
ಜನ ನಾಯಗನ್ ಸಿನಿಮಾದಲ್ಲಿ ನಟ ವಿಜಯ್
ಕೊನೆಗೂ ಸಿಕ್ತು ಸೆನ್ಸಾರ್ ಕ್ಲಿಯರೆನ್ಸ್: ವಿಜಯ್ ಕೊನೆಯ ಚಿತ್ರ 'ಜನ ನಾಯಗನ್'ಗೆ 'ಎ' ಸರ್ಟಿಫಿಕೇಟ್ ಶಾಕ್
ದೀರ್ಘಕಾಲದ ಕಾಯುವಿಕೆಯ ನಂತರ ಜು. 9 ಸಿಬಿಎಫ್‌ಸಿ 'ಜನ ನಾಯಗನ್' ಚಿತ್ರಕ್ಕೆ 'ಎ' ಪ್ರಮಾಣಪತ್ರವನ್ನು ನೀಡಿದೆ. ಈ ಅಧಿಕೃತ ಮಾಹಿತಿ ಈಗ ಸೆನ್ಸಾರ್ ಮಂಡಳಿಯ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.
ತಮಿಳುನಾಡಿನ ನೂತನ ಮುಖ್ಯಮಂತ್ರಿ, ದಳಪತಿ ಸಿ. ಜೋಸೆಫ್ ವಿಜಯ್ ಅವರ ಬಹುನಿರೀಕ್ಷಿತ ಹಾಗೂ ವೃತ್ತಿಜೀವನದ ಕೊನೆಯ ಚಿತ್ರ 'ಜನ ನಾಯಗನ್' ಬಿಡುಗಡೆಗೆ ಎದುರಾಗಿದ್ದ ಬಹುದೊಡ್ಡ ವಿಘ್ನ ನಿವಾರಣೆಯಾಗಿದೆ. ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಕೊನೆಗೂ ಸೆನ್ಸಾರ್ ಪ್ರಮಾಣಪತ್ರ ನೀಡಿದ್ದು, ಜುಲೈ ತಿಂಗಳಲ್ಲೇ ಸಿನಿಮಾ ತೆರೆಗೆ ಬರುವ ಸಾಧ್ಯತೆ ದಟ್ಟವಾಗಿದೆ. ಆದರೆ, ಸೆನ್ಸಾರ್ ಮಂಡಳಿ ನೀಡಿರುವ ಪ್ರಮಾಣಪತ್ರ ವಿಜಯ್ ಅಭಿಮಾನಿಗಳಿಗೆ ಕೊಂಚ ಶಾಕ್ ನೀಡಿದೆ.
'ಎ' ಸರ್ಟಿಫಿಕೇಟ್ ಪಡೆದ 'ಜನ ನಾಯಗನ್'
ದೀರ್ಘಕಾಲದ ಕಾಯುವಿಕೆಯ ನಂತರ ಜು. 9 ಸಿಬಿಎಫ್‌ಸಿ 'ಜನ ನಾಯಗನ್' ಚಿತ್ರಕ್ಕೆ 'ಎ' ಪ್ರಮಾಣಪತ್ರವನ್ನು ನೀಡಿದೆ. ಈ ಅಧಿಕೃತ ಮಾಹಿತಿ ಈಗ ಸೆನ್ಸಾರ್ ಮಂಡಳಿಯ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಚಿತ್ರವು ಬರೋಬ್ಬರಿ 183 ನಿಮಿಷಗಳ (3 ಗಂಟೆ 3 ನಿಮಿಷ) ಸುದೀರ್ಘ ರನ್‌ಟೈಮ್ ಹೊಂದಿದೆ ಎಂದು ತಿಳಿದುಬಂದಿದೆ. ಆದರೆ, ಚಿತ್ರದ ಯಾವ ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ ಎಂಬ ಕಟ್ ಲಿಸ್ಟ್ ಅನ್ನು ಮಂಡಳಿ ಇನ್ನು ಬಹಿರಂಗಪಡಿಸಿಲ್ಲ.
ಜನ ನಾಯಗನ್ ಸಿನಿಮಾದಲ್ಲಿ ನಟ ವಿಜಯ್
ಆರು ತಿಂಗಳ ಸೆನ್ಸಾರ್ ಜಟಾಪಟಿ!
