ಮಿರ್ಜಾಪುರ್ ಸಿನಿಮಾ: ಹಳೆಯ ಗೋಲು ಪಾತ್ರಕ್ಕೆ ಮರಳುವುದು ಗೊಂದಲವಾಗಿತ್ತು ಎಂದ ನಟಿ
x

ಸೆಪ್ಟೆಂಬರ್ 4, 2026 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿರುವ 'ಮಿರ್ಜಾಪುರ್: ದಿ ಮೂವಿ' ಚಿತ್ರದಲ್ಲಿ 'ಗೋಲು ಗುಪ್ತಾ' ಪಾತ್ರದಲ್ಲಿ ನಟಿ ಶ್ವೇತಾ ತ್ರಿಪಾಠಿ.

ಮಿರ್ಜಾಪುರ್ ಸಿನಿಮಾ: ಹಳೆಯ ಗೋಲು ಪಾತ್ರಕ್ಕೆ ಮರಳುವುದು ಗೊಂದಲವಾಗಿತ್ತು ಎಂದ ನಟಿ

ಮಿರ್ಜಾಪುರ್: ದಿ ಮೂವಿ' ಚಿತ್ರದಲ್ಲಿ ಮತ್ತೆ ಮೊದಲ ಸೀಸನ್‌ನ ಮುಗ್ಧ 'ಗೋಲು ಗುಪ್ತಾ' ಪಾತ್ರಕ್ಕೆ ಮರಳುವಾಗ ತಮಗೆ ಎದುರಾದ ಮಾನಸಿಕ ಗೊಂದಲ ಹಾಗೂ ಶೂಟಿಂಗ್ ಅನುಭವವನ್ನು ನಟಿ ಶ್ವೇತಾ ಹಂಚಿಕೊಂಡಿದ್ದಾರೆ.


Click the Play button to hear this message in audio format

ಖ್ಯಾತ ಕ್ರೈಮ್ ಡ್ರಾಮಾ ವೆಬ್ ಸರಣಿ 'ಮಿರ್ಜಾಪುರ್' ಈಗ ಬೆಳ್ಳಿಪರದೆಗೆ ಬರಲು ಸಜ್ಜಾಗಿದ್ದು, ಚಿತ್ರದ ಮೊದಲ ಟೀಸರ್ ಬಿಡುಗಡೆಯಾಗಿದೆ. ಇದರ ಬೆನ್ನಲ್ಲೇ ಸಿನಿಮಾದಲ್ಲಿ ಪ್ರಮುಖ ಪಾತ್ರ ಪೋಷಿಸಿರುವ ನಟಿ ಶ್ವೇತಾ ತ್ರಿಪಾಠಿ ಅವರು ಶೂಟಿಂಗ್ ದಿನಗಳ ತಮ್ಮ ಭಾವನಾತ್ಮಕ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ವೆಬ್ ಸರಣಿಯಿಂದ ಸಿನಿಮಾದ ರೂಪಕ್ಕೆ ಬದಲಾಗಿರುವ ಈ ಫ್ರಾಂಚೈಸಿಯಲ್ಲಿ, ತಾವು ಈ ಹಿಂದೆ ಸೀಸನ್ 1 ರಲ್ಲಿ ನಟಿಸಿದ್ದ ಮುಗ್ಧ 'ಗೋಲು ಗುಪ್ತಾ' ಪಾತ್ರಕ್ಕೆ ಮರಳುವುದು ಮಾನಸಿಕವಾಗಿ ತಮಗೆ ತುಂಬಾ ಗೊಂದಲ ಮತ್ತು ಸವಾಲಿನಿಂದ ಕೂಡಿತ್ತು ಎಂದು ಅವರು ಹೇಳಿದ್ದಾರೆ.

ಈ ಕುರಿತು ಮಾಧ್ಯಮವೊಂದರ ಜೊತೆ ಮಾತನಾಡಿರುವ ಶ್ವೇತಾ, ಕಳೆದ ಮೂರು ಸೀಸನ್‌ಗಳಲ್ಲಿ ತಾವು ಸತತವಾಗಿ ದ್ವೇಷ, ಆಕ್ರೋಶ ಮತ್ತು ಪ್ರತೀಕಾರದ ಭಾವನೆಗಳಲ್ಲೇ ಮುಳುಗಿದ್ದ ಗೋಲು ಪಾತ್ರವನ್ನು ನಿರ್ವಹಿಸಿದ್ದಾಗಿ ನೆನಪಿಸಿಕೊಂಡಿದ್ದಾರೆ.

