ಪ್ರಭಾಸ್‌ ನಟನೆಯ ರಾಜಾ ಸಾಬ್ ಸಿನಿಮಾ ಈಗ ಒಟಿಟಿಯಲ್ಲಿ
x

ಕೊನೆಗೂ ಓಟಿಟಿಗೆ ಬಂದ 'ರಾಜಾ ಸಾಬ್

ಪ್ರಭಾಸ್‌ ನಟನೆಯ 'ರಾಜಾ ಸಾಬ್' ಸಿನಿಮಾ ಈಗ ಒಟಿಟಿಯಲ್ಲಿ

'ದಿ ರಾಜಾ ಸಾಬ್' ಸಿನಿಮಾ ಇಂದಿನಿಂದ ಜಿಯೋ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುತ್ತಿದೆ. ಚಿತ್ರಮಂದಿರದಲ್ಲಿ ಇರದಿದ್ದ ಕೆಲವು ಹೆಚ್ಚುವರಿ ದೃಶ್ಯಗಳನ್ನು ಸೇರಿಸಿ 'ಎಕ್ಸ್‌ಟೆಂಡೆಡ್ ಕಟ್' ಆವೃತ್ತಿಯನ್ನು ಬಿಡುಗಡೆ ಮಾಡಲಾಗುತ್ತಿದೆ.


Click the Play button to hear this message in audio format

ಖ್ಯಾತ ನಟ ಪ್ರಭಾಸ್ ಅಭಿನಯದ 'ದಿ ರಾಜಾ ಸಾಬ್' ಈಗ ಓಟಿಟಿಗೆ ಲಗ್ಗೆ ಇಟ್ಟಿದೆ. ಚಿತ್ರಮಂದಿರಗಳಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದಿದ್ದ ಈ ಹಾರರ್-ಕಾಮಿಡಿ ಸಿನಿಮಾ ಈಗ ಹೆಚ್ಚಿನ ದೃಶ್ಯಗಳನ್ನೊಳಗೊಂಡ 'ಎಕ್ಸ್‌ಟೆಂಡೆಡ್ ಕಟ್' ಆವೃತ್ತಿಯೊಂದಿಗೆ ಸ್ಟ್ರೀಮಿಂಗ್ ಆರಂಭಿಸಿದೆ.

ಜಿಯೋ ಹಾಟ್‌ಸ್ಟಾರ್ ವೇದಿಕೆಯಲ್ಲಿ ಫೆಬ್ರವರಿ 6 ರಿಂದ ಸಿನಿಮಾ ಪ್ರಸಾರವಾಗುತ್ತಿದೆ. ಬಿಡುಗಡೆಗೂ ಮುನ್ನವೇ ಈ ಬಗ್ಗೆ ಭಾರಿ ಕುತೂಹಲ ಮೂಡಿಸಿದ್ದ ಓಟಿಟಿ ಸಂಸ್ಥೆಯು, "ತಾಂತ್ರಿಕ ಕಾರಣಗಳಿಂದಾಗಿ ಚಿತ್ರಮಂದಿರದಲ್ಲಿ ಬಿಟ್ಟುಹೋಗಿದ್ದ ದೃಶ್ಯಗಳನ್ನು ಒಳಗೊಂಡ ಎಕ್ಸ್‌ಟೆಂಡೆಡ್ ಕಟ್ ಅನ್ನು ಈಗ ಸೇರಿಸಲಾಗಿದೆ" ಎಂದು ಘೋಷಿಸುವ ಮೂಲಕ ಅಭಿಮಾನಿಗಳ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ಅಷ್ಟೇ ಅಲ್ಲದೆ, ಪ್ರಭಾಸ್ ಅವರ ಈ ಚಿತ್ರವನ್ನು ನೋಡಲು ಏಕಕಾಲಕ್ಕೆ ಹೆಚ್ಚಿನ ಬಳಕೆದಾರರು ಲಾಗಿನ್ ಆಗುತ್ತಿರುವುದರಿಂದ ತನ್ನ ಸರ್ವರ್‌ಗಳ ಸಾಮರ್ಥ್ಯವನ್ನೂ ಹೆಚ್ಚಿಸಿರುವುದಾಗಿ ಸಂಸ್ಥೆ ತಿಳಿಸಿದೆ.

