ಕ್ಯಾನ್ಸರ್ ಪೀಡಿತ ಅಭಿಮಾನಿಗೆ ವಿಡಿಯೋ ಕಾಲ್ ಮಾಡಿದ ನಟ ಯಶ್
x

ನಟ ಯಶ್ ಕ್ಯಾನ್ಸರ್ ಪೀಡಿತ ಅಭಿಮಾನಿ ಸುನಿಲ್ ಅವರಿಗೆ ವಿಡಿಯೋ ಕಾಲ್ ಮಾಡಿ ಧೈರ್ಯ ತುಂಬಿದ್ದಾರೆ. 

ಕ್ಯಾನ್ಸರ್ ಪೀಡಿತ ಅಭಿಮಾನಿಗೆ ವಿಡಿಯೋ ಕಾಲ್ ಮಾಡಿದ ನಟ ಯಶ್

ನಟ ಯಶ್ ಕ್ಯಾನ್ಸರ್ ಪೀಡಿತ ಅಭಿಮಾನಿ ಸುನಿಲ್ ಅವರಿಗೆ ವಿಡಿಯೋ ಕಾಲ್ ಮಾಡಿ ಧೈರ್ಯ ತುಂಬಿ, ಚಿಕಿತ್ಸೆಗೆ ನೆರವಾಗುವ ಭರವಸೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.


Click the Play button to hear this message in audio format

ಟಾಕ್ಸಿಕ್ ಸಿನಿಮಾದಲ್ಲಿ ಬ್ಯುಸಿಯಾಗಿರುವ ನಟ ಯಶ್, ತಮ್ಮ ಬಿಡುವಿಲ್ಲದ ಚಿತ್ರೀಕರಣದ ವೇಳಾಪಟ್ಟಿಯ ನಡುವೆಯೂ ಕ್ಯಾನ್ಸರ್‌ನಿಂದ ಬಳಲುತ್ತಿರುವ ಅಪ್ಪಟ ಅಭಿಮಾನಿಯೊಬ್ಬರಿಗೆ ವಿಡಿಯೋ ಕಾಲ್ ಮಾಡಿ ಧೈರ್ಯ ತುಂಬುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಕ್ಯಾನ್ಸರ್‌ನಿಂದ ಬಳಲಿ ಆಸ್ಪತ್ರೆ ಸೇರಿರುವ ಅಭಿಮಾನಿಗೆ ಧೈರ್ಯ ತುಂಬಿದ್ದಲ್ಲದೆ, ಆರ್ಥಿಕ ನೆರವಿನ ಹಸ್ತವನ್ನೂ ಚಾಚಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರ ಈ ಹೃದಯಸ್ಪರ್ಶಿ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆಯಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ನಟ ಯಶ್ ಅವರ ಅಧಿಕೃತ ಅಭಿಮಾನಿ ಸಂಘದ ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಸುನಿಲ್ ಎಂಬುವವರು ಕಳೆದ ಕೆಲವು ತಿಂಗಳಿನಿಂದ ರೆಕ್ಟಲ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ತಮ್ಮ ಅಪ್ಪಟ ಅಭಿಮಾನಿಯ ಅನಾರೋಗ್ಯದ ಸುದ್ದಿ ತಿಳಿಯುತ್ತಿದ್ದಂತೆಯೇ ತಕ್ಷಣವೇ ಕಾರ್ಯಪ್ರವೃತ್ತರಾದ ಯಶ್, ತಮ್ಮ ಜಂಟಿ ಶೂಟಿಂಗ್ ಶೆಡ್ಯೂಲ್‌ಗಳ ನಡುವೆಯೂ ಸುನಿಲ್ ಅವರಿಗೆ ನೇರವಾಗಿ ವಿಡಿಯೋ ಕಾಲ್ ಮಾಡಿ ಆರೋಗ್ಯದ ಸ್ಥಿತಿಗತಿಯನ್ನು ವಿಚಾರಿಸಿದ್ದಾರೆ. ಕೇವಲ ಅಭಿಮಾನಿ ಮಾತ್ರವಲ್ಲದೆ, ಅವರ ಇಡೀ ಕುಟುಂಬಸ್ಥರ ಜೊತೆಗೂ ಅತ್ಯಂತ ಆತ್ಮೀಯವಾಗಿ ಮಾತನಾಡಿದ ಯಶ್, ಈ ಕಠಿಣ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸುವಂತೆ ಎಲ್ಲರಿಗೂ ಧೈರ್ಯ ತುಂಬಿದ್ದಾರೆ.

ವಿಡಿಯೋ ಕರೆಯಲ್ಲಿ ಸುನಿಲ್ ಅವರ ಜೊತೆ ಮಾತನಾಡಿದ ಯಶ್, ಹಲವು ವರ್ಷಗಳ ಹಳೆಯ ಒಡನಾಟ ಹಾಗೂ ಅಭಿಮಾನಿ ಸಂಘದ ಚಟುವಟಿಕೆಗಳಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಚಿಕಿತ್ಸೆಯ ಈ ಕಷ್ಟದ ಹಂತದಲ್ಲಿ ತಾವು ಸಂಪೂರ್ಣ ಬೆಂಬಲವಾಗಿ ನಿಲ್ಲುವುದಾಗಿ ಭರವಸೆ ನೀಡಿದ ನಟ, "ನೀನು ಈ ಹೋರಾಟದಲ್ಲಿ ಒಬ್ಬಂಟಿಯಲ್ಲ, ನಾನು ನಿನ್ನ ಜೊತೆಗಿದ್ದೇನೆ" ಎಂದು ಹೇಳುವ ಮೂಲಕ ಸುನಿಲ್ ಅವರಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.

ಕೆಜಿಎಫ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿರುವ ನಟ ಯಶ್, ಇದೀಗ ಟಾಕ್ಸಿಕ್ ಸಿನಿಮಾ ಮೂಲಕ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗುತ್ತಿದ್ದಾರೆ. ಇಷ್ಟೊಂದು ಬ್ಯುಸಿ ಶೆಡ್ಯೂಲ್ ನಡುವೆಯೂ ಅಭಿಮಾನಿಯ ಕಷ್ಟಕ್ಕೆ ಸ್ಪಂದಿಸಿ, ಸಮಯ ಮೀಸಲಿಟ್ಟು ಧೈರ್ಯ ತುಂಬಿದ ಯಶ್ ಅವರ ಸರಳತೆ ಮತ್ತು ಕಾಳಜಿಗೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

Read More
Next Story