ಸರಣಿಯಲ್ಲಿ ಸ್ವೀಟಿ ಮತ್ತು ಬಬ್ಲು ಸಾವಿನ ನಂತರ ಗೋಲು ಜೀವನದ ಕನಸುಗಳೆಲ್ಲ ನುಚ್ಚುನೂರಾಗಿ ಅವಳು ಕಠಿಣ ವ್ಯಕ್ತಿಯಾಗಿ ಬದಲಾಗಿದ್ದಳು. ಆದರೆ, ಈಗ ಚಿತ್ರದ ಕಥೆಗಾಗಿ ಮತ್ತೆ ಹಳೆಯ ಮುಗ್ಧತೆಯ ದಿನಗಳಿಗೆ ಅಂದರೆ ಸೀಸನ್ 1 ರ ಪರಿಸ್ಥಿತಿಗೆ ಮರಳಬೇಕಾಗಿತ್ತು. ಶೂಟಿಂಗ್‌ನ ಮೊದಲ ದಿನ ಸೆಟ್‌ಗೆ ಹೋದಾಗ ತಮಗೆ ವಿಪರೀತ ಗೊಂದಲ ಉಂಟಾಗಿತ್ತು ಹಾಗೂ ತಮಗೆ ಏನು ಮಾಡಬೇಕೆಂದೇ ತೋಚುತ್ತಿರಲಿಲ್ಲ ಎಂದು ಅವರು ಒಪ್ಪಿಕೊಂಡಿದ್ದಾರೆ.

ಎದುರಿಗೆ ಹಳೆಯ ಪಾತ್ರಗಳಾದ ಸ್ವೀಟಿ, ಬಬ್ಲು ಮತ್ತು ಮೊದಲಿನಂತಿರುವ ಗುಡ್ಡು ನಿಂತಿರುವುದನ್ನು ನೋಡಿ ಆ ಭಾವನೆಗಳಿಗೆ ಒಗ್ಗಿಕೊಳ್ಳಲು ತಮಗೆ ಸಮಯ ಬೇಕಾಯಿತು ಮತ್ತು ನಿಧಾನವಾಗಿ ಎಲ್ಲವೂ ಸರಿದಾರಿಗೆ ಬಂತು ಎಂದು ಶ್ವೇತಾ ತಿಳಿಸಿದ್ದಾರೆ.

ಚಿತ್ರೀಕರಣದ ಪ್ರಕ್ರಿಯೆಯ ಬಗ್ಗೆ ಮಾತನಾಡಿದ ಅವರು, ವೆಬ್ ಸರಣಿಯ ಚಿತ್ರೀಕರಣಕ್ಕೂ ಮತ್ತು ಸಿನಿಮಾದ ಶೂಟಿಂಗ್‌ಗೂ ನಟನೆಯ ದೃಷ್ಟಿಯಿಂದ ಯಾವುದೇ ದೊಡ್ಡ ವ್ಯತ್ಯಾಸವಿರಲಿಲ್ಲ ಎಂದಿದ್ದಾರೆ. ಚಿತ್ರೀಕರಣವು ಎಂದಿನಂತೆ ನಿಧಾನವಾಗಿ, ಅಚ್ಚುಕಟ್ಟಾಗಿ ಸಾಗಿತ್ತು.

ತಮಗೆ ಎದುರಾದ ಏಕೈಕ ದೊಡ್ಡ ಸವಾಲೆಂದರೆ ಅದು ಕೇವಲ ಭಾವನಾತ್ಮಕವಾಗಿ ಹಳೆಯ ಮುಗ್ಧ ಪಾತ್ರಕ್ಕೆ ಕನೆಕ್ಟ್ ಆಗುವುದಾಗಿತ್ತು ಎಂದು ಅವರು ವಿವರಿಸಿದ್ದಾರೆ. ತಾವೊಬ್ಬ ನಟಿಯಾಗಿ ಮಾತ್ರವಲ್ಲದೆ 'ಮಿರ್ಜಾಪುರ್' ಸರಣಿಯ ದೊಡ್ಡ ಅಭಿಮಾನಿಯಾಗಿದ್ದು, ಸೆಪ್ಟೆಂಬರ್ 4 ರಂದು ಚಿತ್ರಮಂದಿರಗಳಲ್ಲಿ ಈ ಸಿನಿಮಾವನ್ನು ಪ್ರೇಕ್ಷಕರೊಂದಿಗೆ ವೀಕ್ಷಿಸಲು ಕಾತರದಿಂದ ಕಾಯುತ್ತಿರುವುದಾಗಿ ಶ್ವೇತಾ ತ್ರಿಪಾಠಿ ಸಂತಸ ಹಂಚಿಕೊಂಡಿದ್ದಾರೆ.

Read More
Next Story