ನಿರ್ದೇಶಕ ಆನಂದ್ ಶಂಕರ್ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಎರಡನೇ ಸಿನಿಮಾ ಇದಾಗಿದೆ. ಸದ್ಯ ಚಿತ್ರದಲ್ಲಿ ಶಮ್ಮಿ ತಿಲಕನ್ ಅವರ ಜೊತೆಗೆ ಊರ್ವಶಿ, ಎಂ.ಎಸ್. ಭಾಸ್ಕರ್, ರಿಯಾ ಶಿಬು ಮತ್ತು ಕನ್ನಡದ ನಟಿ ಸಂಯುಕ್ತಾ ಹೆಗಡೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

