
ಸಿಎಂ ವಿಜಯ್ ವಿಚ್ಛೇದನ ಅರ್ಜಿ ವಿಚಾರಣೆ ಆಗಸ್ಟ್ 7ಕ್ಕೆ ಮುಂದೂಡಿಕೆಯಾಗಿದೆ.
ಸಿಎಂ ವಿಜಯ್ ವಿಚ್ಛೇದನ ಅರ್ಜಿ ವಿಚಾರಣೆ ಆಗಸ್ಟ್ 7ಕ್ಕೆ ಮುಂದೂಡಿಕೆ
ತಮಿಳುನಾಡು ಸಿಎಂ ವಿಜಯ್ ಮತ್ತು ಸಂಗೀತ ಸ್ವರ್ಣಲಿಂಗಂ ಅವರ ವಿಚ್ಛೇದನ ಅರ್ಜಿ ವಿಚಾರಣೆಯನ್ನು ಚೆಂಗಲ್ಪಟ್ಟು ಮಹಿಳಾ ನ್ಯಾಯಾಲಯವು ಯಾವುದೇ ಪ್ರಮುಖ ನಿರ್ಧಾರವಿಲ್ಲದೆ ಆಗಸ್ಟ್ 7 ಕ್ಕೆ ಮುಂದೂಡಿದೆ.
ತಮಿಳುನಾಡು ಮುಖ್ಯಮಂತ್ರಿ ಹಾಗೂ ಖ್ಯಾತ ನಟ ವಿಜಯ್ ಮತ್ತು ಅವರ ಪತ್ನಿ ಸಂಗೀತ ಅವರ ನಡುವಿನ ವಿಚ್ಛೇದನ ಪ್ರಕರಣದ ವಿಚಾರಣೆಯನ್ನು ಚೆಂಗಲ್ಪಟ್ಟು ಮಹಿಳಾ ನ್ಯಾಯಾಲಯವು ಆಗಸ್ಟ್ 7ಕ್ಕೆ ಮುಂದೂಡಿದೆ.
ಸೋಮವಾರ ನಡೆದ ನ್ಯಾಯಾಲಯದ ಕಲಾಪದಲ್ಲಿ ಯಾವುದೇ ಮಹತ್ತರ ನಿರ್ಧಾರ ಅಥವಾ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಈ ಮುಂದೂಡಿಕೆ ಮಾಡಲಾಗಿದೆ. ನ್ಯಾಯಾಲಯದ ಕಟ್ಟುನಿಟ್ಟಿನ ಆದೇಶದ ಮೇರೆಗೆ ಸಿಎಂ ವಿಜಯ್ ಮತ್ತು ಪತ್ನಿ ಸಂಗೀತ ಇಬ್ಬರೂ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ತಮ್ಮ 27 ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗಾಣಿಸಲು ಸಂಗೀತ ಅವರು ಈ ವಿಚ್ಛೇದನ ಅರ್ಜಿಯನ್ನು ಸಲ್ಲಿಸಿದ್ದಾರೆ.
ಸಂಗೀತ ಅವರು ಸಲ್ಲಿಸಿರುವ ಅರ್ಜಿಯಲ್ಲಿ ವಿಜಯ್ ವಿರುದ್ಧ ಪರಸ್ತ್ರೀ ಸಂಬಂಧ ಮತ್ತು ಮಾನಸಿಕ ಕಿರುಕುಳದ ಗಂಭೀರ ಆರೋಪಗಳನ್ನು ಮಾಡಿದ್ದಾರೆ. 2021ರ ಏಪ್ರಿಲ್‌ನಲ್ಲಿ ವಿಜಯ್ ಅವರಿಗೆ ಮತ್ತೊಬ್ಬ ನಟಿಯೊಂದಿಗೆ ಸಂಬಂಧವಿರುವುದು ತಮಗೆ ತಿಳಿಯಿತು ಎಂದು ಸಂಗೀತ ಉಲ್ಲೇಖಿಸಿದ್ದಾರೆ. ಈ ಸಂಬಂಧವನ್ನು ಕಡಿದುಕೊಳ್ಳುವುದಾಗಿ ವಿಜಯ್ ಭರವಸೆ ನೀಡಿದ್ದರೂ, ಅದನ್ನು ಮುಂದುವರಿಸಿದ್ದಲ್ಲದೆ ಸಾರ್ವಜನಿಕವಾಗಿ ಆಕೆಯೊಂದಿಗೆ ಸುತ್ತಾಡಿದ್ದಾರೆ ಮತ್ತು ಆ ನಟಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತಮಗೆ ಹಾಗೂ ಮಕ್ಕಳಿಗೆ ತೀವ್ರ ಮುಜುಗರ ಉಂಟುಮಾಡಿದ್ದಾರೆ ಎಂದು ಸಂಗೀತ ಅರ್ಜಿಯಲ್ಲಿ ದೂರಿದ್ದಾರೆ.
ದಾಂಪತ್ಯದಲ್ಲಿ ಎದುರಾದ ಬಿರುಕನ್ನು ಸರಿಪಡಿಸಲು 2024ರ ಆಗಸ್ಟ್‌ನಿಂದ 2025ರ ಫೆಬ್ರವರಿ ನಡುವೆ ಹಲವು ಬಾರಿ ಕಾನೂನು ನೋಟಿಸ್ ಹಾಗೂ ವೈಯಕ್ತಿಕ ಮಾತುಕತೆಗಳ ಮೂಲಕ ಪ್ರಯತ್ನ ನಡೆಸಲಾಗಿತ್ತು. ಕೊನೆಯದಾಗಿ 2025ರ ನವೆಂಬರ್‌ನಲ್ಲಿ ಇಬ್ಬರ ನಡುವೆ ನಡೆದ ಸಭೆಯೂ ವಿಫಲವಾಗಿದ್ದು, ಇಬ್ಬರ ನಡುವಿನ ಸಂಬಂಧ ಸಂಪೂರ್ಣವಾಗಿ ಹಳಸಿದೆ ಎಂದು ಸಂಗೀತ ತಿಳಿಸಿದ್ದಾರೆ. ಇದಕ್ಕೂ ಮುನ್ನ ಭದ್ರತಾ ಕಾರಣಗಳನ್ನು ನೀಡಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಲು ವಕೀಲರು ಕೋರಿದ್ದರೂ, ನ್ಯಾಯಾಲಯ ಅದನ್ನು ತಿರಸ್ಕರಿಸಿ ಖುದ್ದಾಗಿ ಹಾಜರಾಗುವಂತೆ ಸೂಚಿಸಿತ್ತು. 1999ರಲ್ಲಿ ವಿವಾಹವಾಗಿದ್ದ ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

