
ಜೂನ್ 12ಕ್ಕೆ ಮುಂದೂಡಲ್ಪಟ್ಟ ವರುಣ್ ಧವನ್ ನಟನೆಯ 'ಹೈ ಜವಾನಿ ತೋ ಇಷ್ಕ್ ಹೋನಾ ಹೈ
'ಟಾಕ್ಸಿಕ್' ಎಫೆಕ್ಟ್| ವರುಣ್ ಧವನ್ ನಟನೆಯ 'ಹೈ ಜವಾನಿ ತೋ ಇಷ್ಕ್ ಹೋನಾ ಹೈ ರಿಲೀಸ್ ಮುಂದೂಡಿಕೆ
ಯಶ್ ನಟನೆಯ 'ಟಾಕ್ಸಿಕ್' ಮತ್ತು ವರುಣ್ ಧವನ್ ಅಭಿನಯದ 'ಹೈ ಜವಾನಿ ತೋ ಇಷ್ಕ್ ಹೋನಾ ಹೈ' ಚಿತ್ರಗಳ ಬಿಡುಗಡೆ ದಿನಾಂಕದಲ್ಲಿ ಬದಲಾವಣೆಯಾಗಿದೆ.
ಸ್ಯಾಂಡಲ್ವುಡ್ ಹಾಗೂ ಬಾಲಿವುಡ್ ಚಿತ್ರರಂಗದಲ್ಲಿ ಈಗ ಬಿಡುಗಡೆ ದಿನಾಂಕಗಳ ಭಾರೀ ಅದಲು-ಬದಲು ನಡೆಯುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾದ ಬಿಡುಗಡೆ ಮುಂದೂಡಲ್ಪಟ್ಟ ಬೆನ್ನಲ್ಲೇ, ವರುಣ್ ಧವನ್ ನಟನೆಯ 'ಹೈ ಜವಾನಿ ತೋ ಇಷ್ಕ್ ಹೋನಾ ಹೈ' ಚಿತ್ರದ ಬಿಡುಗಡೆಯೂ ಒಂದು ವಾರ ವಿಳಂಬವಾಗಿದೆ.
ಟಾಕ್ಸಿಕ್ ಬಿಡುಗಡೆ ಮುಂದೂಡಿಕೆಗೆ ಕಾರಣವೇನು?
ಗೀತು ಮೋಹನ್ ದಾಸ್ ನಿರ್ದೇಶನದ, ಯಶ್ ನಟನೆಯ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್' ಚಿತ್ರವು ಮೊದಲು ಮಾರ್ಚ್ 19 ರಂದು ಬಿಡುಗಡೆಯಾಗಬೇಕಿತ್ತು. ಆದರೆ, ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಸ್ಥಿತಿಯಿಂದಾಗಿ ಜಾಗತಿಕ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಚಿತ್ರತಂಡವು ಬಿಡುಗಡೆಯನ್ನು ಜೂನ್ 4ಕ್ಕೆ ಮುಂದೂಡಿದೆ. ಈ ನಿರ್ಧಾರದಿಂದಾಗಿ ಮಾರ್ಚ್ 19 ರಂದು ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2' ಚಿತ್ರದೊಂದಿಗೆ ನಡೆಯಬೇಕಿದ್ದ ನೇರ ಪೈಪೋಟಿ ತಪ್ಪಿದಂತಾಗಿದೆ.
ವರುಣ್ ಧವನ್ ಚಿತ್ರದ ಹೊಸ ದಿನಾಂಕ
ಯಶ್ ಅವರ 'ಟಾಕ್ಸಿಕ್' ಜೂನ್ 4 ರಂದು ತೆರೆಕಾಣಲಿರುವ ಕಾರಣ, ಅದೇ ಸಮಯದಲ್ಲಿ ಬಿಡುಗಡೆಯಾಗಬೇಕಿದ್ದ ವರುಣ್ ಧವನ್ ಅವರ 'ಹೈ ಜವಾನಿ ತೋ ಇಷ್ಕ್ ಹೋನಾ ಹೈ' ಚಿತ್ರದ ಬಿಡುಗಡೆ ದಿನಾಂಕವನ್ನು ಬದಲಾಯಿಸಲಾಗಿದೆ. ಬಾಕ್ಸ್ ಆಫೀಸ್ ಸಂಘರ್ಷವನ್ನು ತಪ್ಪಿಸಲು ಮತ್ತು ಚಿತ್ರರಂಗದಲ್ಲಿ ಪರಸ್ಪರ ಸಹಕಾರ ನೀಡುವ ಉದ್ದೇಶದಿಂದ ಟಿಪ್ಸ್ ಫಿಲ್ಮ್ಸ್ ಈ ನಿರ್ಧಾರ ಕೈಗೊಂಡಿದೆ. ಮೊದಲು ಜೂನ್ 5 ರಂದು ಬರಬೇಕಿದ್ದ ಈ ಚಿತ್ರವು ಈಗ ಜೂನ್ 12 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಆದಿತ್ಯ ಧರ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರ 'ಧುರಂಧರ್: ದಿ ರಿವೇಂಜ್' ಬಿಡುಗಡೆಗೆ ಇನ್ನು ಹತ್ತು ದಿನಗಳು ಬಾಕಿ ಇರುವಂತೆಯೇ ಮುಂಗಡ ಟಿಕೆಟ್ ಬುಕಿಂಗ್ನಲ್ಲಿ ದಾಖಲೆ ಬರೆಯುತ್ತಿದೆ. ರಣವೀರ್ ಸಿಂಗ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರವು ಮಾರ್ಚ್ 18 ರಂದು ಪೇಯ್ಡ್ ಪ್ರಿವ್ಯೂ ಮೂಲಕ ಹಾಗೂ ಮಾರ್ಚ್ 19 ರಂದು ವಿಶ್ವಾದ್ಯಂತ ಭರ್ಜರಿಯಾಗಿ ತೆರೆಕಾಣಲಿದೆ.
ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಈ ಸಿನಿಮಾ ಅಬ್ಬರಿಸುತ್ತಿದ್ದು, ವಿಶೇಷವಾಗಿ ಉತ್ತರ ಅಮೆರಿಕಾದಲ್ಲಿ ಈಗಾಗಲೇ 2 ಮಿಲಿಯನ್ ಡಾಲರ್ ಗಳಿಕೆಯತ್ತ ದಾಪುಗಾಲು ಹಾಕುತ್ತಿದೆ. ಅಮೆರಿಕದ ಟೆಕ್ಸಾಸ್, ಕ್ಯಾಲಿಫೋರ್ನಿಯಾ ಮತ್ತು ನ್ಯೂಜೆರ್ಸಿ ರಾಜ್ಯಗಳಲ್ಲಿ ಈ ಚಿತ್ರಕ್ಕೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ. ಇಲ್ಲಿಯವರೆಗೆ ಅಮೆರಿಕದಾದ್ಯಂತ ಸಾವಿರಕ್ಕೂ ಹೆಚ್ಚು ಶೋಗಳಿಗೆ ಸುಮಾರು 38,545 ಟಿಕೆಟ್ಗಳು ಮಾರಾಟವಾಗಿದ್ದು, ವೀಕೆಂಡ್ ಮುಂಗಡ ಬುಕಿಂಗ್ ಈಗಾಗಲೇ 1.70 ಮಿಲಿಯನ್ ಡಾಲರ್ ತಲುಪಿದೆ ಎಂದು ವರದಿಯಾಗಿದೆ.

