9 ಕೋಟಿ ವಂಚನೆ ಆರೋಪ; ಇಂದು ನ್ಯಾಯಾಲಯಕ್ಕೆ ಸುದೀಪ್ ಹಾಜರು!
x

ಇಂದು ನ್ಯಾಯಾಧೀಶರ ಮುಂದೆ ಕಿಚ್ಚ ಸುದೀಪ್!

9 ಕೋಟಿ ವಂಚನೆ ಆರೋಪ; ಇಂದು ನ್ಯಾಯಾಲಯಕ್ಕೆ ಸುದೀಪ್ ಹಾಜರು!

ನಿರ್ಮಾಪಕರಾದ ಎಂ.ಎನ್. ಕುಮಾರ್ ವಿರುದ್ಧ ಹೂಡಿರುವ ಮಾನನಷ್ಟ ಮೊಕದ್ದಮೆಯ ಕ್ರಾಸ್ ಎಕ್ಸಾಮಿನೇಷನ್‌ಗಾಗಿ ನಟ ಕಿಚ್ಚ ಸುದೀಪ್ ಇಂದು ಎಸಿಜೆಎಂ ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಲಿದ್ದಾರೆ.


Click the Play button to hear this message in audio format

ಕಿಚ್ಚ ಸುದೀಪ್ ಅವರು ಶನಿವಾರ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ. ಚಲನಚಿತ್ರ ನಿರ್ಮಾಪಕರಾದ ಎಂ. ಎನ್. ಕುಮಾರ್ ಮತ್ತು ಎನ್. ಎಂ. ಸುರೇಶ್ ವಿರುದ್ಧ ಸುದೀಪ್ ಅವರು ದಾಖಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಶನಿವಾರ ಎಸಿಜೆಎಂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ.

ಈ ಹಿಂದೆ ನಿರ್ಮಾಪಕರು ನಟ ಸುದೀಪ್ ಅವರ ವಿರುದ್ಧ ಹಣಕಾಸಿನ ವಂಚನೆಯ ಗಂಭೀರ ಆರೋಪಗಳನ್ನು ಮಾಡಿದ್ದರು. ಸುದೀಪ್ ಅವರು ಸಿನಿಮಾವೊಂದಕ್ಕಾಗಿ ಸುಮಾರು ಒಂಬತ್ತು ಕೋಟಿ ರೂಪಾಯಿಗಳ ಮುಂಗಡ ಸಂಭಾವನೆ ಪಡೆದು, ಎಂಟು ವರ್ಷಗಳಾದರೂ ಚಿತ್ರೀಕರಣಕ್ಕೆ ಕಾಲ್‌ಶೀಟ್ ನೀಡದೆ ವಂಚಿಸಿದ್ದಾರೆ ಎಂದು ನಿರ್ಮಾಪಕರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು. ಅಲ್ಲದೆ ಸುದೀಪ್ ಅವರು ತಮ್ಮ ಮನೆಯ ನವೀಕರಣಕ್ಕಾಗಿ ಹತ್ತು ಲಕ್ಷ ರೂಪಾಯಿ ಪಡೆದಿದ್ದಾರೆ ಎಂಬ ಆರೋಪಗಳನ್ನೂ ಹೊರಿಸಲಾಗಿತ್ತು.

ತಮ್ಮ ಮೇಲಿನ ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದ ನಟ ಸುದೀಪ್, ಇವುಗಳಿಂದ ತಮ್ಮ ಗೌರವಕ್ಕೆ ಧಕ್ಕೆಯಾಗಿದೆ ಎಂದು ಆರೋಪಿಸಿ 2023 ರಲ್ಲಿ ನಿರ್ಮಾಪಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಪ್ರಕರಣದ ಮುಂದುವರಿದ ಭಾಗವಾಗಿ ಶನಿವಾರ ನ್ಯಾಯಾಲಯದಲ್ಲಿ ಪ್ರತಿವಾದಿ ನಿರ್ಮಾಪಕರ ಪರ ವಕೀಲರಿಂದ ಸುದೀಪ್ ಅವರ ಕ್ರಾಸ್ ಎಕ್ಸಾಮಿನೇಷನ್ ನಡೆಯಲಿದ್ದು, ಇದಕ್ಕಾಗಿ ಸುದೀಪ್‌ ನ್ಯಾಯಾಲಯದ ಮುಂದೆ ಖುದ್ದಾಗಿ ಹಾಜರಾಗುತ್ತಿದ್ದಾರೆ.