ನಿರ್ದೇಶಕ ಮಾರುತಿ ಮತ್ತು ಪ್ರಭಾಸ್ ಅವರ ಕಾಂಬಿನೇಶನ್‌ನಲ್ಲಿ ಬಂದ ಮೊದಲ ಸಿನಿಮಾ ಇದಾಗಿದ್ದು, ಮೂವರು ನಾಯಕಿಯರು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ನಿಧಿ ಅಗರ್ವಾಲ್ 'ಬೆಸ್ಸಿ' ಎಂಬ ಸನ್ಯಾಸಿನಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಮಾಳವಿಕಾ ಮೋಹನನ್ ಈ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ರಿಧಿ ಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಾರರ್ ಮತ್ತು ಕಾಮಿಡಿ ಸಮ್ಮಿಶ್ರಣದ ಈ ಕಥೆಯಲ್ಲಿ ಪ್ರಭಾಸ್ ಅವರ ವಿಭಿನ್ನ ಮ್ಯಾನರಿಸಂ ಅಭಿಮಾನಿಗಳಿಗೆ ಹಬ್ಬದೂಟ ನೀಡಿದೆ.

ಚಿತ್ರಮಂದಿರಗಳಲ್ಲಿ ಚಿತ್ರದ ಓಟ ಬಹುತೇಕ ಮುಕ್ತಾಯದ ಹಂತ ತಲುಪಿದೆ. ಇತ್ತೀಚಿನ ದಿನಗಳಲ್ಲಿ ಚಿತ್ರದ ಗಳಿಕೆಯಲ್ಲಿ ಭಾರಿ ಕುಸಿತ ಕಂಡುಬಂದಿದೆ. ಈ ಸಿನಿಮಾದ ಒಟ್ಟು ಜಾಗತಿಕ ಗಳಿಕೆಯಲ್ಲಿ 208.38 ಕೋಟಿ ರೂ., ಭಾರತದಲ್ಲಿ 146.03 ಕೋಟಿ ರೂ. ನಿವ್ವಳ ಗಳಿಕೆ ಹಾಗೂ 34.25 ಕೋಟಿ ರೂ. ವಿದೇಶದಲ್ಲಿ ಗಳಿಕೆಯಾಗಿದೆ.

ಸದ್ದು ಮಾಡದ ಸಿನಿಮಾ

ಹಿಂದಿ ಮಾರುಕಟ್ಟೆಯಲ್ಲಿ ಪ್ರಭಾಸ್ ಅವರಿಗೆ ದೊಡ್ಡ ಅಭಿಮಾನಿ ಬಳಗವಿದ್ದರೂ, ಅಲ್ಲಿ ಚಿತ್ರವು ನಿರೀಕ್ಷಿತ ಮಟ್ಟದಲ್ಲಿ ಸದ್ದು ಮಾಡಿಲ್ಲ. ಹಿಂದಿ ಆವೃತ್ತಿಯು ಸುಮಾರು ರೂ. 24.22 ಕೋಟಿ ರೂ. ಗಳಿಕೆಯನ್ನಷ್ಟೇ ದಾಖಲಿಸಿದೆ. ಚಿತ್ರಮಂದಿರದಲ್ಲಿ ಮಿಸ್ ಆಗಿದ್ದ ಪ್ರಭಾಸ್ ಅವರ ಕೆಲವು ಹಳೆಯ ಗೆಟಪ್‌ಗಳ ದೃಶ್ಯಗಳು ಈಗ ಎಕ್ಸ್‌ಟೆಂಡೆಡ್ ಕಟ್‌ನಲ್ಲಿ ಲಭ್ಯವಿರುವುದು ಚರ್ಚೆಗೆ ಗ್ರಾಸವಾಗಿದೆ.

