
ತಿಲಕ್ ವರ್ಮಾ-ಶ್ರೀಲೀಲಾ ಲವ್ ರೂಮರ್ಸ್ ಬಗ್ಗೆ ನಟಿ ಶ್ರೀಲೀಲಾ ತಂಡ ಸ್ಪಷ್ಟನೆ ನೀಡಿದೆ.
ತಿಲಕ್ ವರ್ಮಾ-ಶ್ರೀಲೀಲಾ ಲವ್ ರೂಮರ್ಸ್: ನಟಿಯ ಆಪ್ತರು ಹೇಳಿದ್ದೇನು?
ನಟಿ ಶ್ರೀಲೀಲಾ ಹಾಗೂ ಕ್ರಿಕೆಟಿಗ ತಿಲಕ್ ವರ್ಮಾ ಡೇಟಿಂಗ್ ವದಂತಿಗಳಿಗೆ ನಟಿಯ ತಂಡ ಬ್ರೇಕ್ ಹಾಕಿದ್ದು, ಅವರಿಬ್ಬರು ಇದುವರೆಗೆ ಭೇಟಿಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.
ಬಹುಭಾಷಾ ನಟಿ ಶ್ರೀಲೀಲಾ ಹಾಗೂ ಭಾರತೀಯ ಯುವ ಕ್ರಿಕೆಟಿಗ ತಿಲಕ್ ವರ್ಮಾ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದವು. ಆದರೆ, ಈ ಎಲ್ಲಾ ಸುದ್ದಿಗಳು ಕೇವಲ ಹಸಿ ಸುಳ್ಳು ಮತ್ತು ಆಧಾರರಹಿತ ಎಂದು ಶ್ರೀಲೀಲಾ ಅವರ ಆಪ್ತ ಮ್ಯಾನೇಜರ್ ತಂಡ ಅಧಿಕೃತವಾಗಿ ಸ್ಪಷ್ಟಪಡಿಸಿದೆ. ಈ ಮೂಲಕ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದ ಡೇಟಿಂಗ್ ಗಾಸಿಪ್‌ಗಳಿಗೆ ನಟಿಯ ಕಡೆಯಿಂದ ಬ್ರೇಕ್ ಬಿದ್ದಂತಾಗಿದೆ.
ಈ ಇಬ್ಬರ ನಡುವಿನ ಡೇಟಿಂಗ್ ಸುದ್ದಿಗೆ ಮುಂಬೈ ಇಂಡಿಯನ್ಸ್ ತಂಡದ ಸಹ-ಆಟಗಾರ ಸೂರ್ಯಕುಮಾರ್ ಯಾದವ್ ಅವರ ಇತ್ತೀಚಿನ ವಿಡಿಯೋವೊಂದು ಪ್ರಮುಖ ಕಾರಣವಾಗಿತ್ತು. ಹೋಟೆಲ್ ಒಂದರ ಲಾಬಿಯಲ್ಲಿ ಇಯರ್‌ಫೋನ್ ಹಾಕಿಕೊಂಡು ನಡೆದು ಹೋಗುತ್ತಿದ್ದ ತಿಲಕ್ ವರ್ಮಾರನ್ನು ಸೂರ್ಯಕುಮಾರ್ ಅವರು `ಅವನು ಪ್ರೀತಿಯಲ್ಲಿದ್ದಾನೆ' ಎಂದು ಕಾಲೆಳೆದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಾದ ರೆಡ್ಡಿಟ್, ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸೂರ್ಯಕುಮಾರ್ ಅವರು ಶ್ರೀಲೀಲಾ ಹೆಸರನ್ನು ಎಲ್ಲೂ ಪ್ರಸ್ತಾಪಿಸದಿದ್ದರೂ, ನೆಟ್ಟಿಗರು ಮಾತ್ರ ತಿಲಕ್ ವರ್ಮಾರನ್ನು ಶ್ರೀಲೀಲಾ ಅವರ ಹೆಸರಿನೊಂದಿಗೆ ಲಿಂಕ್ ಮಾಡಿ ವದಂತಿ ಹಬ್ಬಿಸಿದ್ದರು.
