
ತುಂಬಾಡ್ 2
Tumbbad 2| ತುಂಬಾಡ್ 2 ಚಿತ್ರಕ್ಕೆ ಪ್ರಿಯಾಂಕಾ, ಕತ್ರಿನಾ ಅಥವಾ ನಯನತಾರಾ ಎಂಟ್ರಿ?
ತುಂಬಾಡ್ 2 ಚಿತ್ರಕ್ಕಾಗಿ ಪ್ರಿಯಾಂಕಾ ಚೋಪ್ರಾ, ಕತ್ರಿನಾ ಕೈಫ್ ಅಥವಾ ನಯನತಾರಾ ಅವರಂತಹ ಎ-ಲಿಸ್ಟ್ ನಟಿಯರನ್ನ ಕರೆತರಲು ಚಿತ್ರತಂಡ ಸಜ್ಜಾಗಿದೆ. ಸೋಹಮ್ ಶಾ ಮತ್ತು ನವಾಜುದ್ದೀನ್ ನಟನೆಯ ಈ ಸಿನಿಮಾ 2027ಕ್ಕೆ ಬರಲಿದೆ.
ಬಾಲಿವುಡ್‌ನ ವಿಭಿನ್ನ ಹಾಗೂ ಹಾರರ್ ಥ್ರಿಲ್ಲರ್ ಸಿನಿಮಾ 'ತುಂಬಾಡ್' ಸೀಕ್ವೆಲ್ ಘೋಷಣೆಯಾದಾಗಿನಿಂದಲೂ ಭಾರೀ ಕುತೂಹಲ ಮೂಡಿಸಿದೆ. ಇದೀಗ ಚಿತ್ರತಂಡಕ್ಕೆ ಸಂಬಂಧಿಸಿದಂತೆ ಒಂದು ದೊಡ್ಡ ಸುದ್ದಿ ಹೊರಬಿದ್ದಿದ್ದು, 'ತುಂಬಾಡ್ 2' ಚಿತ್ರಕ್ಕಾಗಿ ಚಿತ್ರತಂಡವು ಭಾರತದ ಅಗ್ರಮಾನ್ಯ ನಟಿಯೊಬ್ಬರನ್ನು ಕರೆತರಲು ಸಜ್ಜಾಗಿದೆ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ, ಈ ಚಿತ್ರದ ಕಥೆಯ ವ್ಯಾಪ್ತಿಯನ್ನು ಹೆಚ್ಚಿಸಲು ಮತ್ತು ಅಂತರಾಷ್ಟ್ರೀಯ ಮಟ್ಟದ ಮೆರುಗು ನೀಡಲು ಒಬ್ಬ ಎ-ಲಿಸ್ಟ್ ನಟಿಯ ಅಗತ್ಯವಿದೆ ಎಂದು ಚಿತ್ರತಂಡ ಭಾವಿಸಿದೆ. ಸದ್ಯ ಕೇಳಿಬರುತ್ತಿರುವ ಹೆಸರುಗಳಲ್ಲಿ ಜಾಗತಿಕ ತಾರೆ ಪ್ರಿಯಾಂಕಾ ಚೋಪ್ರಾ, ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಮತ್ತು ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ನಯನತಾರಾ ಅವರ ಹೆಸರುಗಳು ಮುಂಚೂಣಿಯಲ್ಲಿವೆ. ಚಿತ್ರದ ನಿರ್ಮಾಪಕರು ಈಗಾಗಲೇ ಈ ನಟಿಯರ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ, ಯಾರೂ ಅಧಿಕೃತವಾಗಿ ಸಹಿ ಹಾಕಿಲ್ಲ ಎಂಬ ಮಾಹಿತಿಯಿದೆ.
ಈಗಾಗಲೇ ಸೋಹಮ್ ಶಾ ಮತ್ತು ನವಾಜುದ್ದೀನ್ ಸಿದ್ದಿಕಿ ಅವರಂತಹ ಘಟಾನುಘಟಿ ನಟರು ಈ ಚಿತ್ರದಲ್ಲಿ ನಟಿಸುವುದು ಖಚಿತವಾಗಿದೆ. ಆದೇಶ್ ಪ್ರಸಾದ್ ನಿರ್ದೇಶನದ ಈ ಸೀಕ್ವೆಲ್, ಮೊದಲ ಭಾಗದ ಕರಾಳ ಪುರಾಣ ಪ್ರಪಂಚವನ್ನು ಮತ್ತಷ್ಟು ವಿಸ್ತಾರವಾಗಿ ತೆರೆದಿಡಲಿದೆ. ಸೋಷಿಯಲ್ ಮೀಡಿಯಾದಲ್ಲಿ ಚಿತ್ರತಂಡ ಹಂಚಿಕೊಂಡಿರುವ "ಪ್ರಳಯ ಆಗಮಿಸಲಿದೆ" ಎಂಬ ಪೋಸ್ಟರ್ ಈಗಾಗಲೇ ಅಭಿಮಾನಿಗಳಲ್ಲಿ ನಡುಕ ಹುಟ್ಟಿಸಿದೆ.
2018ರಲ್ಲಿ ಬಿಡುಗಡೆಯಾಗಿ ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಂದ ಮುಕ್ತ ಕಂಠದ ಪ್ರಶಂಸೆ ಗಳಿಸಿದ್ದ 'ತುಂಬಾಡ್', 2024ರಲ್ಲಿ ಮರು-ಬಿಡುಗಡೆಯಾದಾಗಲೂ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದಿತ್ತು. ಇದೇ ಉತ್ಸಾಹದಲ್ಲಿರುವ ಚಿತ್ರತಂಡವು ಡಿಸೆಂಬರ್ 3ರಂದು ಸೀಕ್ವೆಲ್ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಈ ಬೃಹತ್ ಯೋಜನೆಯಲ್ಲಿ ಯಾವ ಸ್ಟಾರ್ ನಟಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲಕ್ಕೆ ಸದ್ಯದಲ್ಲೇ ಉತ್ತರ ಸಿಗುವ ಸಾಧ್ಯತೆಯಿದೆ.
'ತುಂಬಾಡ್' ಕಥೆ ಏನು?
2018 ರಲ್ಲಿ ಬಿಡುಗಡೆಯಾದ 'ತುಂಬಾಡ್', ಜಾನಪದ ಮತ್ತು ಪುರಾಣಗಳ ಹಿನ್ನೆಲೆಯಲ್ಲಿ ವಿನಾಯಕ್ ರಾವ್ ಅವರ ದುರಾಸೆಯ ಕಥೆಯನ್ನು ಹೇಳಿತ್ತು. ರಾಹಿ ಅನಿಲ್ ಬಾರ್ವೆ ನಿರ್ದೇಶನದ ಈ ಚಿತ್ರವು ವರ್ಷಗಳಲ್ಲಿ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಸಂಪಾದಿಸಿತು. 2024 ರಲ್ಲಿ ಈ ಚಿತ್ರ ಮರು-ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿದ್ದು, ಈಗ ಸೀಕ್ವೆಲ್ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

