
ಲಾವಣಿ ಕಲಾವಿದೆ ವಿಠಾಬಾಯಿ ನಾರಾಯಣಗಾಂವ್ಕರ್ ಅವರ ಜೀವನ ಆಧಾರಿತ ಈ ಚಿತ್ರದ ಶೀರ್ಷಿಕೆಯನ್ನು 'ವಿಠಾಬಾಯಿ' ಎಂದು ಬದಲಾಯಿಸುವಂತೆ ಎನ್‌ಸಿಪಿ ಮತ್ತು ಅವರ ಕುಟುಂಬಸ್ಥರು ಚಿತ್ರತಂಡವನ್ನು ಒತ್ತಾಯಿಸಿದ್ದಾರೆ.
ಶ್ರದ್ಧಾ ಕಪೂರ್ ಅವರ 'ಈಥಾ' ಸಿನಿಮಾ ಹೆಸರಿಗೆ ಭಾರಿ ವಿರೋಧ; ಎನ್‌ಸಿಪಿ ಆಕ್ಷೇಪ
ಬಾಲಿವುಡ್ ನಟಿ ಶ್ರದ್ಧಾ ಕಪೂರ್ ನಟನೆಯ 'ಈಥಾ' ಚಿತ್ರ ಬಿಡುಗಡೆಗೂ ಮುನ್ನವೇ ವಿವಾದಕ್ಕೆ ಸಿಲುಕಿದೆ. ಮಹಾರಾಷ್ಟ್ರದ ಪ್ರಸಿದ್ಧ ಲಾವಣಿ ಕಲಾವಿದೆ ವಿಠಾಬಾಯಿ ನಾರಾಯಣಗಾಂವ್ಕರ್ ಅವರ ಜೀವನ ಆಧಾರಿತ ಈ ಚಿತ್ರದ ಶೀರ್ಷಿಕೆಯನ್ನು 'ವಿಠಾಬಾಯಿ' ಎಂದು ಬದಲಾಯಿಸುವಂತೆ ಎನ್‌ಸಿಪಿ ಮತ್ತು ಅವರ ಕುಟುಂಬಸ್ಥರು ಚಿತ್ರತಂಡವನ್ನು ಒತ್ತಾಯಿಸಿದ್ದಾರೆ.
ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ 'ಈಥಾ' ಚಿತ್ರ ಬಿಡುಗಡೆಗೂ ಮುನ್ನವೇ ಭಾರಿ ವಿವಾದಕ್ಕೆ ಸಿಲುಕಿದೆ. ಮಹಾರಾಷ್ಟ್ರದ ಹೆಮ್ಮೆಯ ಲಾವಣಿ ಹಾಗೂ ತಮಾಶಾ ಕಲಾವಿದೆ ವಿಠಾಬಾಯಿ ಭಾವು ಮಾಂಗ್ ನಾರಾಯಣಗಾಂವ್ಕರ್ ಅವರ ಜೀವನ ಆಧಾರಿತ ಈ ಚಿತ್ರದ ಶೀರ್ಷಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಚಿತ್ರಕ್ಕೆ 'ಈಥಾ' ಎಂದು ಹೆಸರಿಟ್ಟಿರುವುದು ಈ ಮಹಾನ್ ಕಲಾವಿದೆಯ ಪರಂಪರೆಗೆ ಮಾಡುವ ಅಪಚಾರ ಎಂದು ಎನ್‌ಸಿಪಿ (ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ) ಮತ್ತು ವಿಠಾಬಾಯಿ ಅವರ ಕುಟುಂಬಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಎನ್‌ಸಿಪಿ ಪಕ್ಷದ ಸಾಂಸ್ಕೃತಿಕ ವಿಭಾಗವು ಚಿತ್ರತಂಡಕ್ಕೆ ಅಧಿಕೃತವಾಗಿ ಪತ್ರ ಬರೆದಿದ್ದು, ಚಿತ್ರದ ಹೆಸರನ್ನು 'ಈಥಾ' ಬದಲಾಗಿ 'ವಿಠಾ' ಅಥವಾ 'ವಿಠಾಬಾಯಿ' ಎಂದು ಮರುನಾಮಕರಣ ಮಾಡಬೇಕೆಂದು ವಿನಂತಿಸಿದೆ. ವಿಠಾಬಾಯಿ ಅವರು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದ ಮಹಾನ್ ಕಲಾವಿದೆಯಾಗಿದ್ದು, ಮುಂಬರುವ ಪೀಳಿಗೆಗೆ ಅವರ ನಿಜವಾದ ಹೆಸರು ತಿಳಿಯಬೇಕಾದರೆ ಚಿತ್ರಕ್ಕೆ ಅವರ ಹೆಸರನ್ನೇ ಇಡಬೇಕು ಎಂದು ಪಕ್ಷದ ಮುಖಂಡರು ಒತ್ತಾಯಿಸಿದ್ದಾರೆ. ತಮಗೆ ಸಿನಿಮಾದ ಬಗ್ಗೆ ಯಾವುದೇ ಆಕ್ಷೇಪವಿಲ್ಲ, ಕೇವಲ ಶೀರ್ಷಿಕೆಯ ಬಗ್ಗೆ ಮಾತ್ರ ವಿರೋಧವಿದೆ ಎಂದು ಎನ್‌ಸಿಪಿ ಸ್ಪಷ್ಟಪಡಿಸಿದೆ.
