ಯು-ಟರ್ನ್ ಚಿತ್ರಕ್ಕೆ 10 ವರ್ಷ: ನಟಿ ಶ್ರದ್ಧಾ ಶ್ರೀನಾಥ್ ಮನದಾಳದ ಮಾತು
x

ಯು-ಟರ್ನ್ ಚಿತ್ರಕ್ಕೆ 10 ವರ್ಷ

ಯು-ಟರ್ನ್ ಚಿತ್ರಕ್ಕೆ 10 ವರ್ಷ: ನಟಿ ಶ್ರದ್ಧಾ ಶ್ರೀನಾಥ್ ಮನದಾಳದ ಮಾತು

'ಯು-ಟರ್ನ್' ಚಿತ್ರದ 10 ವರ್ಷಗಳ ಸಂಭ್ರಮದಲ್ಲಿ ನಟಿ ಶ್ರದ್ಧಾ ಶ್ರೀನಾಥ್ ತಮ್ಮ ಸಿನಿ ಪಯಣ, ಪ್ರಾದೇಶಿಕ ಚಿತ್ರಗಳ ಬೆಳವಣಿಗೆ ಹಾಗೂ ಚಿತ್ರರಂಗದ ಬದಲಾವಣೆಗಳ ಕುರಿತು ಹಂಚಿಕೊಂಡ ಆಸಕ್ತಿದಾಯಕ ವಿಚಾರಗಳು.


Click the Play button to hear this message in audio format

ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ್ದ ನಿರ್ದೇಶಕ ಪವನ್ ಕುಮಾರ್ ಅವರ ‘ಯು-ಟರ್ನ್’ ಸಿನಿಮಾ ಬಿಡುಗಡೆಯಾಗಿ ಯಶಸ್ವಿಯಾಗಿ ಒಂದು ದಶಕ ಪೂರೈಸಿದೆ. ಈ ವಿಶೇಷ ಸಂದರ್ಭದಲ್ಲಿ ಚಿತ್ರದ ನಾಯಕಿ ಶ್ರದ್ಧಾ ಶ್ರೀನಾಥ್ ಅವರು ತಮ್ಮ ಹತ್ತು ವರ್ಷಗಳ ಸಿನಿ ಪಯಣ, ಚಿತ್ರರಂಗದಲ್ಲಿನ ಬದಲಾವಣೆಗಳು ಮತ್ತು ಪ್ರಾದೇಶಿಕ ಚಿತ್ರಗಳ ಬೆಳವಣಿಗೆಯ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ತಾವು ಯಾವುದೇ ಗಾಡ್‌ಫಾದರ್ ಅಥವಾ ಭವ್ಯವಾದ ಲಾಂಚ್ ಪ್ಲಾನ್ ಇಲ್ಲದೆ ಚಿತ್ರರಂಗಕ್ಕೆ ಕಾಲಿಟ್ಟಿದ್ದಾಗಿ ನೆನಪಿಸಿಕೊಂಡ ಶ್ರದ್ಧಾ, ಕಾರ್ಪೊರೇಟ್ ವಕೀಲಿ ವೃತ್ತಿಯನ್ನು ಬಿಟ್ಟು ಚಿತ್ರರಂಗಕ್ಕೆ ಬಂದ ಪ್ರತಿಯೊಂದು ಕ್ಷಣವೂ ಸಾರ್ಥಕ ಎನಿಸಿದೆ ಎಂದಿದ್ದಾರೆ. ಯು-ಟರ್ನ್ ಆಡಿಷನ್ ಸಮಯವನ್ನು ನೆನಪಿಸಿಕೊಳ್ಳುತ್ತಾ, ತಾವು ಮಧ್ಯಮ ವರ್ಗದ ಕನ್ನಡದ ಹುಡುಗಿಯಂತೆ ಮಾತನಾಡುವುದಿಲ್ಲ ಎಂದು ನಿರ್ದೇಶಕ ಪವನ್ ಹೇಳಿದ್ದಾಗ ತಮಗೆ ಅವಕಾಶ ಸಿಗುವುದಿಲ್ಲ ಎಂದೇ ಭಾವಿಸಿದ್ದಾಗಿ ಅವರು ತಿಳಿಸಿದ್ದಾರೆ. ಆದರೆ ಶೂಟಿಂಗ್ ವೇಳೆ ಬಿಟಿಎಸ್ ದೃಶ್ಯಗಳಿಗಾಗಿ ರೆಕಾರ್ಡ್ ಮಾಡಲು ಹೇಳಿದಾಗ ತಮಗೆ ಸಿನಿಮಾ ಸಿಕ್ಕಿರುವುದು ಖಾತ್ರಿಯಾಯಿತು ಎಂದು ಅವರು ಆ ದಿನಗಳನ್ನು ಸ್ಮರಿಸಿದ್ದಾರೆ. ಅಲ್ಲದೆ, ಇಂದಿಗೂ ತಮ್ಮ ಸ್ನೇಹಿತರು ಯು-ಟರ್ನ್ ಸಿನಿಮಾದ ಅಭಿನಯವೇ ಅತ್ಯಂತ ನೈಜವಾದುದು ಎಂದು ಹೇಳುತ್ತಾರೆ, ಏಕೆಂದರೆ ಮೊದಲ ಸಿನಿಮಾದಲ್ಲಿ ಒಂದು ರೀತಿಯ ಮುಗ್ಧತೆ ಇರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಯು-ಟರ್ನ್ ಯಶಸ್ಸಿನ ನಂತರ ಶ್ರದ್ಧಾ ತಮಿಳಿನಲ್ಲಿ ಮಾಧವನ್ ಎದುರು 'ವಿಕ್ರಮ್ ವೇದಾ' ಹಾಗೂ ತೆಲುಗಿನಲ್ಲಿ ನಾನಿ ಜೊತೆ ನಟಿಸುವ ಮೂಲಕ ಪರಭಾಷೆಗಳಿಗೂ ಕಾಲಿಟ್ಟರು. ತಮಿಳು ಮತ್ತು ತೆಲುಗು ಚಿತ್ರರಂಗಕ್ಕೆ ಪ್ರವೇಶಿಸಿದ್ದು ಯಾವುದೇ ಪೂರ್ವಯೋಜಿತ ತಂತ್ರವಾಗಿರಲಿಲ್ಲ, ಅದು ಸಹಜವಾಗಿಯೇ ಒದಗಿಬಂತು ಎಂದು ಅವರು ಹೇಳಿದ್ದಾರೆ. ಸೇನಾ ಕಂಟೋನ್ಮೆಂಟ್‌ಗಳಲ್ಲಿ ಬೆಳೆದ ತಮಗೆ ಆರಂಭದಲ್ಲಿ ತಮಿಳು ಸಂಸ್ಕೃತಿ ಮತ್ತು ಭಾಷೆಯ ಸೊಗಡು ಸರಿಯಾಗಿ ಅರ್ಥವಾಗುತ್ತಿರಲಿಲ್ಲ. ಹೀಗಾಗಿ ವಿಕ್ರಮ್ ವೇದಾ ಸೆಟ್‌ಗಳಲ್ಲಿ ಇತರರು ಮಾತನಾಡುವುದನ್ನು ಸೂಕ್ಷ್ಮವಾಗಿ ಗಮನಿಸಿ ಕಲಿಯುತ್ತಿದ್ದಾಗಿ ಅವರು ತಿಳಿಸಿದ್ದಾರೆ. ಇದರೊಂದಿಗೆ ಕನ್ನಡದ 'ಆಪರೇಷನ್ ಅಲಮೇಲಮ್ಮ' ಚಿತ್ರಕ್ಕೆ ಸಿಕ್ಕ ಪ್ರಶಂಸೆಯನ್ನು ಅವರು ಇಂದಿಗೂ ನೆನಪಿಸಿಕೊಳ್ಳುತ್ತಾರೆ.

