
ಸಂಜಯ್ ಲೀಲಾ ಭನ್ಸಾಲಿ ವಿರುದ್ಧ ಎಫ್‌ಐಆರ್
'ಲವ್ ಅಂಡ್ ವಾರ್' ಸೆಟ್‌ನಲ್ಲಿ ಕಾರ್ಮಿಕನ ಸಾವು: ಭನ್ಸಾಲಿ ವಿರುದ್ಧ ಎಫ್‌ಐಆರ್
ಲವ್ ಅಂಡ್ ವಾರ್ ಚಿತ್ರೀಕರಣದ ವೇಳೆ ಕಾರ್ಮಿಕ ಸಾವನ್ನಪ್ಪಿದ್ದು, ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ವಿರುದ್ಧ ಎಫ್‌ಐಆರ್ ಹಾಗೂ 1 ಕೋಟಿ ರೂ. ಪರಿಹಾರ ನೀಡುವಂತೆ AICWA ಆಗ್ರಹಿಸಿದೆ.
ಬಾಲಿವುಡ್‌ನ ಬಹುನಿರೀಕ್ಷಿತ 'ಲವ್ ಅಂಡ್ ವಾರ್' ಚಿತ್ರದ ಶೂಟಿಂಗ್ ಸೆಟ್‌ನಲ್ಲಿ ಕಾರ್ಮಿಕನೊಬ್ಬ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಮತ್ತು ನಿರ್ಮಾಪಕರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಅಖಿಲ ಭಾರತ ಸಿನೆಮಾ ಕಾರ್ಮಿಕರ ಸಂಘ (AICWA) ಒತ್ತಾಯಿಸಿದೆ.
ಮುಂಬೈನ ಫಿಲ್ಮ್ ಸಿಟಿ ಬಳಿಯ ರಾಯಲ್ ಪಂಪ್ ಸ್ಟುಡಿಯೋದಲ್ಲಿ ಜೂನ್ 17 ರಂದು ಚಿತ್ರೀಕರಣದ ಸೆಟ್‌ನಲ್ಲಿ ಕೆಲಸ ಮಾಡುತ್ತಿದ್ದ 42 ವರ್ಷದ ಬಡಗಿ ಚಂದ್ರಧಾರಿ ಸಿಂಗ್ ಯಾದವ್ ಎಂಬುವವರು ಮೃತಪಟ್ಟಿದ್ದರು. ಆರಂಭದಲ್ಲಿ ಕಾರ್ಮಿಕ ವಿದ್ಯುತ್ ಆಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದ್ದರೂ, ಈ ಬಗ್ಗೆ ತಮಗೆ ಸಂಶಯವಿದ್ದು ಸಂಪೂರ್ಣ ತನಿಖೆಯಾಗಬೇಕು ಎಂದು ಸಂಘಟನೆ ಆಗ್ರಹಿಸಿದೆ.
ಈ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಪತ್ರ ಬರೆದಿರುವ ಅಖಿಲ ಭಾರತ ಸಿನೆಮಾ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್ ಶ್ಯಾಮಲಾಲ್ ಗುಪ್ತಾ ಅವರು, ಘಟನೆಯ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಮತ್ತು ಶೂಟಿಂಗ್ ಸೆಟ್‌ನಲ್ಲಿ ಕಡ್ಡಾಯ ಸುರಕ್ಷತಾ ನಿಯಮಗಳನ್ನು ಸರಿಯಾಗಿ ಪಾಲಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಇದರೊಂದಿಗೆ ಚಿತ್ರೀಕರಣದ ಸೆಟ್‌ನಲ್ಲಿ ಸಂಪೂರ್ಣ ಸುರಕ್ಷತಾ ಆಡಿಟ್ ನಡೆಸುವವರೆಗೆ 'ಲವ್ ಅಂಡ್ ವಾರ್' ಚಿತ್ರದ ಶೂಟಿಂಗ್ ಅನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ.
ಮೃತ ಕಾರ್ಮಿಕ ಚಂದ್ರಧಾರಿ ಸಿಂಗ್ ಯಾದವ್ ಅವರ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಸಂಘಟನೆಯು ಸರ್ಕಾರ ಮತ್ತು ಚಿತ್ರತಂಡವನ್ನು ಆಗ್ರಹಿಸಿದೆ. ಮೃತ ಕಾರ್ಮಿಕನಿಗೆ ಪತ್ನಿ ಮತ್ತು ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳಿದ್ದು, ಅವರೇ ಕುಟುಂಬದ ಏಕೈಕ ಆಧಾರವಾಗಿದ್ದರು. ಹೀಗಾಗಿ ಅವರ ಪತ್ನಿಗೆ ಉದ್ಯೋಗ ಅಥವಾ ಆರ್ಥಿಕ ನೆರವು ನೀಡುವುದರ ಜೊತೆಗೆ ಹೆಣ್ಣುಮಕ್ಕಳ ಶಿಕ್ಷಣ ಮತ್ತು ಕಲ್ಯಾಣಕ್ಕಾಗಿ ದೀರ್ಘಕಾಲೀನ ಬೆಂಬಲವನ್ನು ನೀಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ಹಿಂದೆ ಭನ್ಸಾಲಿ ಅವರ 'ದೇವದಾಸ್' ಮತ್ತು 'ಪದ್ಮಾವತ್' ಸಿನಿಮಾಗಳ ಸೆಟ್‌ನಲ್ಲೂ ಇಂತಹ ಅಪಘಾತಗಳು ನಡೆದಿದ್ದವು ಎಂದು ನೆನಪಿಸಿರುವ ಸಂಘಟನೆಯು, ಚಿತ್ರರಂಗದಲ್ಲಿ ಕಾರ್ಮಿಕರ ಸುರಕ್ಷತೆಗೆ ಕಠಿಣ ನಿಯಮಗಳ ಅಗತ್ಯವಿದೆ ಎಂದು ಪ್ರತಿಪಾದಿಸಿದೆ. ರಣಬೀರ್ ಕಪೂರ್, ಆಲಿಯಾ ಭಟ್ ಮತ್ತು ವಿಕ್ಕಿ ಕೌಶಲ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಈ ಸಿನಿಮಾ ಸದ್ಯ ಬಾಲಿವುಡ್‌ನ ಬಹುದೊಡ್ಡ ಪ್ರಾಜೆಕ್ಟ್‌ಗಳಲ್ಲಿ ಒಂದಾಗಿದೆ.

