TVK| ಫಲಿತಾಂಶಕ್ಕೂ ಮುನ್ನ ತಿರುಚೆಂದೂರು ಮುರುಗನ್ ದರ್ಶನ ಪಡೆದ ನಟ ವಿಜಯ್
x

ತಮಿಳುನಾಡು ಚುನಾವಣಾ ಫಲಿತಾಂಶಕ್ಕೂ ಮುನ್ನ ಟಿವಿಕೆ ಅಧ್ಯಕ್ಷ ವಿಜಯ್ ತಿರುಚೆಂದೂರು ಮುರುಗನ್ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು

TVK| ಫಲಿತಾಂಶಕ್ಕೂ ಮುನ್ನ ತಿರುಚೆಂದೂರು ಮುರುಗನ್ ದರ್ಶನ ಪಡೆದ ನಟ ವಿಜಯ್

ತಮಿಳುನಾಡು ಚುನಾವಣಾ ಫಲಿತಾಂಶಕ್ಕೂ ಮುನ್ನ ಟಿವಿಕೆ ಅಧ್ಯಕ್ಷ ವಿಜಯ್ ತಿರುಚೆಂದೂರು ಮುರುಗನ್ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಮೇ 4ರ ಫಲಿತಾಂಶದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.


Click the Play button to hear this message in audio format

ನಟ ಹಾಗೂ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಅಧ್ಯಕ್ಷ ವಿಜಯ್ ಅವರು ಮಂಗಳವಾರ ತಿರುಚೆಂದೂರು ಮುರುಗನ್ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಮೇ 4ರಂದು ತಮಿಳುನಾಡು ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಲಿರುವ ಹಿನ್ನೆಲೆಯಲ್ಲಿ ವಿಜಯ್ ಅವರ ಈ ಭೇಟಿ ತೀವ್ರ ಕುತೂಹಲ ಮೂಡಿಸಿದೆ.

ಚೆನ್ನೈನಿಂದ ಮಧುರೈಗೆ ತಡರಾತ್ರಿ ಖಾಸಗಿ ವಿಮಾನದ ಮೂಲಕ ಆಗಮಿಸಿದ ನಟ ವಿಜಯ್ ಅವರನ್ನು ನೋಡಲು ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳು ಕಿಕ್ಕಿರಿದು ಜಮಾಯಿಸಿದ್ದರು. ಈ ವೇಳೆ ತಮ್ಮ ಎಂದಿನ ಬಿಳಿ ಶರ್ಟ್ ಮತ್ತು ಪ್ಯಾಂಟ್ ಬದಿಗಿಟ್ಟು ಪಕ್ಕಾ ಸಾಂಪ್ರದಾಯಿಕ ಶೈಲಿಯ ರೇಷ್ಮೆ ಪಂಚೆ ಹಾಗೂ ಶರ್ಟ್ ಧರಿಸಿದ್ದ ಅವರು, ಕಾರಿನ ಸನ್‌ರೂಫ್ ಮೂಲಕ ಹೊರಬಂದು ಅಭಿಮಾನಿಗಳತ್ತ ಕೈಬೀಸಿದರು. ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಮಧುರೈನಿಂದ ರಸ್ತೆ ಮಾರ್ಗದ ಮೂಲಕ ತಿರುಚೆಂದೂರಿಗೆ ತೆರಳಿದ ಅವರು ಬೆಳಗಿನ ಜಾವವೇ ದೇವಸ್ಥಾನಕ್ಕೆ ಭೇಟಿ ನೀಡಿದರು. ವಿಶೇಷ 'ವಿಶ್ವರೂಪ ದರ್ಶನ' ಪಡೆದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ ಅವರಿಗೆ ದೇವಸ್ಥಾನದ ಆಡಳಿತ ಮಂಡಳಿಯು ಪವಿತ್ರ 'ವೇಲ್' ನೀಡಿ ಗೌರವಿಸಿತು. ಟಿವಿ ಕೆ ಪಕ್ಷದ ಮುಖ್ಯಸ್ಥರಾಗಿ ತಮ್ಮ ಮೊದಲ ಚುನಾವಣಾ ಎದುರಿಸುತ್ತಿರುವ ವಿಜಯ್ ಅವರ ಈ ನಡೆ ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.

