Thalapathy Vijays TVK|DMK ಕೋಟೆಗೆ ವಿಜಯ್ ಎಂಟ್ರಿ: 1977ರ ಎಂ.ಜಿ.ಆರ್ ಮ್ಯಾಜಿಕ್ ರಿಪೀಟ್ ಮಾಡಿದ ದಳಪತಿ
x

ತಮಿಳುನಾಡು ರಾಜಕೀಯದಲ್ಲಿ ವಿಜಯ್ ಅಲೆ

Thalapathy Vijay's TVK|DMK ಕೋಟೆಗೆ ವಿಜಯ್ ಎಂಟ್ರಿ: 1977ರ ಎಂ.ಜಿ.ಆರ್ ಮ್ಯಾಜಿಕ್ ರಿಪೀಟ್ ಮಾಡಿದ ದಳಪತಿ

ನಟ ವಿಜಯ್ ಅವರ 603 ಕೋಟಿ ರೂ. ಆಸ್ತಿ ವಿವರ, ಐಷಾರಾಮಿ ಕಾರುಗಳು ಮತ್ತು ತಮಿಳುನಾಡು ರಾಜಕೀಯದಲ್ಲಿ ಟಿವಿಪಿ ಪಕ್ಷದ ಉದಯದ ಸಮಗ್ರ ಮಾಹಿತಿ ಇಲ್ಲಿದೆ. ಬದಲಾದ ರಾಜಕೀಯದ ಸಂಪೂರ್ಣ ವರದಿ ನೋಡಿ.


Click the Play button to hear this message in audio format

2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಭರ್ಜರಿ ಗೆಲುವು ಸಾಧಿಸಿದ್ದಾರೆ.‌ ಆ ಮೂಲಕ ಅವರು ಅವರು ಕಳೆದ 49 ವರ್ಷಗಳಲ್ಲಿ ಯಾರೂ ಮಾಡದ ಸಾಧನೆಯನ್ನು ಮಾಡಿದಂತಾಗುತ್ತದೆ. 1977 ರಲ್ಲಿ ಎಂ.ಜಿ. ರಾಮಚಂದ್ರನ್ (ಎಂ.ಜಿ.ಆರ್) ಅವರು ರಾಜಕೀಯ ಇತಿಹಾಸ ಬರೆದ ನಂತರ, ನೇರವಾಗಿ ನಟನೆಯಿಂದ ಬಂದು ಮುಖ್ಯಮಂತ್ರಿಯಾಗುವ ಮೊದಲ ವ್ಯಕ್ತಿ ಇವರಾಗಲಿದ್ದಾರೆ.

ತಮಿಳುನಾಡಿನ ಅಧಿಕಾರ ಕೇಂದ್ರವಾದ 'ಫೋರ್ಟ್ ಸೇಂಟ್ ಜಾರ್ಜ್' ಅನ್ನು ಸಿನಿಮಾ ತಾರೆಗಳು ನೇರವಾಗಿ ಗೆದ್ದ ಕೊನೆಯ ಸಂದರ್ಭ ಎಂದರೆ ಅದು 1977. ಅಂದು ಎಂ.ಜಿ.ಆರ್ ಅವರು ತಮ್ಮ ಅಭಿಮಾನಿ ಬಳಗವನ್ನು ಒಂದು ಬಲಿಷ್ಠ ರಾಜಕೀಯ ಯಂತ್ರವಾಗಿ ಪರಿವರ್ತಿಸಿದ್ದರು. ಅದಾದ ನಂತರ ಜಯಲಲಿತಾ ಅವರು ಮುಖ್ಯಮಂತ್ರಿಯಾದರೂ, ಅವರು ಎಂ.ಜಿ.ಆರ್ ಕಟ್ಟಿದ್ದ ಪಕ್ಷದ ಮೂಲಕ ಅಧಿಕಾರಕ್ಕೆ ಬಂದರೇ ಹೊರತು, ಹೊಸ ಪಕ್ಷದ ಮೂಲಕ ಅಲ್ಲ.

ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' (ಟಿವಿಕೆ) ಸುಮಾರು 110 ಸ್ಥಾನಗಳನ್ನು ಗೆದ್ದುಕೊಂಡಿದೆ. 234 ಸದಸ್ಯರ ಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ 118 ಸ್ಥಾನಗಳ ಅಗತ್ಯವಿದ್ದು, ಕೇವಲ ಎರಡು ವರ್ಷ ಹಳೆಯದಾದ ಪಕ್ಷವೊಂದು ಈ ಮಟ್ಟದ ಸಾಧನೆ ಮಾಡುತ್ತಿರುವುದು ರಾಜಕೀಯ ತಜ್ಞರ ಹುಬ್ಬೇರಿಸಿದೆ.

