
ವಸಿಷ್ಠ ಸಿಂಹ ತಮ್ಮ ಮುಕ್ತ ಸಂದರ್ಶನದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಲೇಖಕರಿಗೆ ಗೌರವಯುತ ಸಂಭಾವನೆ ನೀಡಿ: ನಟ ವಸಿಷ್ಠ ಸಿಂಹ ಅಳಲು
ಕನ್ನಡ ಚಿತ್ರರಂಗದ ಸುಧಾರಣೆಗೆ ಕಥೆಗಾರರಿಗೆ ಸೂಕ್ತ ಸಂಭಾವನೆ ಹಾಗೂ ಗೌರವ ನೀಡುವುದು ಅತ್ಯಗತ್ಯ ಎಂದು ನಟ ವಸಿಷ್ಠ ಸಿಂಹ ಸಂದರ್ಶನದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ನಟ ವಸಿಷ್ಠ ಸಿಂಹ ಅವರು ಇತ್ತೀಚೆಗೆ ತಮ್ಮ ಮುಂಬರುವ 'ಕಡಲ ಕೋಟೆ' ಚಿತ್ರದ ಶೂಟಿಂಗ್ ಮುಗಿಸಿ ಚಿತ್ರರಂಗದ ಪ್ರಸ್ತುತ ಪರಿಸ್ಥಿತಿ ಹಾಗೂ ಎದುರಿಸುತ್ತಿರುವ ಸವಾಲುಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಕಥೆಗಾರರು ಎದುರಿಸುತ್ತಿರುವ ನಿರ್ಲಕ್ಷ್ಯ, ಚಿತ್ರರಂಗದಲ್ಲಿ ಆಗಬೇಕಿರುವ ರಚನಾತ್ಮಕ ಬದಲಾವಣೆಗಳು ಮತ್ತು ಚಿತ್ರರಂಗದ ಪ್ರತಿಯೊಬ್ಬರಿಗೂ ಇರಬೇಕಾದ ಆತ್ಮಾವಲೋಕನದ ಅಗತ್ಯತೆಯ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಸಿನಿಮಾ ಮಾಡಲು ಕಥೆಯೇ ಮೂಲಾಧಾರವಾಗಿರುವುದರಿಂದ, ಮೊದಲು ಕಥೆ ಬರೆಯುವ ಲೇಖಕರಿಗೆ ಗೌರವಯುತ ಸಂಭಾವನೆ ನೀಡಬೇಕು, ಆಗ ಮಾತ್ರ ಪ್ರೇಕ್ಷಕರು ಇಷ್ಟಪಡುವಂತಹ ಒಳ್ಳೆಯ ಸಿನಿಮಾಗಳು ಹೊರಬರಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಚಿತ್ರರಂಗದಲ್ಲಿ ಲೇಖಕರನ್ನು ನಡೆಸಿಕೊಳ್ಳುವ ರೀತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ ವಸಿಷ್ಠ ಸಿಂಹ, ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಮತ್ತೆ ಸೆಳೆಯಲು ಒಳ್ಳೆಯ ಸಿನಿಮಾಗಳನ್ನು ಮಾಡಬೇಕು ಎಂದು ಎಲ್ಲರೂ ಹೇಳುತ್ತಾರೆ. ಆದರೆ ಜನರಿಗೆ ಇಷ್ಟವಾಗುವ ಕಥೆಗಳನ್ನು ನಾವು ನೀಡುತ್ತಿದ್ದೇವಾ ಮತ್ತು ಕಥೆಗಾರರಿಗೆ ಸೂಕ್ತ ಗೌರವ ಸಿಗುತ್ತಿದೆಯಾ ಎಂದು ಪ್ರಶ್ನಿಸಿದ್ದಾರೆ. ಎಷ್ಟೋ ಪ್ರತಿಭಾವಂತ ಬರಹಗಾರರಿಗೆ ನಿರ್ಮಾಣ ಸಂಸ್ಥೆಗಳಿಗಾಗಲಿ ಅಥವಾ ನಟರಿಗಾಗಲಿ ಕಥೆ ಹೇಳಲು ಅವಕಾಶವೇ ಸಿಗುತ್ತಿಲ್ಲ. ಒಂದು ವೇಳೆ ಸಿಕ್ಕರೂ ಅವರಿಗೆ ಸರಿಯಾದ ಸಂಭಾವನೆ ಸಿಗುತ್ತಿಲ್ಲ. ಚಿತ್ರರಂಗದಲ್ಲಿ ಸಹ ನಿರ್ದೇಶಕರು, ನೃತ್ಯಗಾರರು ಮತ್ತು ತಂತ್ರಜ್ಞರಿಗೆ ನಿಗದಿತ ವೇತನದ ವ್ಯವಸ್ಥೆ ಇದೆ, ಆದರೆ ಕಥೆಗಾರರಿಗೆ ಯಾವುದೇ ನಿರ್ದಿಷ್ಟ ಶುಲ್ಕದ ವ್ಯವಸ್ಥೆ ಇಲ್ಲದಿರುವುದು ಬೇಸರದ ಸಂಗತಿ ಎಂದಿದ್ದಾರೆ. ಇದೇ ಕಾರಣಕ್ಕೆ ತಾವು ಸ್ವಂತದೊಂದು ಲೇಖಕರ ತಂಡವನ್ನು ಕಟ್ಟಿಕೊಂಡಿದ್ದು, ಅವರಿಗೆ ಸೂಕ್ತ ಸಂಭಾವನೆ ನೀಡಿ ಈಗಾಗಲೇ ೨೫ ಭದ್ರವಾದ ಚಿತ್ರಕಥೆಗಳನ್ನು ಸಿದ್ಧಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಚಿತ್ರರಂಗದಲ್ಲಿ ಮಹಿಳೆಯರ ಚಿತ್ರಣದ ಬಗ್ಗೆಯೂ ಮಾತನಾಡಿದ ವಸಿಷ್ಠ, ಸಿನಿಮಾಗಳಲ್ಲಿ ಮಹಿಳೆಯರನ್ನು ಕೇವಲ ಗ್ಲಾಮರ್‌ಗಾಗಿ ಅಥವಾ ವಸ್ತುವಿನಂತೆ ಬಿಂಬಿಸುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ. ಸಿನಿಮಾದಲ್ಲಿ ಬರುವ ಪ್ರೇಮದ ಸನ್ನಿವೇಶಗಳು ಕಥೆ ಮತ್ತು ಪಾತ್ರಕ್ಕೆ ಪೂರಕವಾಗಿರಬೇಕೇ ಹೊರತು ಕೇವಲ ಆಕರ್ಷಣೆಗಾಗಿ ಇರಬಾರದು. ಮಹಿಳೆಯರನ್ನು ಕೀಳಾಗಿ ಅಥವಾ ವಸ್ತುವಿನಂತೆ ತೋರಿಸುವ ಯಾವುದೇ ಸನ್ನಿವೇಶದಲ್ಲಿ ತಾವು ಎಂದಿಗೂ ನಟಿಸುವುದಿಲ್ಲ ಎಂಬ ಸ್ಪಷ್ಟ ನಿಲುವನ್ನು ಅವರು ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಚಿತ್ರರಂಗದಲ್ಲಿ ಪ್ರತಿಯೊಬ್ಬರಿಗೂ ಆತ್ಮಾವಲೋಕನ ಬಹಳ ಮುಖ್ಯ ಎಂದು ವಸಿಷ್ಠ ಒತ್ತಿ ಹೇಳಿದ್ದಾರೆ. 'ರಾಜಾಹುಲಿ' ಚಿತ್ರದ ಜಗ್ಗನ ಪಾತ್ರದ ನಂತರ ತಮಗೆ ಹೀರೊ ಆಗಿ ನಟಿಸಲು ಹಲವು ಅವಕಾಶಗಳು ಬಂದವು, ಆದರೆ ತಮಗೆ ಹೀರೊ ಪಾತ್ರದ ಜವಾಬ್ದಾರಿ ಹೊರಲು ಸಾಧ್ಯವೇ ಎಂದು ತಾವು ವಾರಗಟ್ಟಲೆ ಯೋಚಿಸಿ ನಿರ್ಧಾರ ತಗೆದುಕೊಂಡಿದ್ದಾಗಿ ನೆನಪಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಲ್ಲಿ ಅರ್ಹತೆ ಇಲ್ಲದಿದ್ದರೂ ದೊಡ್ಡ ಜವಾಬ್ದಾರಿಗಳನ್ನು ಹೊರಲು ಕೆಲವರು ಆತುರ ಪಡುತ್ತಿದ್ದಾರೆ, ಇದು ತಪ್ಪಾಗಲು ದಾರಿ ಮಾಡಿಕೊಡುತ್ತದೆ ಎಂದಿದ್ದಾರೆ.
ಕೊನೆಯದಾಗಿ, ಕನ್ನಡದ ಪ್ರತಿಯೊಂದು ಸಿನಿಮಾವನ್ನು 'ಕೆಜಿಎಫ್' ಅಥವಾ 'ಕಾಂತಾರ' ಚಿತ್ರಗಳಿಗೆ ಹೋಲಿಸುವುದನ್ನು ನಿಲ್ಲಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ವರ್ಷಕ್ಕೆ ಕೇವಲ ಎರಡು-ಮೂರು ಬೃಹತ್ ಸಿನಿಮಾಗಳು ಬಂದರೆ ಚಿತ್ರರಂಗ ಬೆಳೆಯಲು ಸಾಧ್ಯವಿಲ್ಲ. ಸೂಕ್ತ ಬಜೆಟ್‌ನಲ್ಲಿ ಹೆಚ್ಚು ಮಧ್ಯಮ ಶ್ರೇಣಿಯ ಸಿನಿಮಾಗಳು ಬರಬೇಕಿದೆ. ಪ್ರಸ್ತುತ ಕನ್ನಡ ಚಿತ್ರರಂಗ ಒಂದು ಕಠಿಣ ಹಂತವನ್ನು ಎದುರಿಸುತ್ತಿರಬಹುದು, ಆದರೆ ಚಿತ್ರರಂಗದ ಸುಧಾರಣೆಗೆ ಈ ಪ್ರಕ್ರಿಯೆ ಅಗತ್ಯವಾಗಿದೆ. ಕೇವಲ ಸಮಯ ಕಳೆಯಲು ಸಿನಿಮಾ ಮಾಡುವವರು ಮುಂದಿನ ದಿನಗಳಲ್ಲಿ ಹೊರಗುಳಿಯುತ್ತಾರೆ ಮತ್ತು ಕೇವಲ ಪ್ರತಿಭಾವಂತರು ಮಾತ್ರ ಉಳಿದು ಚಿತ್ರರಂಗವನ್ನು ಬೆಳೆಸಲಿದ್ದಾರೆ. ಅದಕ್ಕೂ ಮೊದಲು ನಮ್ಮ ಬರಹಗಾರರನ್ನು ನಾವು ಚೆನ್ನಾಗಿ ನೋಡಿಕೊಂಡರೆ, ಚಿತ್ರರಂಗ ತಾನಾಗಿಯೇ ಗಟ್ಟಿಯಾಗುತ್ತದೆ ಎಂದು ವಸಿಷ್ಠ ಸಿಂಹ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

