
ಮೆಟ್ ಗಾಲಾ 2026ರಲ್ಲಿ ಸುಬೋಧ್ ಗುಪ್ತಾ ಅವರ 'ಮಾವಿನ ಹಣ್ಣಿನ' ಶಿಲ್ಪದೊಂದಿಗೆ ಈಶಾ ಅಂಬಾನಿ
ಮೆಟ್ ಗಾಲಾದಲ್ಲಿ ಮಿಂಚಿದ ಈಶಾ ಅಂಬಾನಿ ಕೈಲಿದ್ದ ಮಾವಿನ ಕಲೆಯ ರೂವಾರಿ ಸುಬೋಧ್ ಗುಪ್ತಾ
ಮೆಟ್ ಗಾಲಾ 2026ರಲ್ಲಿ ಈಶಾ ಅಂಬಾನಿ ಕೈಲಿದ್ದ ಮಾವು ಮತ್ತು ಅನನ್ಯ ಬಿರ್ಲಾ ಧರಿಸಿದ್ದ ಮಾಸ್ಕ್ ವಿನ್ಯಾಸಗೊಳಿಸಿದ ಸುಬೋಧ್ ಗುಪ್ತಾ ಅವರ ಕಲೆಯ ಬಗ್ಗೆ ತಿಳಿಯಿರಿ. ಸಾಮಾನ್ಯ ವಸ್ತುಗಳ ಅಸಾಮಾನ್ಯ ಕಲೆ ಇದು.
ಪ್ರತಿಷ್ಠಿತ 'ಮೆಟ್ ಗಾಲಾ' ಷನ್ ಹಬ್ಬದಲ್ಲಿ ಈ ಬಾರಿ ಖ್ಯಾತ ಭಾರತೀಯ ಸಮಕಾಲೀನ ಕಲಾವಿದ ಸುಬೋಧ್ ಗುಪ್ತಾ ಅವರ ಕಲಾಕೃತಿಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿವೆ. ವಿಶೇಷವಾಗಿ, ಈಶಾ ಅಂಬಾನಿ ಕೈಯಲ್ಲಿ ಹಿಡಿದಿದ್ದ 'ಮಾವಿನ ಹಣ್ಣಿನ' ಆಕಾರದ ಕ್ಲಚ್ (ಕಲಾಕೃತಿ) ಹಾಗೂ ಗಾಯಕಿ ಅನನ್ಯ ಬಿರ್ಲಾ ಧರಿಸಿದ್ದ ವಿಶಿಷ್ಟ ವಿನ್ಯಾಸದ ಲೋಹದ ಮಾಸ್ಕ್ ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ.
ಮೆಟ್ ಗಾಲಾದಂತಹ ಅದ್ದೂರಿ ವೇದಿಕೆಯಲ್ಲಿ ಈಶಾ ಅಂಬಾನಿ ಪ್ರದರ್ಶಿಸಿದ ಈ ಮಾವಿನ ಹಣ್ಣಿನ ಕಲಾಕೃತಿಯನ್ನು ಸುಬೋಧ್ ಗುಪ್ತಾ ಅವರು ಸುಮಾರು ಎರಡು ದಶಕಗಳ ಹಿಂದೆಯೇ ಸಿದ್ಧಪಡಿಸಿದ್ದರು. ಇದು ಕೇವಲ ಸಾಮಾನ್ಯ ಹಣ್ಣಲ್ಲ, ಬದಲಿಗೆ ಕೈಯಿಂದಲೇ ಪೇಂಟ್ ಮಾಡಲಾದ ಅಪ್ಪಟ ಕಂಚಿನ ಶಿಲ್ಪ. ನೋಡಲು ಅಚ್ಚಸಲು ನೈಜ ಮಾವಿನ ಹಣ್ಣಿನಂತೆಯೇ ಕಾಣುವ ಇದು, ಸರಿಸುಮಾರು ಒಂದು ಕೆಜಿ ತೂಕ ಹೊಂದಿದೆ.