ಸಿನಿಮಾದಿಂದ ರಾಜಕೀಯದವರೆಗೆ

ಚಂದ್ರಶೇಖರ್ ಜೋಸೆಫ್ ವಿಜಯ್ ಅವರು ಜೂನ್ 22, 1974 ರಂದು ಜನಿಸಿದರು. ಇವರ ತಂದೆ ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಎಸ್.ಎ. ಚಂದ್ರಶೇಖರ್ ಮತ್ತು ತಾಯಿ ಹಿನ್ನೆಲೆ ಗಾಯಕಿ ಶೋಭಾ ಚಂದ್ರಶೇಖರ್. ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ ವಿಜಯ್, ನಂತರದ ದಿನಗಳಲ್ಲಿ ತಮ್ಮ ಅದ್ಭುತ ನಟನೆ ಮತ್ತು ನೃತ್ಯದ ಮೂಲಕ ದಕ್ಷಿಣ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಾಗಿ ಬೆಳೆದರು. ಮೂರು ದಶಕಗಳ ಕಾಲ ಚಿತ್ರರಂಗವನ್ನು ಆಳಿದ ಇವರು, ಈಗ ಜನರ ಕಷ್ಟಗಳಿಗೆ ಸ್ಪಂದಿಸಲು ರಾಜಕೀಯ ರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.

ವ್ಯವಸ್ಥಿತ ರಾಜಕೀಯ ತಯಾರಿ

ವಿಜಯ್ ಅವರ ಈ ಯಶಸ್ಸು ಆಕಸ್ಮಿಕವೇನಲ್ಲ. ಅವರು 2009 ರಲ್ಲೇ ತಮ್ಮ ಅಭಿಮಾನಿ ಸಂಘಗಳನ್ನು 'ವಿಜಯ್ ಮಕ್ಕಳ್ ಇಯಕ್ಕಂ' ಹೆಸರಿನಲ್ಲಿ ಸಂಘಟಿಸಿ, ಸೇವಾ ಕಾರ್ಯಗಳ ಮೂಲಕ ಜನರ ಹತ್ತಿರವಾಗಿದ್ದರು. 2021 ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅವರ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದಾಗಲೇ ಅವರ ರಾಜಕೀಯ ಪ್ರವೇಶದ ಮುನ್ಸೂಚನೆ ಸಿಕ್ಕಿತ್ತು.

2024 ರಲ್ಲಿ ಅಧಿಕೃತವಾಗಿ ಪಕ್ಷ ಘೋಷಿಸಿದಾಗ, ಅವರು ಯಾವುದೇ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಸ್ಪರ್ಧಿಸುವ ಧೈರ್ಯ ತೋರಿದರು. ಅಷ್ಟೇ ಅಲ್ಲದೆ, ತಮ್ಮ 30 ವರ್ಷಗಳ ಯಶಸ್ವಿ ಸಿನಿಮಾ ವೃತ್ತಿಜೀವನಕ್ಕೆ ವಿದಾಯ ಹೇಳಿ ಸಂಪೂರ್ಣವಾಗಿ ರಾಜಕೀಯಕ್ಕೆ ಸಮರ್ಪಿಸಿಕೊಂಡರು.

ಬಾಲನಟನಾಗಿ ಸಿನಿಮಾರಂಗ ಪ್ರವೇಶ

ವಿಜಯ್ ಅವರ ಸಿನಿಮಾ ಪಯಣ 1984ರಲ್ಲಿ 'ವೆಟ್ರಿ' ಚಿತ್ರದ ಮೂಲಕ ಬಾಲನಟನಾಗಿ ಆರಂಭವಾಯಿತು. ತಮ್ಮ ತಂದೆ ಎಸ್.ಎ. ಚಂದ್ರಶೇಖರ್ ಅವರ ನಿರ್ದೇಶನದ ಹಲವು ಚಿತ್ರಗಳಲ್ಲಿ ಬಾಲನಟನಾಗಿ ಕಾಣಿಸಿಕೊಂಡ ವಿಜಯ್, ನಂತರ 1992ರಲ್ಲಿ 'ನಾಳಯ್ಯ ತೀರ್ಪು' ಚಿತ್ರದ ಮೂಲಕ ಹದಿನೆಂಟನೇ ವಯಸ್ಸಿಗೆ ನಾಯಕ ನಟನಾಗಿ ಪದಾರ್ಪಣೆ ಮಾಡಿದರು. ಆರಂಭದ ಕೆಲವು ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಅಷ್ಟಾಗಿ ಸದ್ದು ಮಾಡದಿದ್ದರೂ, ವಿಜಯ್ ತಮ್ಮ ಪ್ರಯತ್ನವನ್ನು ಕೈಬಿಡಲಿಲ್ಲ.

