ವಿಜಯ್ ದೇವರಕೊಂಡ 6 ಕ್ಯಾರವಾನ್ ಕೇಳಿದ್ದು ನಿಜವೇ?
x

ನಟ ವಿಜಯ್ ದೇವರಕೊಂಡ ಕ್ಯಾರವಾನ್ ವಿವಾದದ ಅಸಲಿ ಸತ್ಯ ಇಲ್ಲಿದೆ

ವಿಜಯ್ ದೇವರಕೊಂಡ 6 ಕ್ಯಾರವಾನ್ ಕೇಳಿದ್ದು ನಿಜವೇ?

ನಟ ವಿಜಯ್ ದೇವರಕೊಂಡ 'ರಣಬಾಲಿ' ಚಿತ್ರೀಕರಣದಲ್ಲಿ 6 ಕ್ಯಾರವಾನ್, 50 ಸಹಾಯಕರಿಗೆ ಬೇಡಿಕೆ ಇಟ್ಟಿದ್ದಾರೆ ಎಂಬ ಸುಳ್ಳು ಸ್ಕ್ರೀನ್‌ಶಾಟ್ ವದಂತಿಗಳನ್ನು ಅವರ ತಂಡ ತಳ್ಳಿಹಾಕಿದೆ.


Click the Play button to hear this message in audio format

ತೆಲುಗು ಚಿತ್ರರಂಗದ ಖ್ಯಾತ ನಟ ವಿಜಯ್ ದೇವರಕೊಂಡ ಅವರ ಹೆಸರಿಗೆ ಮಸಿ ಬಳಿಯುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯೊಂದನ್ನು ಸೃಷ್ಟಿಸಿ ಹರಿಬಿಡಲಾಗಿದ್ದು, ನಟನ ಆಪ್ತ ತಂಡ ಮತ್ತು ಸಂಬಂಧಪಟ್ಟ ವೆಬ್‌ಸೈಟ್ ಈ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.

ವಿಜಯ್ ದೇವರಕೊಂಡ ಅವರು ತಮ್ಮ ಮುಂಬರುವ 'ರಣಬಾಲಿ' ಚಿತ್ರದ ಶೂಟಿಂಗ್ ಸೆಟ್‌ನಲ್ಲಿ ಬರೋಬ್ಬರಿ 5 ರಿಂದ 6 ಕ್ಯಾರವಾನ್‌ಗಳು ಹಾಗೂ 40 ರಿಂದ 50 ಮಂದಿ ಸಹಾಯಕರಿಗಾಗಿ ಬೇಡಿಕೆ ಇಟ್ಟು ನಿರ್ಮಾಪಕರಿಗೆ ತೊಂದರೆ ನೀಡುತ್ತಿದ್ದಾರೆ ಮತ್ತು ಇದರಿಂದ ಬೇಸತ್ತ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯು ಪ್ರೊಡ್ಯೂಸರ್ಸ್ ಕೌನ್ಸಿಲ್ ಮೆಟ್ಟಿಲೇರಿದೆ ಎಂಬ ಸುಳ್ಳು ಸ್ಕ್ರೀನ್‌ಶಾಟ್‌ಗಳು 'ಎಕ್ಸ್' (ಟ್ವಿಟರ್) ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದ್ದವು. ಪ್ರಮುಖ ಸಿನಿಮಾ ವೆಬ್‌ಸೈಟ್ ಆದ '123ತೆಲುಗು' ವರದಿಯ ಶೈಲಿಯಲ್ಲೇ ಡಿಜಿಟಲ್ ರೂಪದಲ್ಲಿ ಈ ನಕಲಿ ಸ್ಕ್ರೀನ್‌ಶಾಟ್ ಅನ್ನು ಸೃಷ್ಟಿಸಿ, ದುರುದ್ದೇಶಪೂರ್ವಕವಾಗಿ ಹರಡಲಾಗಿತ್ತು.

ಈ ವ್ಯವಸ್ಥಿತ ಅಪಪ್ರಚಾರದ ವಿರುದ್ಧ ತಕ್ಷಣವೇ ಪ್ರತಿಕ್ರಿಯಿಸಿರುವ ವಿಜಯ್ ದೇವರಕೊಂಡ ಅವರ ಪ್ರಚಾರ ಜವಾಬ್ದಾರಿ ನಿರ್ವಹಿಸುವ ತಂಡ , ಈ ವದಂತಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಮತ್ತು ಇವೆಲ್ಲವೂ ಸಂಪೂರ್ಣವಾಗಿ ಆಧಾರರಹಿತ ಎಂದು ಸ್ಪಷ್ಟಪಡಿಸಿದೆ.

ನಟನ ಘನತೆಗೆ ಧಕ್ಕೆ ತರುವ ಉದ್ದೇಶದಿಂದಲೇ ಕೆಲವು ಕಿಡಿಗೇಡಿಗಳು ಈ ರೀತಿಯ ನಕಲಿ ಚಿತ್ರಗಳನ್ನು ಸೃಷ್ಟಿಸಿ ಹಂಚಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದೆ. ಅತ್ತ ತಮ್ಮ ಲೋಗೋ ಮತ್ತು ಬ್ರ್ಯಾಂಡ್ ಹೆಸರನ್ನು ದುರುಪಯೋಗಪಡಿಸಿಕೊಂಡಿರುವುದರ ವಿರುದ್ಧ '123ತೆಲುಗು' ಜಾಲತಾಣವೂ ಸಹ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ತಾವು ಈ ರೀತಿಯ ಯಾವುದೇ ಸುದ್ದಿಯನ್ನು ಪ್ರಕಟಿಸಿಲ್ಲ ಎಂದು ಹೇಳಿದೆ.

ಅಲ್ಲದೆ, ತಮ್ಮ ಹೆಸರನ್ನು ಬಳಸಿಕೊಂಡು ಇಂತಹ ನಕಲಿ ಪೋಸ್ಟ್‌ಗಳನ್ನು ಹರಿಬಿಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ರಾಹುಲ್ ಸಾಂಕೃತ್ಯನ್ ನಿರ್ದೇಶನದ 'ರಣಬಾಲಿ' ಚಿತ್ರದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸುತ್ತಿದ್ದು, ಸಿನಿಮಾ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲು ಸಜ್ಜಾಗುತ್ತಿದೆ.

Read More
Next Story