ಇತ್ತ ವಿಠಾಬಾಯಿ ಅವರ ಮೊಮ್ಮಗ ಮತ್ತು ವಿಠಾಬಾಯಿ ನಾರಾಯಣಗಾಂವ್ಕರ್ ತಮಾಶಾ ಮಂಡಳಿಯ ಮಾಲೀಕರಾದ ಮೋಹಿತ್ ನಾರಾಯಣಗಾಂವ್ಕರ್ ಕೂಡ ಈ ಬೇಡಿಕೆಯನ್ನು ಬೆಂಬಲಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಪ್ರೀತಿಯಿಂದ ಅವರನ್ನು 'ಈಥಾ' ಎಂದು ಕರೆಯುತ್ತಿದ್ದರಾದರೂ, ಅಧಿಕೃತವಾಗಿ ಅವರು 'ವಿಠಾಬಾಯಿ' ಎಂದೇ ಪ್ರಸಿದ್ಧರಾಗಿದ್ದರು. ಹಾಗಾಗಿ ಚಿತ್ರಕ್ಕೆ ಅವರ ಪೂರ್ಣ ಹೆಸರನ್ನು ಬಳಸುವುದೇ ಸೂಕ್ತ ಎಂದು ಕುಟುಂಬಸ್ಥರು ಹೇಳಿದ್ದಾರೆ. ಇದಲ್ಲದೆ, ಚಿತ್ರ ಬಿಡುಗಡೆಗೂ ಮುನ್ನ ತಮಗೆ ವಿಶೇಷ ಪ್ರದರ್ಶನ ಏರ್ಪಡಿಸಬೇಕು ಮತ್ತು ಚಿತ್ರದ ಹಕ್ಕುಗಳನ್ನು ಪಡೆಯುವಲ್ಲಿ ನಿರ್ಮಾಪಕರು ಕುಟುಂಬದೊಂದಿಗೆ ಸರಿಯಾದ ಮಾತುಕತೆ ನಡೆಸಿಲ್ಲ ಎಂಬ ಆರೋಪಗಳೂ ಕೇಳಿಬಂದಿವೆ.
ಲಕ್ಷ್ಮಣ್ ಉತೇಕರ್ ನಿರ್ದೇಶನದ ಹಾಗೂ ದಿನೇಶ್ ವಿಜನ್ ಅವರ ಮ್ಯಾಡಾಕ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ರಣದೀಪ್ ಹೂಡಾ, ಮೊಹಮ್ಮದ್ ಜೀಶನ್ ಅಯ್ಯೂಬ್ ಮತ್ತು ನಾನಾ ಪಟೇಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೂನ್ 23 ರಂದು ಬಿಡುಗಡೆಯಾದ ಚಿತ್ರದ ಟೀಸರ್ ಈಗಾಗಲೇ ಭಾರಿ ಕುತೂಹಲ ಮೂಡಿಸಿದ್ದು, ಚಿತ್ರವು ಆಗಸ್ಟ್ 28 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.

