
ಆರ್ಥಿಕ ಸಂಕಷ್ಟದಿಂದ ವಿಳಂಬವಾಗಿದ್ದ ಸೂರ್ಯ ನಟನೆಯ 'ಕರುಪ್ಪು' ಚಿತ್ರ ಇಂದು ಅದ್ದೂರಿಯಾಗಿ ಬಿಡುಗಡೆಯಾಗಿದೆ.
ಎಲ್ಲ ಸಮಸ್ಯೆಗಳಿಗೆ ಪರಿಹಾರ; ಸೂರ್ಯ ನಟನೆಯ 'ಕರುಪ್ಪು' ಇಂದು ತೆರೆಗೆ
ಆರ್ಥಿಕ ಸಂಕಷ್ಟದಿಂದ ವಿಳಂಬವಾಗಿದ್ದ ಸೂರ್ಯ ನಟನೆಯ 'ಕರುಪ್ಪು' ಚಿತ್ರ ಇಂದು ಅದ್ದೂರಿಯಾಗಿ ಬಿಡುಗಡೆಯಾಗಿದೆ. ನಿರ್ದೇಶಕ ಆರ್.ಜೆ. ಬಾಲಾಜಿ ಅಭಿಮಾನಿಗಳ ಕ್ಷಮೆ ಕೇಳಿದ್ದು, ಸಿನೆಮಾ ಹವಾ ಜೋರಾಗಿದೆ.
ತಮಿಳು ಸ್ಟಾರ್ ನಟ ಸೂರ್ಯ ಅಭಿನಯದ ಬಹುನಿರೀಕ್ಷಿತ 'ಕರುಪ್ಪು' ಚಿತ್ರವು ಶುಕ್ರವಾರ ತೆರೆಕಾಣುತ್ತಿದೆ. ವಾಸ್ತವವಾಗಿ ಈ ಸಿನಿಮಾ ಮೇ 14ರಂದೇ ಬಿಡುಗಡೆಯಾಗಬೇಕಿತ್ತು, ಆದರೆ ಕೆಲವು ಆರ್ಥಿಕ ಸಂಕಷ್ಟಗಳಿಂದಾಗಿ ಗುರುವಾರ ಚಿತ್ರಮಂದಿರಗಳಿಗೆ ಬರಲು ಸಾಧ್ಯವಾಗಿರಲಿಲ್ಲ. ಇದರಿಂದ ಸೂರ್ಯ ಅವರ ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗಿತ್ತು. ಚಿತ್ರದ ಬಿಡುಗಡೆ ವಿಳಂಬವಾದ ಕಾರಣಕ್ಕೆ ನಿರ್ದೇಶಕ ಆರ್.ಜೆ. ಬಾಲಾಜಿ ಅವರು ಸಾಮಾಜಿಕ ಜಾಲತಾಣದಲ್ಲಿ ಭಾವುಕರಾಗಿ ಅಭಿಮಾನಿಗಳ ಬಳಿ ಕ್ಷಮೆಯನ್ನೂ ಕೇಳಿದ್ದರು.
ಆದರೆ ಇದೀಗ ಎಲ್ಲಾ ಸಮಸ್ಯೆಗಳು ಸುಸೂತ್ರವಾಗಿ ಬಗೆಹರಿದಿದ್ದು, ಚಿತ್ರತಂಡವು ಮೇ 15ರ ಶುಕ್ರವಾರದಂದು ಚಿತ್ರವನ್ನು ಪ್ರಪಂಚದಾದ್ಯಂತ ಬಿಡುಗಡೆ ಮಾಡುತ್ತಿದೆ. ಈ ಸುದೀರ್ಘ ಕಾಯುವಿಕೆಯ ನಂತರ ಸಿಕ್ಕ ಸಿಹಿ ಸುದ್ದಿಯಿಂದ ಸೂರ್ಯ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಚಿತ್ರದಲ್ಲಿ ಸೂರ್ಯ ಅವರಿಗೆ ಜೋಡಿಯಾಗಿ ತ್ರಿಷಾ ನಟಿಸಿದ್ದು, ಸಾಯಿ ಅಭ್ಯಂಕರ್ ಸಂಗೀತ ನೀಡಿದ್ದಾರೆ. ಇಂದ್ರನ್ಸ್, ನಟ್ಟಿ, ಸ್ವಸಿಕಾ, ಶಿವದ ಸೇರಿದಂತೆ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ.