ಲವರ್ ಬಾಯ್ ಇಮೇಜ್

1996ರಲ್ಲಿ ತೆರೆಕಂಡ 'ಪೂವೆ ಉನಕ್ಕಾಗ' ಚಿತ್ರ ವಿಜಯ್ ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿತು. ಈ ಚಿತ್ರದ ಮೂಲಕ ಅವರು ಮನೆಮಾತಾದರು ಮತ್ತು ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡುತ್ತಾ 'ಲವರ್ ಬಾಯ್' ಇಮೇಜ್ ಗಳಿಸಿಕೊಂಡರು. 'ಕಾದಲುಕ್ಕು ಮರಿಯಾದೈ', 'ತುಳ್ಳಾದ ಮನಮುಮ್ ತುಳ್ಳುಮ್', 'ಖುಷಿ' ಮತ್ತು 'ಪ್ರಿಯಮಾನವಳೇ' ಅಂತಹ ಚಿತ್ರಗಳು ವಿಜಯ್ ಅವರ ಜನಪ್ರಿಯತೆಯನ್ನು ತಮಿಳುನಾಡಿನಾದ್ಯಂತ ಪಸರಿಸುವಂತೆ ಮಾಡಿದವು.

ಮಾಸ್ ಹೀರೋ ಆಗಿ ಬದಲಾದ 'ದಳಪತಿ'

2003ರಲ್ಲಿ ಬಿಡುಗಡೆಯಾದ 'ತಿರುಮಲೈ' ಚಿತ್ರ ವಿಜಯ್ ಅವರನ್ನು ಆಕ್ಷನ್ ಹೀರೋ ಆಗಿ ರೂಪಿಸಿತು. ಅಲ್ಲಿಂದ ಅವರ ಆನ್-ಸ್ಕ್ರೀನ್ ವ್ಯಕ್ತಿತ್ವ ಸಂಪೂರ್ಣವಾಗಿ ಬದಲಾಯಿತು. 2004ರಲ್ಲಿ ತೆರೆಕಂಡ 'ಗಿಲ್ಲಿ' ಸಿನಿಮಾ ತಮಿಳು ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆ ಬರೆಯಿತು ಮತ್ತು 50 ಕೋಟಿ ರೂಪಾಯಿ ಗಳಿಸಿದ ಮೊದಲ ತಮಿಳು ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ನಂತರ 'ಪೊಕ್ಕಿರಿ' ಮತ್ತು 'ತಿರುಪಾಚಿ' ಚಿತ್ರಗಳ ಮೂಲಕ ವಿಜಯ್ ಮಾಸ್ ಪ್ರೇಕ್ಷಕರ ಮನ ಗೆದ್ದರು.

ರಾಜಕೀಯ ಸಂದೇಶ ಸಾರುವ ಸಿನಿಮಾಗಳತ್ತ ವಿಜಯ್‌

ಕಳೆದ ಒಂದು ದಶಕದಲ್ಲಿ ವಿಜಯ್ ಅವರ ಸಿನಿಮಾಗಳು ಕೇವಲ ಮನರಂಜನೆಗೆ ಸೀಮಿತವಾಗದೆ ಸಾಮಾಜಿಕ ಮತ್ತು ರಾಜಕೀಯ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಿವೆ. 'ತುಪ್ಪಾಕಿ', 'ಕತ್ತಿ', 'ಮೆರ್ಸಲ್', 'ಸರ್ಕಾರ್' ಮತ್ತು 'ಬಿಗಿಲ್' ಅಂತಹ ಚಿತ್ರಗಳು ವಿಜಯ್ ಅವರ ಮಾರುಕಟ್ಟೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದವು. ಇತ್ತೀಚಿನ 'ಮಾಸ್ಟರ್', 'ಲಿಯೋ' ಮತ್ತು 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ನೂರಾರು ಕೋಟಿ ಕೊಳ್ಳೆಹೊಡೆದಿವೆ.

