
ತಮ್ಮ ಭರವಸೆಯನ್ನು ಈಡೇರಿಸಲು ವಿಜಯ್ ದೇವರಕೊಂಡ ಅವರ ತಂದೆಯ ಹುಟ್ಟೂರಾದ ತುಂಬನಪೇಟೆ ಗ್ರಾಮಕ್ಕೆ ಇಬ್ಬರೂ ಭೇಟಿ ನೀಡಿದ್ದಾರೆ.
180 ಸರ್ಕಾರಿ ಶಾಲಾ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಿದ ವಿಜಯ್-ರಶ್ಮಿಕಾ ಜೋಡಿ
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ದಂಪತಿ ತುಮ್ಮನಪೇಟೆಗೆ ಭೇಟಿ ನೀಡಿ 180 ಬಡ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಸಂಪೂರ್ಣ ಶಿಕ್ಷಣದ ಜವಾಬ್ದಾರಿಯನ್ನು ವಹಿಸಿಕೊಂಡು ಭರವಸೆ ಈಡೇರಿಸಿದ್ದಾರೆ.
ಟಾಲಿವುಡ್‌ನ ಜನಪ್ರಿಯ ತಾರಾದಂಪತಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ತಮ್ಮ ಮದುವೆಯ ಸಂದರ್ಭದಲ್ಲಿ ನೀಡಿದ್ದ ಭರವಸೆಯೊಂದನ್ನು ಈಡೇರಿಸುವ ಮೂಲಕ ಅಭಿಮಾನಿಗಳ ಮತ್ತು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತೆಲಂಗಾಣದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ನೀಡುವುದಾಗಿ ಈ ವರ್ಷದ ಆರಂಭದಲ್ಲಿ ವಿವಾಹವಾದ ಸಂದರ್ಭದಲ್ಲಿ ಈ ಜೋಡಿ ಘೋಷಿಸಿತ್ತು. ಅದರಂತೆ ಇದೀಗ ವಿಜಯ್ ದೇವರಕೊಂಡ ಅವರ ತಂದೆಯ ಹುಟ್ಟೂರಾದ ತುಮ್ಮನಪೇಟೆಗೆ ಭೇಟಿ ನೀಡಿ, ಅಲ್ಲಿನ 180 ಬಡ ವಿದ್ಯಾರ್ಥಿಗಳ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ಈ ಕುರಿತು ನಟ ವಿಜಯ್ ದೇವರಕೊಂಡ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದು, ತಾವು ಕಂಡಿದ್ದ ಸಣ್ಣದೊಂದು ಕನಸು ಈಗ ನನಸಾಗುತ್ತಿರುವುದಕ್ಕೆ ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ. ತೆಲಂಗಾಣದ ಅಚ್ಚಂಪೇಟೆ ಮಂಡಲದ 44 ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ 9 ಮತ್ತು 10ನೇ ತರಗತಿಯ ಪರಿಶ್ರಮಿ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೆರವಾಗಲು ಈ ಇಬ್ಬರು ನಾಯಕರು ನಿರ್ಧರಿಸಿದ್ದಾರೆ. ‘ದೇವರಕೊಂಡ ಫೌಂಡೇಶನ್’ ಮೂಲಕ ಈ ಮಹತ್ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದ್ದು, ಆಯ್ಕೆಯಾಗಿರುವ 180 ವಿದ್ಯಾರ್ಥಿಗಳ ಶಾಲಾ ಶುಲ್ಕವನ್ನು ಸಮಯಕ್ಕೆ ಸರಿಯಾಗಿ ಪಾವತಿಸುವುದು ಹಾಗೂ ಅವರಿಗೆ ಅಗತ್ಯವಿರುವ ಪಠ್ಯಪುಸ್ತಕ, ನೋಟ್‌ಬುಕ್ ಮತ್ತು ಇತರ ಶೈಕ್ಷಣಿಕ ಸಾಮಗ್ರಿಗಳನ್ನು ಒದಗಿಸುವ ಜವಾಬ್ದಾರಿಯನ್ನು ಈ ದಂಪತಿ ವಹಿಸಿಕೊಂಡಿದ್ದಾರೆ.
ಶಿಕ್ಷಣವು ಇಂದಿನ ದಿನಗಳಲ್ಲಿ ಅನೇಕ ಕುಟುಂಬಗಳಿಗೆ ಆರ್ಥಿಕ ಹೊರೆಯಾಗಿ ಪರಿಣಮಿಸುತ್ತಿರುವ ಸಂದರ್ಭದಲ್ಲಿ, ಸಮಾಜದಲ್ಲಿ ಪ್ರಭಾವಶಾಲಿಯಾಗಿರುವ ಇಂತಹ ತಾರೆಯರು ಮುಂದೆ ಬಂದು ಅರ್ಥಪೂರ್ಣ ಕೆಲಸ ಮಾಡುತ್ತಿರುವುದು ಎಲ್ಲೆಡೆ ಶ್ಲಾಘನೆಗೆ ಒಳಗಾಗಿದೆ. ಇನ್ನು ಇತ್ತೀಚೆಗಷ್ಟೇ ಉದಯಪುರದಲ್ಲಿ ತೆಲುಗು ಮತ್ತು ಕೊಡವ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ, ಸದ್ಯ ತಮ್ಮ ವೃತ್ತಿಜೀವನದಲ್ಲೂ ಬ್ಯುಸಿಯಾಗಿದ್ದಾರೆ. ಮದುವೆಯ ನಂತರ ಇವರಿಬ್ಬರು ಒಟ್ಟಿಗೆ ನಟಿಸುತ್ತಿರುವ 'ರಣಬಾಲಿ' ಚಿತ್ರವು ಬಿಡುಗಡೆಗೆ ಸಿದ್ಧವಾಗುತ್ತಿದ್ದು, ಈ ಸಿನಿಮಾದಲ್ಲಿ ವಿಜಯ್ 19ನೇ ಶತಮಾನದ ಬಂಡಾಯಗಾರನಾಗಿ ಕಾಣಿಸಿಕೊಂಡರೆ, ರಶ್ಮಿಕಾ 'ಜಯಮ್ಮ' ಎಂಬ ಅವರ ಪತ್ನಿಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಹಿಂದೆ 'ಗೀತ ಗೋವಿಂದಂ' ಮತ್ತು 'ಡಿಯರ್ ಕಾಮ್ರೇಡ್' ಚಿತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದಿದ್ದ ಈ ಜೋಡಿಯ ಮೂರನೇ ಸಿನಿಮಾವಾದ 'ರಣಬಾಲಿ' ಇದೇ ಸೆಪ್ಟೆಂಬರ್ 11 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