ಇತ್ತೀಚಿನ ದಿನಗಳಲ್ಲಿ ಹೆಚ್ಚು ಚಾಲ್ತಿಯಲ್ಲಿರುವ 'ಪ್ಯಾನ್-ಇಂಡಿಯಾ' ಎಂಬ ಲೇಬಲ್ ಬರುವ ಮುನ್ನವೇ ಪ್ರಾದೇಶಿಕ ಸಿನಿಮಾಗಳು ಗಡಿ ದಾಟುವುದನ್ನು ತಾವು ಕಂಡಿರುವುದಾಗಿ ಶ್ರದ್ಧಾ ಹೇಳಿದ್ದಾರೆ. ಯು-ಟರ್ನ್ ಸಿನಿಮಾ ಬಿಡುಗಡೆಯಾದಾಗ ಚೆನ್ನೈ ಹಾಗೂ ದೆಹಲಿಯಲ್ಲಿ ಕೇವಲ ಒಂದು ಅಥವಾ ಎರಡು ಶೋಗಳಿದ್ದರೂ ಪ್ರೇಕ್ಷಕರು ಮುಖಾಮುಖಿ ಪ್ರಚಾರದ (ವರ್ಡ್ ಆಫ್ ಮೌತ್) ಮೂಲಕ ಚಿತ್ರವನ್ನು ನೋಡಲು ಕಾಯುತ್ತಿದ್ದರು. ಇಂದು ಪ್ರೇಕ್ಷಕರು ಪ್ರಾದೇಶಿಕ ಚಿತ್ರಗಳನ್ನು ಮುಕ್ತವಾಗಿ ಸ್ವೀಕರಿಸುತ್ತಿದ್ದು, ಚಿತ್ರರಂಗಗಳ ನಡುವಿನ ತಾರತಮ್ಯ ದೂರವಾಗಿದೆ ಮತ್ತು ಒಟಿಟಿ ವೇದಿಕೆಗಳು ಎಲ್ಲರಿಗೂ ಹೊಸ ಅವಕಾಶಗಳನ್ನು ಸೃಷ್ಟಿಸಿವೆ ಎಂದು ಅವರು ವಿಶ್ಲೇಷಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪ್ರೊಫೈಲ್‌ನಲ್ಲಿ 'ನಟಿ, ಹಿರೋಯಿನ್ ಅಲ್ಲ' ಎಂದು ಬರೆದುಕೊಂಡಿರುವ ಬಗ್ಗೆ ಸ್ಪಷ್ಟನೆ ನೀಡಿರುವ ಶ್ರದ್ಧಾ, ಭಾರತೀಯ ಚಿತ್ರರಂಗದಲ್ಲಿ 'ಹೀರೋಯಿನ್' ಎಂದರೆ ಕೇವಲ ಮುದ್ದಾಗಿರುವ, ನಾಯಕ ಬಂದು ರಕ್ಷಿಸುವ ಒಂದು ನಿರ್ದಿಷ್ಟ ಚೌಕಟ್ಟಿನ ಪಾತ್ರ ಎಂಬ ಭಾವನೆ ಇದೆ. ಆದರೆ ತಾವು ಚಿತ್ರರಂಗಕ್ಕೆ ಬಂದಿರುವುದು ನಟಿಸುವುದಕ್ಕಾಗಿ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. ಕಮರ್ಷಿಯಲ್ ಪಾತ್ರಗಳಲ್ಲಿ ನಟಿಸಲು ಪ್ರಯತ್ನಿಸಿದಾಗ ತಮಗೆ ಭಾವನಾತ್ಮಕವಾಗಿ ಪ್ರಾಮಾಣಿಕವಾಗಿರಲು ಸಾಧ್ಯವಾಗಲಿಲ್ಲ, ಅದಕ್ಕಾಗಿಯೇ ತಮಗೆ ನೈಜ ಕಥೆಗಳು ಮತ್ತು ಸಾಮಾನ್ಯ ಜನರ ಭಾವನೆಗಳನ್ನು ಬಿಂಬಿಸುವ ಪಾತ್ರಗಳು ಹೆಚ್ಚು ಇಷ್ಟವಾಗುತ್ತವೆ ಎಂದಿದ್ದಾರೆ.