ಸಿನಿಮಾ ರಂಗಕ್ಕೆ ವಿದಾಯದ ಸೂಚನೆ

ಸದ್ಯ ವಿಜಯ್ ಅವರು ತಮ್ಮ 69ನೇ ಚಿತ್ರದ ನಂತರ ಚಿತ್ರರಂಗದಿಂದ ಪೂರ್ಣ ಪ್ರಮಾಣದ ವಿರಾಮ ಪಡೆದು ರಾಜಕೀಯದಲ್ಲಿ ಸಕ್ರಿಯರಾಗುವುದಾಗಿ ಘೋಷಿಸಿದ್ದಾರೆ. ಸುಮಾರು 69 ಚಿತ್ರಗಳಲ್ಲಿ ನಾಯಕನಾಗಿ ನಟಿಸಿರುವ ಅವರು, ಶಿಸ್ತುಬದ್ಧ ಜೀವನ ಮತ್ತು ನೃತ್ಯದ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಸಿನಿಮಾ ರಂಗದಲ್ಲಿ ಅವರು ನಿರ್ಮಿಸಿರುವ ಈ ದೈತ್ಯ ಸಾಮ್ರಾಜ್ಯವು ಅವರಿಗೆ ರಾಜಕೀಯ ಜೀವನದಲ್ಲೂ ದೊಡ್ಡ ಶಕ್ತಿಯಾಗಿ ನಿಂತಿದೆ.

ವಿಜಯ್ ಅವರ ಒಟ್ಟು ಆಸ್ತಿ ಎಷ್ಟು?

ಸಿನಿಮಾ ಸಂಭಾವನೆಯೇ ಇವರ ಪ್ರಮುಖ ಆದಾಯದ ಮೂಲವಾಗಿದ್ದು ಪ್ರತಿ ಸಿನಿಮಾಗೆ 100 ರಿಂದ 250 ಕೋಟಿ ರೂಪಾಯಿಗಳವರೆಗೆ ಪಡೆಯುತ್ತಾರೆ ಎಂದು ವರದಿಯಾಗಿದೆ. ಇದರ ಜೊತೆಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿ ಹಾಗೂ ವಿವಿಧ ಉದ್ದಿಮೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಕೋಟ್ಯಂತರ ರೂಪಾಯಿ ಗಳಿಸುತ್ತಿದ್ದಾರೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ ಪ್ರಕಾರ ವಿಜಯ್ ಅವರು ಕೋಟಿಗಟ್ಟಲೆ ಆಸ್ತಿಯನ್ನು ಹೊಂದಿದ್ದಾರೆ. ಇವರ ಒಟ್ಟು ಆಸ್ತಿ ಸುಮಾರು 603 ಕೋಟಿ ರೂಪಾಯಿಗಳಿಗೂ ಅಧಿಕ ಎಂದು ಅಂದಾಜಿಸಲಾಗಿದೆ. ಇವರ ಬಳಿ ಸುಮಾರು 404 ಕೋಟಿ ರೂಪಾಯಿಗಳ ಚರಾಸ್ತಿ ಇದ್ದು, ಇದರಲ್ಲಿ ಬ್ಯಾಂಕ್ ಠೇವಣಿಗಳು ಮತ್ತು ಹೂಡಿಕೆಗಳು ಸೇರಿವೆ. ಇನ್ನು ಸ್ಥಿರಾಸ್ತಿಯ ಬಗ್ಗೆ ನೋಡುವುದಾದರೆ, ಚೆನ್ನೈನ ನೀಲಂಕರೈನಲ್ಲಿರುವ ಐಷಾರಾಮಿ ಬಂಗಲೆ ಸೇರಿದಂತೆ ಸುಮಾರು 198 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಹೊಂದಿದ್ದಾರೆ. ಇದಲ್ಲದೆ ಚೆನ್ನೈನ ವಿವಿಧ ಭಾಗಗಳಲ್ಲಿ ವಾಣಿಜ್ಯ ಸಂಕೀರ್ಣಗಳು ಮತ್ತು ಕೊಡೈಕೆನಾಲ್‌ನಂತಹ ಪ್ರವಾಸಿ ತಾಣಗಳಲ್ಲಿ ಭೂಮಿಯನ್ನು ಹೊಂದಿದ್ದಾರೆ.

ಐಷಾರಾಮಿ ಕಾರುಗಳು

ವಿಜಯ್ ಅವರ ಕಾರುಗಳ ಸಂಗ್ರಹವು ಅತ್ಯಂತ ಶ್ರೀಮಂತವಾಗಿದ್ದು, ಅವರ ಬಳಿ ಬಿಎಂಡಬ್ಲ್ಯೂ ಐ7, ಟೊಯೋಟಾ ವೆಲ್‌ಫೈರ್, ಬಿಎಂಡಬ್ಲ್ಯೂ 530 ಮತ್ತು ಟೊಯೋಟಾ ಲೆಕ್ಸಸ್‌ನಂತಹ ದುಬಾರಿ ಕಾರುಗಳಿವೆ. ಇವುಗಳ ಜೊತೆಗೆ ಸುಮಾರು 883 ಗ್ರಾಂ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಹೊಂದಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ, 2024-25ರ ಹಣಕಾಸು ವರ್ಷದಲ್ಲಿ ಅವರ ವಾರ್ಷಿಕ ಆದಾಯ ಸುಮಾರು 184 ಕೋಟಿ ರೂಪಾಯಿಗಳಷ್ಟಿದೆ.

