
ತಮಿಳು ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ ಅವರ ಬಹುನಿರೀಕ್ಷಿತ ಹಾಗೂ ಕೊನೆಯ ಚಿತ್ರ 'ಜನ ನಾಯಕನ್' ಬರುವ ಮೇ 8, 2026ರಂದು ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾ 'ಜನ ನಾಯಕನ್' ಮೇ 8ರಂದು ಬಿಡುಗಡೆ
ವಿಜಯ್ ಅವರ ವಿದಾಯದ ಸಿನಿಮಾವಾಗಿರುವುದರಿಂದ, ಆರಂಭಿಕ ದಿನಗಳಲ್ಲಿ ಚಿತ್ರಮಂದಿರಗಳು ಹೌಸ್‌ಫುಲ್ ಆಗುವುದು ಖಚಿತ ಎನ್ನಲಾಗಿದೆ.
ತಮಿಳು ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ ಅವರ ಬಹುನಿರೀಕ್ಷಿತ ಹಾಗೂ ಕೊನೆಯ ಚಿತ್ರ 'ಜನ ನಾಯಕನ್' ಬರುವ ಮೇ 8, 2026ರಂದು ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. 2025ರ ಡಿಸೆಂಬರ್‌ನಿಂದ ಸೆನ್ಸಾರ್ ಹಾಗೂ ಆನ್‌ಲೈನ್ ಸೋರಿಕೆ ಸಮಸ್ಯೆಗಳನ್ನು ಎದುರಿಸುತ್ತಿದ್ದ ಈ ಚಿತ್ರ, ಅಂತಿಮವಾಗಿ ಬಿಡುಗಡೆಯ ದಿನಾಂಕವನ್ನು ಖಚಿತಪಡಿಸಿಕೊಂಡಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಕೊನೆಯ ಬಾರಿಗೆ ಬೆಳ್ಳಿತೆರೆಯ ಮೇಲೆ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ.
ಚಿತ್ರ ಬಿಡುಗಡೆಗೂ ಮುನ್ನವೇ ಸಂಪೂರ್ಣ ಸಿನಿಮಾ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಇದು ಬಾಕ್ಸ್ ಆಫೀಸ್ ಗಳಿಕೆಯ ಮೇಲೆ ಸ್ವಲ್ಪಮಟ್ಟಿಗೆ ಪರಿಣಾಮ ಬೀರಬಹುದು ಎಂಬ ಆತಂಕವಿದ್ದರೂ, ವಿಜಯ್ ಅವರಿಗಿರುವ ಅಪಾರ ಅಭಿಮಾನಿಗಳ ಬಳಗ ಚಿತ್ರಮಂದಿರದತ್ತ ಹರಿದುಬರುವ ನಿರೀಕ್ಷೆಯಿದೆ. ಇದು ವಿಜಯ್ ಅವರ ವಿದಾಯದ ಸಿನಿಮಾವಾಗಿರುವುದರಿಂದ, ಆರಂಭಿಕ ದಿನಗಳಲ್ಲಿ ಚಿತ್ರಮಂದಿರಗಳು ಹೌಸ್‌ಫುಲ್ ಆಗುವುದು ಖಚಿತ ಎನ್ನಲಾಗಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ, ತಮಿಳುನಾಡಿನಾದ್ಯಂತ ಈವರೆಗಿನ ಎಲ್ಲಾ ಬಾಕ್ಸ್ ಆಫೀಸ್ ದಾಖಲೆಗಳನ್ನು ಈ ಚಿತ್ರ ಪುಡಿಪುಡಿ ಮಾಡಲಿದೆ.
ಮಾಜಿ ಪೊಲೀಸ್ ಅಧಿಕಾರಿ
ಎಚ್. ವಿನೋತ್ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ ಚಿತ್ರದಲ್ಲಿ ದಳಪತಿ ವಿಜಯ್ ಮಾಜಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಟ ಬಾಬಿ ಡಿಯೋಲ್ ಖಳನಾಯಕನಾಗಿ ಅಬ್ಬರಿಸಲಿದ್ದು, ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ. ಮಮಿತಾ ಬೈಜು, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್, ಪ್ರಿಯಾಮಣಿ ಮತ್ತು ನರೇನ್ ಅವರಂತಹ ಘಟಾನುಘಟಿ ತಾರಾಗಣ ಚಿತ್ರದಲ್ಲಿದೆ. ವಿಶೇಷವೆಂದರೆ, ಈ ಸಿನಿಮಾ ನಂದಮೂರಿ ಬಾಲಕೃಷ್ಣ ಅಭಿನಯದ ತೆಲುಗಿನ ಸೂಪರ್ ಹಿಟ್ 'ಭಗವಂತ್ ಕೇಸರಿ' ಚಿತ್ರದ ಅಧಿಕೃತ ರಿಮೇಕ್ ಆಗಿದೆ.