ಇನ್ನೊಂದೆಡೆ ವಿಜಯ್ ಅವರು ಎಚ್. ವಿನೋದ್ ನಿರ್ದೇಶನದ 'ಜನನಾಯಕನ್' ಚಿತ್ರದ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಬಾಬಿ ಡಿಯೋಲ್, ಪೂಜಾ ಹೆಗ್ಡೆ ಅಭಿನಯದ ಈ ಚಿತ್ರವು ಸೆನ್ಸಾರ್ ಮಂಡಳಿಯ ಅನುಮತಿಯ ನಿರೀಕ್ಷೆಯಲ್ಲಿದ್ದು, ಮೇ 8ರಂದು ಚಿತ್ರಮಂದಿರಗಳಲ್ಲಿ ತೆರೆಕಾಣುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಮೇ 8ಕ್ಕೆ ಜನ ನಾಯಕನ್ ಬಿಡುಗಡೆ

ದಳಪತಿ ವಿಜಯ್ ಅವರ ಬಹುನಿರೀಕ್ಷಿತ ಹಾಗೂ ಕೊನೆಯ ಚಿತ್ರ 'ಜನ ನಾಯಕನ್' ಮೇ 8ರಂದು ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. 2025ರ ಡಿಸೆಂಬರ್‌ನಿಂದ ಸೆನ್ಸಾರ್ ಹಾಗೂ ಆನ್‌ಲೈನ್ ಸೋರಿಕೆ ಸಮಸ್ಯೆಗಳನ್ನು ಎದುರಿಸುತ್ತಿದ್ದ ಈ ಚಿತ್ರ, ಅಂತಿಮವಾಗಿ ಬಿಡುಗಡೆಯ ದಿನಾಂಕವನ್ನು ಖಚಿತಪಡಿಸಿಕೊಂಡಿದೆ.

ಚಿತ್ರ ಬಿಡುಗಡೆಗೂ ಮುನ್ನವೇ ಸಂಪೂರ್ಣ ಸಿನಿಮಾ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಇದು ಬಾಕ್ಸ್ ಆಫೀಸ್ ಗಳಿಕೆಯ ಮೇಲೆ ಸ್ವಲ್ಪಮಟ್ಟಿಗೆ ಪರಿಣಾಮ ಬೀರಬಹುದು ಎಂಬ ಆತಂಕವಿದ್ದರೂ, ವಿಜಯ್ ಅವರಿಗಿರುವ ಅಪಾರ ಅಭಿಮಾನಿಗಳ ಬಳಗ ಚಿತ್ರಮಂದಿರದತ್ತ ಹರಿದುಬರುವ ನಿರೀಕ್ಷೆಯಿದೆ. ಇದು ವಿಜಯ್ ಅವರ ವಿದಾಯದ ಸಿನಿಮಾವಾಗಿರುವುದರಿಂದ, ಆರಂಭಿಕ ದಿನಗಳಲ್ಲಿ ಚಿತ್ರಮಂದಿರಗಳು ಹೌಸ್‌ಫುಲ್ ಆಗುವುದು ಖಚಿತ ಎನ್ನಲಾಗಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ, ತಮಿಳುನಾಡಿನಾದ್ಯಂತ ಈವರೆಗಿನ ಎಲ್ಲಾ ಬಾಕ್ಸ್ ಆಫೀಸ್ ದಾಖಲೆಗಳನ್ನು ಈ ಚಿತ್ರ ಪುಡಿಪುಡಿ ಮಾಡಲಿದೆ.

Read More
Next Story