
ಸಿಜೆಪಿ ಪ್ರತಿಭಟನೆಗೆ ನಟ ಸಲ್ಮಾನ್ ಖಾನ್ ಬೆಂಬಲ ಸೂಚಿಸಿದ್ದಾರೆ.
ಸಿಜೆಪಿ ಪ್ರತಿಭಟನೆಗೆ ಸಲ್ಮಾನ್ ಖಾನ್ ಬೆಂಬಲ- ರಾಜಕೀಯ ಮಾಡಬೇಡಿ ಎಂದ ಭಾಯ್‌ಜಾನ್
ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶಾಲಾ ದಿನಗಳ ಹಳೆಯ ಚಿತ್ರವೊಂದನ್ನು ಹಂಚಿಕೊಂಡಿರುವ ಸಲ್ಮಾನ್ ಖಾನ್, ಪ್ರಶ್ನೆಪತ್ರಿಕೆ ಸೋರಿಕೆ ಅತ್ಯಂತ ಗಂಭೀರ ವಿಷಯವಾಗಿದೆ ಎಂದು ಹೇಳಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದ ಪ್ರತಿಭಟನೆಗೆ ಇದೀಗ ಬಾಲಿವುಡ್ ನಟ ಸಲ್ಮಾನ್ ಖಾನ್ ಬೆಂಬಲ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳ ಶಾಂತಿಯುತ ಹೋರಾಟವನ್ನು ಮೆಚ್ಚಿರುವ ಅವರು, ಇದು ರಾಜಕೀಯದ ವಿಷಯವಾಗಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶಾಲಾ ದಿನಗಳ ಹಳೆಯ ಚಿತ್ರವೊಂದನ್ನು ಹಂಚಿಕೊಂಡಿರುವ ಸಲ್ಮಾನ್ ಖಾನ್, ಪ್ರಶ್ನೆಪತ್ರಿಕೆ ಸೋರಿಕೆ ಅತ್ಯಂತ ಗಂಭೀರ ವಿಷಯವಾಗಿದೆ ಎಂದು ಹೇಳಿದ್ದಾರೆ. ಈ ಹೋರಾಟ ವಿದ್ಯಾರ್ಥಿಗಳು ಮತ್ತು ಶಿಕ್ಷಣ ವ್ಯವಸ್ಥೆಯ ನಡುವಿನ ವಿಷಯವಾಗಿದ್ದು, ಇದನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳಬಾರದು ಎಂದು ಅವರು ಹೇಳಿದ್ದಾರೆ.
ಈ ಹೋರಾಟದ ಸಂಪೂರ್ಣ ಶ್ರೇಯಸ್ಸು ದೇಶದ ವಿದ್ಯಾರ್ಥಿಗಳಿಗೇ ಸಲ್ಲಬೇಕು. ಸರ್ಕಾರವೂ ವಿದ್ಯಾರ್ಥಿಗಳಿಗೆ ಸಂಪೂರ್ಣ ಬೆಂಬಲ ನೀಡಿ ಶಿಕ್ಷಣ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲಿದೆ ಎಂಬ ವಿಶ್ವಾಸವಿದೆ. ಎಲ್ಲರಿಗೂ ಒಳ್ಳೆಯ ನಿರ್ಧಾರವಾಗಲಿ ಎಂದು ಪ್ರಾರ್ಥಿಸುತ್ತೇನೆ. ಶಿಕ್ಷಣ ಪಡೆಯಲು ಬಯಸುವ ಪ್ರತಿಯೊಬ್ಬರಿಗೂ ದೇವರು ಒಳಿತು ಮಾಡಲಿ ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಇದೇ ವೇಳೆ, ಭಾರತದಲ್ಲಿ ಶಿಕ್ಷಣವೇ ಒಂದು ಉತ್ತಮ ಟ್ರೆಂಡ್ ಆಗಬೇಕು. ವಿದೇಶಗಳಿಂದಲೂ ವಿದ್ಯಾರ್ಥಿಗಳು ಭಾರತಕ್ಕೆ ಬಂದು ಶಿಕ್ಷಣ ಪಡೆಯುವಂತಹ ವ್ಯವಸ್ಥೆ ನಿರ್ಮಾಣವಾಗಲಿ ಎಂಬ ಆಶಯವನ್ನೂ ಸಲ್ಮಾನ್ ಖಾನ್ ವ್ಯಕ್ತಪಡಿಸಿದ್ದಾರೆ. ಇದಕ್ಕೂ ಮೊದಲು ನಟರಾದ ಓಮಿ ವೈದ್ಯ, ಜೀನತ್ ಅಮಾನ್, ನಾಸೀರುದ್ದೀನ್ ಶಾ, ರತ್ನಾ ಪಾಠಕ್ ಶಾ, ಅಭಯ್ ದಿಯೋಲ್, ಸೋನಾಕ್ಷಿ ಸಿನ್ಹಾ ಹಾಗೂ ರಿತೇಶ್ ದೇಶಮುಖ್ ಸೇರಿದಂತೆ ಹಲವು ಬಾಲಿವುಡ್ ಕಲಾವಿದರು ಸಿಜೆಪಿ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು. ಜೊತೆಗೆ ದೇಶಾದ್ಯಂತ ಶಾಂತಿಯುತ ಪ್ರತಿಭಟನೆ ನಡೆಸುವಂತೆ ಅವರು ಕರೆ ನೀಡಿದ್ದರು.