ಮೂಲಗಳ ಪ್ರಕಾರ, ಚಿತ್ರವನ್ನು 2025 ಡಿಸೆಂಬರ್ ನಲ್ಲೇ ಪ್ರಮಾಣೀಕರಣಕ್ಕಾಗಿ ಕಳುಹಿಸಲಾಗಿತ್ತು. ಆರಂಭದಲ್ಲಿ ಚಿತ್ರಕ್ಕೆ 'U/A 16+' ಪ್ರಮಾಣಪತ್ರ ಸಿಗಲಿದೆ ಎಂದು ಕೆವಿಎನ್ ಪ್ರೊಡಕ್ಷನ್ಸ್‌ಗೆ ತಿಳಿಸಲಾಗಿತ್ತು. ಆದರೆ ಪರಿಶೀಲನಾ ಸಮಿತಿಯ ಸದಸ್ಯರೊಬ್ಬರು ಆಕ್ಷೇಪಣೆ ಎತ್ತಿದ ಕಾರಣ, ಚಿತ್ರವನ್ನು ಪರಿಷ್ಕರಣಾ ಸಮಿತಿಗೆ ವರ್ಗಾಯಿಸಲಾಗಿತ್ತು. ಕಾರ್ಯವಿಧಾನದ ನೆಪವೊಡ್ಡಿ ಸಿಬಿಎಫ್‌ಸಿ ಸುಮಾರು ಆರು ತಿಂಗಳ ಕಾಲ ಚಿತ್ರದ ಪ್ರಮಾಣಪತ್ರವನ್ನು ತಡೆಹಿಡಿದಿತ್ತು.
ಪೊಂಗಲ್ ಮಿಸ್ ಆಗಿತ್ತು, ಈಗ ಜುಲೈಗೆ ಫಿಕ್ಸ್?
ವಾಸ್ತವವಾಗಿ ಈ ಸಿನಿಮಾ ಇದೇ ವರ್ಷ ಜ. 9 ರಂದು ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಬೇಕಿತ್ತು. ಸೆನ್ಸಾರ್ ವಿಳಂಬದಿಂದಾಗಿ ಬಿಡುಗಡೆ ದಿನಾಂಕ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿತ್ತು. ಇದರಿಂದ ವಿಜಯ್ ಅಭಿಮಾನಿಗಳು ತೀವ್ರ ನಿರಾಶೆಗೊಂಡಿದ್ದರು. ಆದರೆ ಈಗ ಕೊನೆಗೂ ಸೆನ್ಸಾರ್ ಪ್ರಕ್ರಿಯೆ ಮುಗಿದಿದ್ದು, ಜುಲೈನಲ್ಲೇ ಸಿನಿಮಾ ಪ್ರದರ್ಶನಗೊಳ್ಳುವ ಮುನ್ಸೂಚನೆ ಸಿಕ್ಕಿದೆ.
ಸಿಎಂ ಆದ 'ಜನ ನಾಯಗನ್'
ಸಿನಿಮಾ ವಿಳಂಬವಾಗಿದ್ದರೂ ಅಭಿಮಾನಿಗಳ ಸಂಭ್ರಮಕ್ಕೇನೂ ಕಮ್ಮಿಯಾಗಿಲ್ಲ. ಮೇ ತಿಂಗಳಲ್ಲಿ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಭರ್ಜರಿ ಜಯ ದಾಖಲಿಸಿತ್ತು. ಮೊದಲ ಚುನಾವಣೆಯಲ್ಲೇ ರಾಜ್ಯದ ಮುಖ್ಯಮಂತ್ರಿಯಾಗಿ ಇತಿಹಾಸ ಸೃಷ್ಟಿಸಿರುವ ವಿಜಯ್ ಅವರನ್ನು ಬೆಳ್ಳಿಪರದೆ ಮೇಲೆ ನೋಡಲು ಇಡೀ ಅಭಿಮಾನಿಗಳು ಕಾಯುತ್ತಿದ್ದಾರೆ.
500 ಕೋಟಿ ರೂ. ಬಜೆಟ್, ಸ್ಟಾರ್ ತಾರಾಗಣ!
ಹೆಚ್. ವಿನೋದ್ ನಿರ್ದೇಶನದ ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಬರೋಬ್ಬರಿ 500 ಕೋಟಿ ರೂ. ಬೃಹತ್ ಬಜೆಟ್‌ನಲ್ಲಿ ನಿರ್ಮಿಸಿದೆ. ರಾಜಕೀಯ ಪ್ರವೇಶಕ್ಕೂ ಮುನ್ನ ಚಿತ್ರರಂಗಕ್ಕೆ ವಿದಾಯ ಹೇಳಲು ವಿಜಯ್ ನಟಿಸಿರುವ ಕೊನೆಯ ಚಿತ್ರ ಇದಾಗಿದ್ದರಿಂದ, ಸಿನಿಮಾ ಮೇಲಿನ ನಿರೀಕ್ಷೆ ಆಕಾಶ ಮುಟ್ಟಿದೆ. ಚಿತ್ರದಲ್ಲಿ ಪೂಜಾ ಹೆಗ್ಡೆ, ಬಾಲಿವುಡ್ ನಟ ಬಾಬಿ ಡಿಯೋಲ್ ಮತ್ತು ಮಮಿತಾ ಬೈಜು ಪ್ರಮುಖ ಪಾತ್ರಗಳಲ್ಲಿದ್ದಾರೆ. ಅನಿರುದ್ಧ್ ರವಿಚಂದರ್ ಅವರ ಮ್ಯೂಸಿಕ್ ಚಿತ್ರಕ್ಕಿದೆ.

