
ಸಲ್ಮಾನ್ ಖಾನ್
ಇನ್ನೂ ಜೋರಾಗಿ ಸಾರಿ ಕೇಳಿ; ಪಾಪರಾಜಿಗಳ ಕಾಲೆಳೆದ ನಟ ಸಲ್ಮಾನ್ ಖಾನ್
ಆಸ್ಪತ್ರೆ ಎದುರು ನಡೆದ ಗಲಾಟೆ ಬಳಿಕ ರಾಜಾ ಶಿವಾಜಿ ಸಕ್ಸಸ್ ಪಾರ್ಟಿಯಲ್ಲಿ ಪಾಪರಾಜಿಗಳ ಕ್ಷಮೆಯನ್ನು ನಟ ಸಲ್ಮಾನ್ ಖಾನ್ ಒಪ್ಪಿಕೊಂಡಿದ್ದಾರೆ.
ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಮತ್ತು ಮಾಧ್ಯಮದ ಛಾಯಾಗ್ರಾಹಕರ (ಪಾಪರಾಜಿ) ನಡುವೆ ಆಸ್ಪತ್ರೆಯ ಹೊರಗೆ ನಡೆದಿದ್ದ ಗಲಾಟೆಯು ಈಗ ಸುಖಾಂತ್ಯ ಕಂಡಿದೆ. ಘಟನೆ ನಡೆದ ಮರುದಿನವೇ ಪಾಪರಾಜಿಗಳು ಒಟ್ಟಾಗಿ ಕೇಳಿದ ಕ್ಷಮೆಯನ್ನು ಸಲ್ಮಾನ್ ಖಾನ್ ಸ್ವೀಕರಿಸಿದ್ದಾರೆ.
ನಟ ಹಾಗೂ ನಿರ್ದೇಶಕ ರಿತೇಶ್ ದೇಶ್‌ಮುಖ್ ಅವರ 'ರಾಜಾ ಶಿವಾಜಿ' ಚಿತ್ರದ ಯಶಸ್ಸಿನ ಸಂಭ್ರಮಾಚರಣೆಯ ಪಾರ್ಟಿಯಲ್ಲಿ ಭಾಗವಹಿಸಲು ಸಲ್ಮಾನ್ ಖಾನ್ ಮುಂಬೈನಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಸಲ್ಮಾನ್ ಖಾನ್ ಅವರು ರಿತೇಶ್ ದೇಶ್‌ಮುಖ್ ಅವರೊಂದಿಗೆ ಕ್ಯಾಮೆರಾಗಳಿಗೆ ಪೋಸ್ ನೀಡಲು ಬರುತ್ತಿದ್ದಂತೆ, ಅಲ್ಲಿದ್ದ ಛಾಯಾಗ್ರಾಹಕರೆಲ್ಲರೂ ಒಟ್ಟಾಗಿ ನಿನ್ನೆ ನಡೆದ ಘಟನೆಗೆ ಸೂಪರ್‌ಸ್ಟಾರ್ ಬಳಿ ಕ್ಷಮೆಯಾಚಿಸಿದರು.
ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆರಂಭದಲ್ಲಿ ಅಲ್ಲಿ ನೆರೆದಿದ್ದ ಗದ್ದಲವನ್ನು ನೋಡಿ ಸಲ್ಮಾನ್ ಖಾನ್ ತಮ್ಮ ಭದ್ರತಾ ಸಿಬ್ಬಂದಿಗೆ ಯಾರನ್ನೂ ತಡೆಯದಂತೆ ಸೂಚಿಸಿದರು. ಬಳಿಕ ಛಾಯಾಗ್ರಾಹಕರು ಕ್ಷಮೆ ಕೇಳುತ್ತಿರುವುದನ್ನು ಗಮನಿಸಿದ ನಟ, ಮುಗುಳ್ನಗುತ್ತಲೇ "ಎಲ್ಲರೂ ಜೋರಾಗಿ ಕ್ಷಮೆ ಕೇಳಿ, ನನಗೆ ಧ್ವನಿ ಕೇಳಿಸುತ್ತಿಲ್ಲ" ಎಂದು ಹಾಸ್ಯ ಚಟಾಕಿ ಹಾರಿಸಿದರು. ಸಲ್ಮಾನ್ ಅವರ ಈ ಪ್ರತಿಕ್ರಿಯೆಯನ್ನು ಕಂಡು ಪಕ್ಕದಲ್ಲೇ ಇದ್ದ ರಿತೇಶ್ ದೇಶ್‌ಮುಖ್ ಕೂಡ ನಕ್ಕರು. ನಂತರ ಪರಿಸ್ಥಿತಿ ತಿಳಿಯಾಯಿತು.
ಇದಕ್ಕೂ ಮುನ್ನ ಮಂಗಳವಾರ ರಾತ್ರಿ ಮುಂಬೈನ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ಆಪ್ತರೊಬ್ಬರನ್ನು ಭೇಟಿ ಮಾಡಲು ಸಲ್ಮಾನ್ ಖಾನ್ ತೆರಳಿದ್ದರು. ಈ ವೇಳೆ ಪಾಪರಾಜಿಗಳು ಅವರನ್ನು ಹಿಂಬಾಲಿಸಿ, ಅವರ ಮುಂಬರುವ 'ಮಾತೃಭೂಮಿ' ಚಿತ್ರದ ಹೆಸರನ್ನು ಜೋರಾಗಿ ಕೂಗುತ್ತಾ ಗಲಾಟೆ ಮಾಡಿದ್ದರು. ಇದರಿಂದ ತೀವ್ರ ಕೋಪಗೊಂಡ ಸಲ್ಮಾನ್ ಖಾನ್, ನಿಮಗೆ ಬುದ್ಧಿ ಭ್ರಮಣೆಯಾಗಿದೆಯೇ ಎಂದು ತರಾಟೆಗೆ ತೆಗೆದುಕೊಂಡಿದ್ದರು. ನಿಮ್ಮ ಕುಟುಂಬದವರು ಆಸ್ಪತ್ರೆಯಲ್ಲಿದ್ದಾಗ ಯಾರಾದರೂ ಹೀಗೆಯೇ ವರ್ತಿಸಿದರೆ ನಿಮಗೆ ಹೇಗೆ ಅನಿಸುತ್ತದೆ ಎಂದು ಖಾರವಾಗಿ ಪ್ರಶ್ನಿಸಿದ್ದರು.
ಬಳಿಕ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲೂ ಸುದೀರ್ಘ ಪೋಸ್ಟ್ ಹಾಕಿದ್ದ ಸಲ್ಮಾನ್ ಖಾನ್, ಆಸ್ಪತ್ರೆಯಲ್ಲಿ ಬೇರೆಯವರ ನೋವನ್ನು ನೋಡಿ ಮಾಧ್ಯಮದವರು ಹಣ ಮಾಡಲು ಯತ್ನಿಸುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಸಿನಿಮಾಕ್ಕಿಂತ ಜನರ ಜೀವ ಮುಖ್ಯ ಎಂದು ಬರೆದುಕೊಂಡಿದ್ದರು. ಆದರೆ, ಬುಧವಾರದ ಕಾರ್ಯಕ್ರಮದಲ್ಲಿ ಪಾಪರಾಜಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿದ್ದರಿಂದ ಸಲ್ಮಾನ್ ಖಾನ್ ಎಲ್ಲವನ್ನೂ ಮರೆತು ಅವರೊಂದಿಗೆ ಸೌಹಾರ್ದತೆಯಿಂದ ವರ್ತಿಸಿದ್ದಾರೆ.