ಕುಟುಂಬ ಮತ್ತು ವೈಯಕ್ತಿಕ ಜೀವನ

ವಿಜಯ್ ಅವರು 1999 ರಲ್ಲಿ ಸಂಗೀತಾರನ್ನು ವಿವಾಹವಾದರು ಮತ್ತು ಇವರಿಗೆ ಜೇಸನ್ ಸಂಜಯ್ ಹಾಗೂ ದಿವ್ಯಾ ಸಾಶಾ ಎಂಬ ಇಬ್ಬರು ಮಕ್ಕಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇವರ ವೈಯಕ್ತಿಕ ಜೀವನದ ಬಗ್ಗೆ ಹಲವು ಸುದ್ದಿಗಳು ಹರಿದಾಡುತ್ತಿದ್ದರೂ, ವಿಜಯ್ ಅವರು ಸಂಪೂರ್ಣವಾಗಿ ರಾಜಕೀಯ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಬದಲಾದ ರಾಜಕೀಯ ವ್ಯಾಕರಣ

ಟಿವಿಕೆ ಪಕ್ಷವು ಕೇವಲ ಅಭಿಮಾನಿ ಸಂಘವಾಗಿ ಉಳಿಯದೆ, ಜಿಲ್ಲಾ ಮತ್ತು ಬೂತ್ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿಕೊಂಡು ವೃತ್ತಿಪರವಾಗಿ ಕೆಲಸ ಮಾಡಿದೆ. ಶಿಕ್ಷಣ, ಉದ್ಯೋಗ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತದ ಭರವಸೆಗಳು ಯುವ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ. 2025 ರಲ್ಲಿ ಕರೂರ್‌ನಲ್ಲಿ ನಡೆದ ಕಾಲ್ತುಳಿತದ ಘಟನೆಯನ್ನು ಅವರು ನಿಭಾಯಿಸಿದ ರೀತಿ, ಒಬ್ಬ ಜವಾಬ್ದಾರಿಯುತ ನಾಯಕನಾಗಿ ಅವರ ಮೇಲಿನ ಭರವಸೆಯನ್ನು ಹೆಚ್ಚಿಸಿತು.

ಇಂದಿನ ಫಲಿತಾಂಶಗಳು ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ದಶಕಗಳ ದ್ವಿಪಕ್ಷೀಯ ರಾಜಕಾರಣಕ್ಕೆ ಅಂತ್ಯ ಹಾಡಿವೆ. ವಿಜಯ್ ಅವರ ಉದಯವು ರಾಜ್ಯದಲ್ಲಿ ಮೂರನೇ ದೊಡ್ಡ ಶಕ್ತಿಯನ್ನು ಹುಟ್ಟುಹಾಕಿದೆ.

ಎಂ.ಜಿ.ಆರ್ ಕಾಲದ ರಾಜಕೀಯಕ್ಕೂ ಇಂದಿನ ವಿಜಯ್ ರಾಜಕೀಯಕ್ಕೂ ವ್ಯತ್ಯಾಸವಿದೆ. ಅಂದು ಎಂ.ಜಿ.ಆರ್ ಅವರ ವ್ಯಕ್ತಿತ್ವದ ಮೇಲೆ ಮತಗಳು ಬೀಳುತ್ತಿದ್ದರೆ, ಇಂದು ವಿಜಯ್ ಅವರಲ್ಲಿ ಜನರು ಬದಲಾವಣೆಯ ಕಿಡಿಯನ್ನು ಕಾಣುತ್ತಿದ್ದಾರೆ. ವಿಜಯ್ ಅವರು ನೇರವಾಗಿ ಮುಖ್ಯಮಂತ್ರಿ ಪದವಿಯನ್ನೇರುತ್ತಾರೋ ಅಥವಾ ಕಿಂಗ್ ಮೇಕರ್ ಆಗುತ್ತಾರೋ ಎಂಬುದು ಇನ್ನೂ ಕುತೂಹಲದ ವಿಷಯ.

Read More
Next Story