
'ಕುಂಕುಮ್ ಭಾಗ್ಯ' ಧಾರಾವಾಹಿ ಖ್ಯಾತಿಯ ನಟಿ ಸಂಚಿತಾ ಉಗಾಲೆ (22) ಮುಂಬೈನ ನಲಸೋಪಾರಾ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
‘ಕುಂಕುಮ್ ಭಾಗ್ಯ’ ಧಾರಾವಾಹಿ ನಟಿ ಸಂಚಿತಾ ಉಗಾಲೆ ಆತ್ಮಹತ್ಯೆ
'ಕುಂಕುಮ್ ಭಾಗ್ಯ' ಧಾರಾವಾಹಿ ಖ್ಯಾತಿಯ ನಟಿ ಸಂಚಿತಾ ಉಗಾಲೆ (22) ಮುಂಬೈನ ನಲಸೋಪಾರಾ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ, ತನಿಖೆ ಮುಂದುವರಿದಿದೆ
ಖ್ಯಾತ ಹಿಂದಿ ಕಿರುತೆರೆ ನಟಿ, ‘ಕುಂಕುಮ್ ಭಾಗ್ಯ’ ಖ್ಯಾತಿಯ ಸಂಚಿತಾ ಉಗಾಲೆ (22) ಮುಂಬೈ ಸನಿಹದ ನಲಸೋಪಾರಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾನುವಾರ (ಜೂನ್ 14) ಸಂಜೆ 7 ರಿಂದ 7.30 ರ ಅವಧಿಯಲ್ಲಿ ನಲಸೋಪಾರಾ ಈಸ್ಟ್‌ನ ಆಚೋಲೆ ಗ್ರಾಮದಲ್ಲಿರುವ ತಮ್ಮ ನಿವಾಸದಲ್ಲಿ ಸಂಚಿತಾ ಈ ತೀವ್ರ ನಿರ್ಧಾರ ಕೈಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿಗಳ ಮಾಹಿತಿ ಪ್ರಕಾರ, ಸಂಚಿತಾ ತಮ್ಮ ಬೆಡ್‌ರೂಂ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದರು. ಬಳಿಕ ಸೀರೆಯಿಂದ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಕುಟುಂಬಸ್ಥರು ಮತ್ತು ಸ್ಥಳೀಯರು ತಕ್ಷಣವೇ ಅವರನ್ನು ವಸಾಯಿ-ವಿರಾರ್ ಮುನ್ಸಿಪಲ್ ಆಸ್ಪತ್ರೆಗೆ ಕರೆದೊಯ್ದರಾದರೂ, ಅವರು ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ
ಈ ಘಟನೆಗೆ ಸಂಬಂಧಿಸಿದಂತೆ ಮೃತ ನಟಿಯ ತಂದೆ ಮಚ್ಚಿಂದ್ರ ಉಗಾಲೆ ನೀಡಿದ ದೂರಿನ ಮೇರೆಗೆ ಆಚೋಲೆ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಪ್ರಕರಣ (ADR) ದಾಖಲಾಗಿದೆ. ಸದ್ಯಕ್ಕೆ ಆತ್ಮಹತ್ಯೆಗೆ ನಿಖರ ಕಾರಣ ಏನೆಂಬುದು ತಿಳಿದುಬಂದಿಲ್ಲವಾಗಿದ್ದು, ಪೊಲೀಸರು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ.
ಕೇವಲ 22ನೇ ವಯಸ್ಸಿಗೆ ಬದುಕು ಮುಗಿಸಿದ ಸಂಚಿತಾ ಉಗಾಲೆ ಹಿಂದಿ ಕಿರುತೆರೆಯಲ್ಲಿ ಉದಯೋನ್ಮುಖ ನಟಿಯಾಗಿದ್ದರು. ಜೀ ಟಿವಿಯ ಜನಪ್ರಿಯ ಧಾರಾವಾಹಿ ‘ಕುಂಕುಮ್ ಭಾಗ್ಯ’ದಲ್ಲಿ ದಿಯಾ ಟಂಡನ್ ಪಾತ್ರದ ಮೂಲಕ ಅವರು ಮನೆಮಾತಾಗಿದ್ದರು. ಇದರೊಂದಿಗೆ ‘ವಾಗ್ಲೆ ಕಿ ದುನಿಯಾ’ ಮತ್ತು ದಂಗಲ್ ಟಿವಿಯ ‘ದಿಲ್‌ವಾಲಿ ದುಲ್ಹಾ ಲೇ ಜಾಯೇಗಿ’ ಸೀರಿಯಲ್‌ಗಳಲ್ಲೂ ನಟಿಸಿದ್ದರು. ಕಿರುತೆರೆ ಮಾತ್ರವಲ್ಲದೆ ಡಿಜಿಟಲ್ ಹಾಗೂ ಸಿನಿಮಾ ರಂಗದಲ್ಲೂ ಗುರುತಿಸಿಕೊಂಡಿದ್ದ ಅವರು, ಮನೋಜ್ ಬಾಜಪೇಯಿ ನಟನೆಯ ‘ಸೈಲೆನ್ಸ್ 2’ ಹಾಗೂ ವಿಕ್ಕಿ ಕೌಶಲ್ ಅಭಿನಯದ ಮುಂಬರುವ ‘ಚಾವಾ’ ಚಿತ್ರದಲ್ಲೂ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದರು. ಭರವಸೆಯ ನಟಿಯ ದಿಢೀರ್ ಸಾವು ಅವರ ಅಭಿಮಾನಿಗಳಿಗೆ ಹಾಗೂ ಇಡೀ ಟಿವಿ ಉದ್ಯಮಕ್ಕೆ ತೀವ್ರ ಆಘಾತವನ್ನುಂಟು ಮಾಡಿದೆ.