ಡ್ರೀಮ್ ವಾರಿಯರ್ ಪಿಕ್ಚರ್ಸ್ ಅಡಿಯಲ್ಲಿ ಎಸ್.ಆರ್. ಪ್ರಕಾಶ್ ಬಾಬು ಮತ್ತು ಎಸ್.ಆರ್. ಪ್ರಭು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ತೆಲುಗಿನಲ್ಲಿ ಈ ಸಿನಿಮಾ 'ವೀರಭದ್ರುಡು' ಎಂಬ ಹೆಸರಿನಲ್ಲಿ ಬಿಡುಗಡೆಯಾಗುತ್ತಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ಸೂರ್ಯ ಅವರಿಗೆ ಈ 'ಕರುಪ್ಪು' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮರುಜೀವ ನೀಡುತ್ತದೆಯೇ ಎಂಬುದನ್ನು ನೋಡಬೇಕಿದೆ.
ಸೂರ್ಯ ಅಭಿನಯದ 'ಕರುಪ್ಪು' ಚಿತ್ರದ ಬಿಡುಗಡೆ ವೇಳೆ ದೊಡ್ಡ ಮಟ್ಟದ ಹೈಡ್ರಾಮಾ ನಡೆದಿದೆ. ಮೇ 14ರಂದು ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಬೇಕಿದ್ದ ಈ ಚಿತ್ರವು ಕೊನೆಯ ಕ್ಷಣದಲ್ಲಿ ಹಣಕಾಸಿನ ವಿವಾದಕ್ಕೆ ಸಿಲುಕಿ ಪ್ರದರ್ಶನ ರದ್ದುಗೊಳಿಸುವಂತಾಯಿತು. ಈ ಬೆಳವಣಿಗೆಯಿಂದಾಗಿ ಥಿಯೇಟರ್‌ಗೆ ಬಂದಿದ್ದ ಅಭಿಮಾನಿಗಳು ತೀವ್ರ ನಿರಾಸೆ ಅನುಭವಿಸುವಂತಾಯಿತು.
ವರದಿಗಳ ಪ್ರಕಾರ, ಈ ಚಿತ್ರವನ್ನು ನಿರ್ಮಾಣ ಮಾಡಿರುವ 'ಡ್ರೀಮ್ ವಾರಿಯರ್ ಪಿಕ್ಚರ್ಸ್' ಸಂಸ್ಥೆಯು ಈ ಹಿಂದಿನ ಚಿತ್ರಗಳ ವ್ಯವಹಾರಕ್ಕೆ ಸಂಬಂಧಿಸಿದಂತೆ ಫೈನಾನ್ಶಿಯರ್‌ಗಳಿಗೆ ಸುಮಾರು ₹50 ಕೋಟಿಗೂ ಅಧಿಕ ಹಣ ಬಾಕಿ ಉಳಿಸಿಕೊಂಡಿತ್ತು ಎನ್ನಲಾಗಿದೆ. ಈ ಬಾಕಿ ಹಣ ಪಾವತಿಯಾಗದ ಕಾರಣ ಫೈನಾನ್ಶಿಯರ್‌ಗಳು ಚಿತ್ರದ ಬಿಡುಗಡೆಗೆ ತಡೆ ನೀಡಿದರು. ಇದರಿಂದಾಗಿ ಚಿತ್ರಮಂದಿರಗಳಿಗೆ ಹೋಗಬೇಕಿದ್ದ ಡಿಜಿಟಲ್ ಕೀ ವಿಳಂಬವಾಗಿ ಬೆಳಿಗ್ಗೆ ಹಾಗೂ ಮಧ್ಯಾಹ್ನದ ಎಲ್ಲಾ ಪ್ರದರ್ಶನಗಳು ರದ್ದಾದವು.