ಇದಲ್ಲದೆ, ಇತ್ತೀಚೆಗೆ ನಡೆದ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಐಪಿಎಲ್ ಪಂದ್ಯದ ವೇಳೆ ಶ್ರೀಲೀಲಾ ಅವರ ತಾಯಿ ಡಾ. ಸ್ವರ್ಣಲತಾ ಅವರು ಧರ್ಮಶಾಲಾ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದರು. ಅದೇ ಪಂದ್ಯದಲ್ಲಿ ಶ್ರೀಲೀಲಾ ಅವರ ತಂಡದ ಸದಸ್ಯರೊಬ್ಬರು `ತಿಲಕ್' ಎಂದು ಬರೆದಿದ್ದ ಜರ್ಸಿ ಧರಿಸಿದ್ದರು ಎಂಬ ವದಂತಿಗಳು ಕೇಳಿಬಂದಿದ್ದರಿಂದ ಈ ಗಾಸಿಪ್‌ಗೆ ಮತ್ತಷ್ಟು ರೆಕ್ಕೆಪುಕ್ಕೆ ಬಂದಿತ್ತು.
ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಶ್ರೀಲೀಲಾ ಅವರ ಪ್ರಚಾರ ಮತ್ತು ಆಡಳಿತ ನಿರ್ವಹಣಾ ತಂಡ, ತಿಲಕ್ ವರ್ಮಾ ಮತ್ತು ಶ್ರೀಲೀಲಾ ಅವರ ನಡುವೆ ಯಾವುದೇ ಪ್ರೇಮ ಸಂಬಂಧವಿಲ್ಲ ಎಂದು ತಿಳಿಸಿದೆ. ಅವರಿಬ್ಬರು ಇದುವರೆಗೂ ವೈಯಕ್ತಿಕವಾಗಿ ಭೇಟಿಯಾಗಿಲ್ಲ ಮತ್ತು ಪರಸ್ಪರ ಮಾತನಾಡಿ ಸಹ ಇಲ್ಲ. ಇಂತಹ ಆಧಾರರಹಿತ ಮತ್ತು ಸೃಷ್ಟಿ ಮಾಡಲಾದ ಸುಳ್ಳು ಕಥೆಗಳನ್ನು ಯಾರೂ ನಂಬಬಾರದು ಮತ್ತು ಹರಡಬಾರದು ಎಂದು ಮಾಧ್ಯಮ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಪ್ರಸ್ತುತ ನಟಿ ಶ್ರೀಲೀಲಾ ಅವರು ಬಾಲಿವುಡ್‌ನ ಖ್ಯಾತ ನಿರ್ದೇಶಕ ಅನುರಾಗ್ ಬಸು ಅವರ ಮುಂಬರುವ ರೋಮ್ಯಾಂಟಿಕ್ ಡ್ರಾಮಾ ಸಿನಿಮಾದಲ್ಲಿ ನಟ ಕಾರ್ತಿಕ್ ಆರ್ಯನ್ ಜೊತೆ ನಟಿಸುತ್ತಿದ್ದು, ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಕ್ರಿಕೆಟಿಗ ತಿಲಕ್ ವರ್ಮಾ ಶ್ರೀಲಂಕಾ ವಿರುದ್ಧದ ಮುಂಬರುವ ಏಕದಿನ ತ್ರಿಕೋನ ಸರಣಿಗೆ 'ಇಂಡಿಯಾ ಎ' ತಂಡದ ನಾಯಕರಾಗಿ ಆಯ್ಕೆಯಾಗಿದ್ದು, ಕ್ರೀಡಾ ರಂಗದಲ್ಲಿ ತಮ್ಮದೇ ಆದ ಯಶಸ್ಸಿನ ಹಾದಿಯಲ್ಲಿದ್ದಾರೆ. ಹೀಗಾಗಿ ಇಬ್ಬರೂ ತಮ್ಮ ತಮ್ಮ ವೃತ್ತಿಜೀವನದಲ್ಲಿ ಬ್ಯುಸಿಯಾಗಿದ್ದು, ಈ ವಿವಾದಕ್ಕೆ ತೆರೆ ಎಳೆದಿದ್ದಾರೆ.