ಸುದೀಪ್‌ ಅವರು 'ಬಿಲ್ಲ ರಂಗ ಭಾಷ' ಸಿನಿಮಾದಲ್ಲಿ ನಟಿಸುತ್ತಿದ್ದು, 'ವಿಕ್ರಾಂತ್ ರೋಣ' ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿ ಮತ್ತು ಸುದೀಪ್ ಅವರ ಯಶಸ್ವಿ ಕಾಂಬಿನೇಷನ್‌ನಲ್ಲಿ ಈ ಸಿನಿಮಾ ಮೂಡಿಬರಲಿದ್ದು, ಇದೊಂದು ಸೈನ್ಸ್ ಫಿಕ್ಷನ್ ಮತ್ತು ಸಾಹಸ ಪ್ರಧಾನ ಕಥಾಹಂದರ ಹೊಂದಿರುವ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಚಿತ್ರವಾಗಿದೆ.

ಅಲ್ಲದೆ, ಸುದೀಪ್ ಅವರು ತಮಿಳಿನ ಪ್ರಸಿದ್ಧ ನಿರ್ಮಾಣ ಸಂಸ್ಥೆ 'ಸತ್ಯಜ್ಯೋತಿ ಫಿಲ್ಮ್ಸ್' ಬ್ಯಾನರ್ ಅಡಿಯಲ್ಲಿ ಮತ್ತೊಂದು ದೊಡ್ಡ ಸಿನಿಮಾಗೆ ಸಹಿ ಮಾಡಿದ್ದಾರೆ. ಈ ಚಿತ್ರವನ್ನು ಚೇರನ್ ನಿರ್ದೇಶಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದು, ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ. ಇದರೊಂದಿಗೆ ಪ್ರಮುಖ ನಿರ್ದೇಶಕ ಆರ್. ಚಂದ್ರು ಅವರ ಜೊತೆಗೂ ಸುದೀಪ್ ಹೊಸದೊಂದು ಆಕ್ಷನ್ ಸಿನಿಮಾಗಾಗಿ ಕೈಜೋಡಿಸಲಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ.

ಕೇವಲ ನಟನೆ ಮಾತ್ರವಲ್ಲದೆ, ಸುದೀಪ್ ಅವರು ಶೀಘ್ರದಲ್ಲೇ ಮತ್ತೊಮ್ಮೆ ನಿರ್ದೇಶನದ ಕ್ಯಾಪ್ ತೊಡಲಿದ್ದಾರೆ. ತಮ್ಮದೇ ಸ್ವಂತ ಬ್ಯಾನರ್ ಕೆಆರ್‌ಜಿ ಸ್ಟುಡಿಯೋಸ್ ಸಹಯೋಗದಲ್ಲಿ ಅವರು ಹೊಸ ಚಿತ್ರವೊಂದನ್ನು ನಿರ್ದೇಶಿಸಲಿದ್ದು, ಇದರಲ್ಲಿ ಅವರೇ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಟ್ಟಾರೆಯಾಗಿ, ಮುಂದಿನ ದಿನಗಳಲ್ಲಿ ಸುದೀಪ್ ಅವರು ವಿಭಿನ್ನ ಪಾತ್ರಗಳು ಮತ್ತು ವಿಶಿಷ್ಟ ಕಥಾಹಂದರಗಳ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗುತ್ತಿದ್ದಾರೆ.

Read More
Next Story