
2022ರ ಮಾದಕ ದ್ರವ್ಯ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ನಟಿ ಶ್ರದ್ಧಾ ಕಪೂರ್ ಮತ್ತು ನೋರಾ ಫತೇಹಿ ದೋಷಮುಕ್ತರಾಗುವ ಸಾಧ್ಯತೆಯಿದೆ.
ಡ್ರಗ್ಸ್ ಪ್ರಕರಣ| ಶ್ರದ್ಧಾ ಕಪೂರ್ ಮತ್ತು ನೋರಾ ಫತೇಹಿಗೆ ಕ್ಲೀನ್ ಚಿಟ್ ಸಾಧ್ಯತೆ
2022ರ ಮಾದಕ ದ್ರವ್ಯ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ನಟಿ ಶ್ರದ್ಧಾ ಕಪೂರ್ ಮತ್ತು ನೋರಾ ಫತೇಹಿ ದೋಷಮುಕ್ತರಾಗುವ ಸಾಧ್ಯತೆಯಿದೆ ಎಂದು ಮುಂಬೈ ಪೊಲೀಸರ ಮೂಲಗಳು ತಿಳಿಸಿವೆ.
2022ರ ಬಹುಚರ್ಚಿತ ಮಾದಕ ದ್ರವ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿಯರಾದ ಶ್ರದ್ಧಾ ಕಪೂರ್ ಮತ್ತು ನೋರಾ ಫತೇಹಿ ಅವರಿಗೆ ಮುಂಬೈ ಪೊಲೀಸರು ಶೀಘ್ರದಲ್ಲೇ ಕ್ಲೀನ್ ಚಿಟ್ ನೀಡುವ ಸಾಧ್ಯತೆಯಿದೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರ ಅಪರಾಧ ವಿಭಾಗ ಮತ್ತು ಮಾದಕ ದ್ರವ್ಯ ವಿರೋಧಿ ದಳಕ್ಕೆ ಇವರ ವಿರುದ್ಧ ಯಾವುದೇ ಬಲವಾದ ಪುರಾವೆಗಳು ಲಭ್ಯವಾಗಿಲ್ಲ ಎಂದು ವರದಿಯಾಗಿದೆ.
ಈ ತನಿಖೆಯು 2022ರಲ್ಲಿ ಮೊಹಮ್ಮದ್ ಸಲೀಂ ಎಂಬ ವ್ಯಕ್ತಿಯ ಬಂಧನದೊಂದಿಗೆ ಆರಂಭವಾಗಿತ್ತು. ಆತನಿಂದ ವಶಪಡಿಸಿಕೊಳ್ಳಲಾದ ಮೆಫೆಡ್ರೋನ್ ಡ್ರಗ್ಸ್ ಪ್ರಕರಣದಲ್ಲಿ ಹಲವಾರು ಗಣ್ಯರ ಹೆಸರುಗಳು ಕೇಳಿಬಂದಿದ್ದವು. 2025ರಲ್ಲಿ ಈ ಕುರಿತು ವಿಚಾರಣೆ ಎದುರಿಸಿದ್ದ ಶ್ರದ್ಧಾ ಮತ್ತು ನೋರಾ ವಿರುದ್ಧ ಡ್ರಗ್ಸ್ ಜಾಲದೊಂದಿಗೆ ನೇರ ಸಂಪರ್ಕವಿರುವ ಯಾವುದೇ ದಾಖಲೆಗಳು ಸಿಗದ ಕಾರಣ, ಮುಂಬರುವ ಪೂರಕ ದೋಷಾರೋಪ ಪಟ್ಟಿಯಲ್ಲಿ ಅವರ ಹೆಸರನ್ನು ಕೈಬಿಡಲು ಪೊಲೀಸರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಈ ಬೆಳವಣಿಗೆಯಿಂದಾಗಿ ನಟಿಯರ ಜೊತೆಗೆ ಈ ಪ್ರಕರಣದಲ್ಲಿ ಹೆಸರಿಸಲಾಗಿದ್ದ ಒರ್ಹಾನ್ ಅವತ್ರಮಣಿ ಅಲಿಯಾಸ್ ಓರಿ ಮತ್ತು ಸಿದ್ದಾಂತ್ ಕಪೂರ್ ಅವರಿಗೂ ದೊಡ್ಡ ಮಟ್ಟದ ಸಮಾಧಾನ ಸಿಗುವ ನಿರೀಕ್ಷೆಯಿದೆ. ಈಗಾಗಲೇ ಪೊಲೀಸರು ಈ ಕುರಿತಾದ ಅಂತಿಮ ವರದಿಯನ್ನು ಸಿದ್ಧಪಡಿಸಿದ್ದು, ಶೀಘ್ರದಲ್ಲೇ ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ. ಇದರಿಂದಾಗಿ ಕಳೆದ ಹಲವು ಸಮಯದಿಂದ ಕಾನೂನು ಸಂಕಷ್ಟ ಎದುರಿಸುತ್ತಿದ್ದ ಈ ತಾರೆಯರು ನಿರಾಳರಾಗಲಿದ್ದಾರೆ.
ಮುಂಬೈ ಪೊಲೀಸರ ಆಂಟಿ-ನಾರ್ಕೋಟಿಕ್ಸ್ ಸೆಲ್ ಮುಂಬೈನ ಬಾಂದ್ರಾ ಭಾಗದಲ್ಲಿ ಕಾರ್ಯಾಚರಣೆ ನಡೆಸಿ ಮೊಹಮ್ಮದ್ ಸಲೀಂ ಸುಹೇಲ್ ಶೇಖ್ ಎಂಬ ಡ್ರಗ್ ಪೆಡ್ಲರ್‌ನನ್ನು ಬಂಧಿಸಿತ್ತು. ಆತನಿಂದ ಸುಮಾರು 1.19 ಲಕ್ಷ ರೂಪಾಯಿ ಮೌಲ್ಯದ ಮೆಫೆಡ್ರೋನ್ ಎಂಬ ಮಾದಕ ದ್ರವ್ಯವನ್ನು ವಶಪಡಿಸಿಕೊಳ್ಳಲಾಗಿತ್ತು. ಬಂಧಿತ ಪೆಡ್ಲರ್ ತಾನು ಬಾಲಿವುಡ್‌ನ ಪ್ರಮುಖ ತಾರೆಯರು ಭಾಗವಹಿಸುವ ಹೈ-ಪ್ರೊಫೈಲ್ ಪಾರ್ಟಿಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದಾಗಿ ಹೇಳಿಕೆ ನೀಡಿದ್ದನು. ಈ ಹೇಳಿಕೆಯ ಆಧಾರದ ಮೇಲೆ ಪೊಲೀಸರು ತನಿಖೆಯನ್ನು ವಿಸ್ತರಿಸಿದರು.