ಪ್ರಸ್ತುತ ದಿನಗಳಲ್ಲಿ ನಟರ ಮೇಲಿರುವ ಸಾಮಾಜಿಕ ಜಾಲತಾಣಗಳ ಒತ್ತಡದ ಬಗ್ಗೆ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ನಟರು ಕೇವಲ ನಟರಾಗಿ ಉಳಿದಿಲ್ಲ, ಅವರು ಒಂದು ಬ್ರ್ಯಾಂಡ್ ಆಗಿ ಬದಲಾಗಿದ್ದಾರೆ. ಸದಾ ಆನ್‌ಲೈನ್‌ನಲ್ಲಿ ಕಾಣಿಸಿಕೊಳ್ಳದಿದ್ದರೆ ಜನ ಮರೆತುಬಿಡುತ್ತಾರೆ ಎಂಬ ಒತ್ತಡ ಇರುತ್ತದೆ. ತಮಗೆ ವೈಯಕ್ತಿಕ ಜೀವನವನ್ನು ಸದಾ ಹಂಚಿಕೊಳ್ಳುವುದು ಇಷ್ಟವಿಲ್ಲದಿದ್ದರೂ, ಇದೊಂದು ಆಟ ಎಂದು ಭಾವಿಸಿ ಮುನ್ನಡೆಯಬೇಕಿದೆ ಎಂದು ಅವರು ಹೇಳಿದ್ದಾರೆ. ಮುಂಬರುವ ದಿನಗಳಲ್ಲಿ ಐತಿಹಾಸಿಕ, ಸೈನ್ಸ್ ಫಿಕ್ಷನ್ ಹಾಗೂ ದೈಹಿಕವಾಗಿ ಹೆಚ್ಚು ಶ್ರಮ ಬೇಡುವ ವಿಭಿನ್ನ ಪಾತ್ರಗಳಲ್ಲಿ ನಟಿಸುವ ಆಸೆಯಿದ್ದು, 'ಕಾಂತಾರ' ಅಥವಾ 'ಪೊನ್ನಿಯಿನ್ ಸೆಲ್ವನ್' ನಂತಹ ಸಿನಿಮಾ ಜಗತ್ತಿನ ಭಾಗವಾಗಲು ಮತ್ತು ಭವಿಷ್ಯದಲ್ಲಿ ರಾಣಿ ಅಥವಾ ಸೀಕ್ರೆಟ್ ಏಜೆಂಟ್ ಪಾತ್ರಗಳನ್ನು ಮಾಡಲು ಕಾಯುತ್ತಿರುವುದಾಗಿ ಶ್ರದ್ಧಾ ಶ್ರೀನಾಥ್ ಆಶಯ ವ್ಯಕ್ತಪಡಿಸಿದ್ದಾರೆ.

Read More
Next Story