ಸದ್ಯ ಪ್ರಭಾಸ್‌ ನಟನೆಯ ಹನು ರಾಘವಪುಡಿ ನಿರ್ದೇಶನದ 'ಫೌಜಿ' ಚಿತ್ರವು ಹೆಚ್ಚು ಗಮನ ಸೆಳೆಯುತ್ತಿದ್ದು, ಇದು 1940ರ ಯುದ್ಧದ ಹಿನ್ನೆಲೆಯಲ್ಲಿ ನಡೆಯುವ ಪ್ರೇಮಕಥೆಯಾಗಿದೆ. ಈ ಚಿತ್ರದಲ್ಲಿ ಪ್ರಭಾಸ್ ಸೈನಿಕನಾಗಿ ಕಾಣಿಸಿಕೊಳ್ಳಲಿದ್ದು,ದಸರಾ ಹಬ್ಬದ ವೇಳೆಗೆ ತೆರೆಗೆ ಬರುವ ನಿರೀಕ್ಷೆಯಿದೆ. ಈ ಸಿನಿಮಾ ಮೂಲಕ ಇಮಾನ್ವಿ ತೆಲುಗು ಚಿತ್ರರಂಗಕ್ಕೆ ನಾಯಕಿಯಾಗಿ ಪರಿಚಯವಾಗುತ್ತಿದ್ದಾರೆ.

'ಅನಿಮಲ್' ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಸ್ಪಿರಿಟ್' ಸಿನಿಮಾದಲ್ಲೂ ಪ್ರಭಾಸ್‌ ನಟಿಸುತ್ತಿದ್ದು, ಈ ಚಿತ್ರದಲ್ಲಿ ಪ್ರಭಾಸ್ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸುತ್ತಿದ್ದು, ಸಿನಿಮಾವು 2027ರ ಮಾರ್ಚ್ 5ರಂದು ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿದೆ. ಇದಲ್ಲದೆ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್: ಪಾರ್ಟ್ 2 - ಶೌರ್ಯಾಂಗ ಪರ್ವ' ಚಿತ್ರದ ಕೆಲಸಗಳು ಸದ್ದಿಲ್ಲದೆ ನಡೆಯುತ್ತಿದ್ದು, ಮೊದಲ ಭಾಗದ ಯಶಸ್ಸಿನ ನಂತರ ಎರಡನೇ ಭಾಗದ ಮೇಲೆ ಭಾರಿ ನಿರೀಕ್ಷೆಗಳಿವೆ. ಇದು 2026ರ ಅಂತ್ಯದ ವೇಳೆಗೆ ಚಿತ್ರಮಂದಿರಗಳಿಗೆ ಬರಬಹುದು ಎಂದು ಅಂದಾಜಿಸಲಾಗಿದೆ.

ಭಾರತೀಯ ಚಿತ್ರರಂಗದ ಅತ್ಯಂತ ದೊಡ್ಡ ಸೈನ್ಸ್ ಫಿಕ್ಷನ್ ಸಿನಿಮಾವಾದ 'ಕಲ್ಕಿ 2898 AD' ನ ಎರಡನೇ ಭಾಗವು ಸಹ ಸಾಲಿನಲ್ಲಿ ನಿಂತಿದೆ. ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರದ ಎರಡನೇ ಭಾಗದ ಚಿತ್ರೀಕರಣವು 2026ರ ಫೆಬ್ರವರಿಯಲ್ಲಿ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ 'ಹನುಮಾನ್' ಚಿತ್ರದ ನಿರ್ದೇಶಕ ಪ್ರಶಾಂತ್ ವರ್ಮ ಅವರೊಂದಿಗೂ ಪ್ರಭಾಸ್ ಒಂದು ಹೊಸ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುವ ಸಾಧ್ಯತೆಯಿದ್ದು, ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಮಾಹಿತಿ ಹೊರಬೀಳಲಿದೆ.

Read More
Next Story