ಗುಪ್ತಾ ಅವರು ತಮ್ಮ ಕಲೆಗಳಲ್ಲಿ ಹಿಂದಿಯ 'ಆಮ್' (ಮಾವಿನ ಹಣ್ಣು) ಮತ್ತು 'ಆಮ್ ಆದ್ಮಿ' (ಸಾಮಾನ್ಯ ಮನುಷ್ಯ) ಎಂಬ ಪದಗಳ ಅರ್ಥದೊಂದಿಗೆ ಆಟವಾಡುವುದನ್ನು ಇಷ್ಟಪಡುತ್ತಾರೆ. ಈ ಕಲಾಕೃತಿಯ ಹಿಂದಿನ ಆಶಯವೂ ಅದೇ ಆಗಿದ್ದು, ಫ್ಯಾಷನ್ ವೇದಿಕೆಯಲ್ಲಿ ಸಾಮಾನ್ಯ ಮನುಷ್ಯನ ಸಂಕೇತವನ್ನು ಬಹಳ ಕಲಾತ್ಮಕವಾಗಿ ಪ್ರಸ್ತುತಪಡಿಸಲಾಗಿದೆ.
ದಿನಬಳಕೆಯ ವಸ್ತುಗಳಿಗೆ ಕಲಾತ್ಮಕ ಸ್ಪರ್ಶ
ಬಿಹಾರದಲ್ಲಿ ಜನಿಸಿದ ಸುಬೋಧ್ ಗುಪ್ತಾ ಅವರು ಸಾಮಾನ್ಯ ದಿನಬಳಕೆಯ ವಸ್ತುಗಳಿಗೆ ಕಲಾತ್ಮಕ ರೂಪ ನೀಡುವುದರಲ್ಲಿ ವಿಶ್ವಪ್ರಸಿದ್ಧರು. ಸ್ಟೀಲ್ ಪಾತ್ರೆಗಳು, ಟಿಫಿನ್ ಬಾಕ್ಸ್‌ಗಳು ಮತ್ತು ಹಾಲಿನ ಕ್ಯಾನ್‌ಗಳನ್ನು ಬಳಸಿ ಬೃಹತ್ ಕಲಾಕೃತಿಗಳನ್ನು ರಚಿಸುವುದು ಇವರ ಹೆಗ್ಗಳಿಕೆ. ಫ್ಯಾಷನ್ ಪ್ರಪಂಚದ ಅತ್ಯಂತ ದೊಡ್ಡ ವೇದಿಕೆಯಾದ ಮೆಟ್ ಗಾಲಾದಲ್ಲಿ, ತಮ್ಮ ಈ ವಿಶಿಷ್ಟ ಶೈಲಿಯ ಮೂಲಕ ಅವರು ಭಾರತೀಯ ಸಂಸ್ಕೃತಿ ಮತ್ತು ಕಲೆಯ ಹಿರಿಮೆಯನ್ನು ಜಗತ್ತಿಗೆ ಸಾರಿದ್ದಾರೆ.
ಅದೇ ರೀತಿ, ಅನನ್ಯ ಬಿರ್ಲಾ ಅವರು ಧರಿಸಿದ್ದ ಲೋಹದ ಮುಖವಾಡವೂ (Mask) ಸುಬೋಧ್ ಅವರ ಸೃಜನಶೀಲತೆಗೆ ಮತ್ತೊಂದು ಸಾಕ್ಷಿಯಾಗಿದೆ. ಈ ಮೂಲಕ ಕೇವಲ ಉಡುಗೆಗಳಿಗಷ್ಟೇ ಸೀಮಿತವಾಗಿದ್ದ ಮೆಟ್ ಗಾಲಾ ವೇದಿಕೆಯಲ್ಲಿ ಈ ಬಾರಿ ಭಾರತೀಯ ಕಲೆ ಮತ್ತು ಫ್ಯಾಷನ್‌ನ ಅದ್ಭುತ ಸಮ್ಮಿಲನ ಜಗತ್ತಿನೆದುರು ಹೊಸ ಭಾಷ್ಯ ಬರೆದಿದೆ.

