ರಾಮಾಯಣ ಚಿತ್ರಕ್ಕೆ ಸಾಯಿ ಪಲ್ಲವಿ ಧ್ವನಿ ಇಲ್ಲ : ಡಬ್ಬಿಂಗ್‌ಗೆ ಚಿತ್ರತಂಡ ಪ್ಲ್ಯಾನ್
x

ಸಾಯಿ ಪಲ್ಲವಿ ಹಿಂದಿ ಉಚ್ಚಾರಣೆಗೆ ಟ್ರೋಲ್ ಆದ ಬೆನ್ನಲ್ಲೇ, 'ರಾಮಾಯಣ' ಚಿತ್ರದಲ್ಲಿ ಸೀತೆಯ ಪಾತ್ರಕ್ಕೆ ಬೇರೆ ಕಲಾವಿದರಿಂದ ಡಬ್ಬಿಂಗ್ ಮಾಡಿಸಲು ನಿರ್ಮಾಪಕರು ಗಂಭೀರ ಆಲೋಚನೆ ನಡೆಸಿದ್ದಾರೆ.

ರಾಮಾಯಣ ಚಿತ್ರಕ್ಕೆ ಸಾಯಿ ಪಲ್ಲವಿ ಧ್ವನಿ ಇಲ್ಲ : ಡಬ್ಬಿಂಗ್‌ಗೆ ಚಿತ್ರತಂಡ ಪ್ಲ್ಯಾನ್

'ಏಕ್ ದಿನ್' ಚಿತ್ರದಲ್ಲಿ ಸಾಯಿ ಪಲ್ಲವಿ ಹಿಂದಿ ಉಚ್ಚಾರಣೆಗೆ ಟ್ರೋಲ್ ಆದ ಬೆನ್ನಲ್ಲೇ, 'ರಾಮಾಯಣ' ಚಿತ್ರದಲ್ಲಿ ಸೀತೆಯ ಪಾತ್ರಕ್ಕೆ ಬೇರೆ ಕಲಾವಿದರಿಂದ ಡಬ್ಬಿಂಗ್ ಮಾಡಿಸಲು ನಿರ್ಮಾಪಕರು ಗಂಭೀರ ಆಲೋಚನೆ ನಡೆಸಿದ್ದಾರೆ.


Click the Play button to hear this message in audio format

ನಿತೇಶ್ ತಿವಾರಿ ನಿರ್ದೇಶನದ ಮಹತ್ವಾಕಾಂಕ್ಷೆಯ 'ರಾಮಾಯಣ' ಚಿತ್ರದ ಗುಣಮಟ್ಟ ಕಾಪಾಡಲು ನಿರ್ಮಾಪಕರು ಈಗ ಸಾಯಿ ಪಲ್ಲವಿ ಅವರ ಪಾತ್ರಕ್ಕೆ ಬೇರೆ ವೃತ್ತಿಪರ ಡಬ್ಬಿಂಗ್ ಕಲಾವಿದರಿಂದ ಧ್ವನಿ ಕೊಡಿಸಲು ಗಂಭೀರವಾಗಿ ಆಲೋಚಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

ಸಾಯಿ ಪಲ್ಲವಿ ಅವರ ಚೊಚ್ಚಲ ಹಿಂದಿ ಚಿತ್ರ 'ಏಕ್ ದಿನ್' ಬಿಡುಗಡೆಯಾದ ನಂತರ ಈ ಬೆಳವಣಿಗೆ ನಡೆದಿದೆ ಎನ್ನಲಾಗುತ್ತಿದೆ. ಆ ಚಿತ್ರದಲ್ಲಿ ಸಾಯಿ ಪಲ್ಲವಿ ಅವರ ಹಿಂದಿ ಉಚ್ಚಾರಣೆಯು ಅಷ್ಟೊಂದು ಪರಿಣಾಮಕಾರಿಯಾಗಿಲ್ಲ ಎಂಬ ಟೀಕೆಗಳು ಕೇಳಿಬಂದ ಹಿನ್ನೆಲೆಯಲ್ಲಿ, ರಾಮಾಯಣದಂತಹ ಪೌರಾಣಿಕ ಚಿತ್ರದಲ್ಲಿ ಸೀತೆಯ ಪಾತ್ರಕ್ಕೆ ಶುದ್ಧ ಮತ್ತು ಸ್ಪಷ್ಟವಾದ ಹಿಂದಿ ಅತ್ಯಗತ್ಯ ಎಂದು ಚಿತ್ರತಂಡ ಭಾವಿಸಿದೆ.

ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಅಭಿನಯದ ಚೊಚ್ಚಲ ಹಿಂದಿ ಸಿನಿಮಾ 'ಏಕ್ ದಿನ್' ಬಿಡುಗಡೆಯಾದ ಬೆನ್ನಲ್ಲೇ ಅವರ ಹಿಂದಿ ಭಾಷಾ ಪ್ರೌಢಿಮೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಚಿತ್ರದಲ್ಲಿ ಅವರ ಹಿಂದಿ ಉಚ್ಚಾರಣೆಯನ್ನು ಗಮನಿಸಿದ ನೆಟ್ಟಿಗರು ಸಾಯಿ ಪಲ್ಲವಿಯವರನ್ನು ತೀವ್ರವಾಗಿ ಟ್ರೋಲ್ ಮಾಡುತ್ತಿದ್ದಾರೆ. ಕನಿಷ್ಠ ಮಟ್ಟದ ಹಿಂದಿ ಶಬ್ದಗಳನ್ನು ಸರಿಯಾಗಿ ಉಚ್ಚರಿಸಲು ಬಾರದ ನಟಿ, 'ರಾಮಾಯಣ' ಅಂತಹ ಮಹಾಕಾವ್ಯದ ಆಧಾರಿತ ಚಿತ್ರದಲ್ಲಿ ಸೀತೆಯ ಪಾತ್ರವನ್ನು ಹೇಗೆ ನಿರ್ವಹಿಸುತ್ತಾರೆ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

ಆಮಿರ್ ಖಾನ್ ಪುತ್ರ ಜುನೈದ್ ಖಾನ್ ನಾಯಕನಾಗಿ ನಟಿಸಿರುವ 'ಏಕ್ ದಿನ್' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅಷ್ಟಾಗಿ ಸದ್ದು ಮಾಡುತ್ತಿಲ್ಲ. ಈ ಮಧ್ಯೆ ಸಾಯಿ ಪಲ್ಲವಿಯವರ ಹಿಂದಿ ಡೈಲಾಗ್ ಡೆಲಿವರಿ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿರುವುದು 'ರಾಮಾಯಣ' ಚಿತ್ರತಂಡಕ್ಕೆ ಆತಂಕ ತಂದಿದೆ ಎನ್ನಲಾಗಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಬಹುನಿರೀಕ್ಷಿತ ಸಿನಿಮಾದಲ್ಲಿ ಸೀತೆಯ ಪಾತ್ರ ಅತ್ಯಂತ ಪವಿತ್ರ ಮತ್ತು ಪ್ರಮುಖವಾಗಿದ್ದು, ಅದಕ್ಕೆ ಶುದ್ಧ ಹಿಂದಿ ಭಾಷೆಯ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಚಿತ್ರದ ಗುಣಮಟ್ಟ ಕಾಪಾಡಲು ನಿರ್ಮಾಪಕರು ಸಾಯಿ ಪಲ್ಲವಿ ಅವರ ಪಾತ್ರಕ್ಕೆ ಬೇರೆ ವೃತ್ತಿಪರ ಡಬ್ಬಿಂಗ್ ಕಲಾವಿದರಿಂದ ಧ್ವನಿ ಕೊಡಿಸಲು ಆಲೋಚಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

ಆರಂಭದಲ್ಲಿ ಸೀತೆಯ ಪಾತ್ರಕ್ಕೆ ಆಲಿಯಾ ಭಟ್ ಅವರನ್ನು ಸಂಪರ್ಕಿಸಲಾಗಿತ್ತು, ಆದರೆ ಡೇಟ್ಸ್ ಸಮಸ್ಯೆಯಿಂದಾಗಿ ಆಲಿಯಾ ಈ ಚಿತ್ರದಿಂದ ಹಿಂದೆ ಸರಿದಿದ್ದರು. ಆ ನಂತರ ಸಾಯಿ ಪಲ್ಲವಿ ಅವರಿಗೆ ಈ ಅವಕಾಶ ಸಿಕ್ಕಿತ್ತು. ಸದ್ಯ 'ಏಕ್ ದಿನ್' ಸಿನಿಮಾದ ಅನುಭವದ ನಂತರ, 'ರಾಮಾಯಣ' ಚಿತ್ರದಲ್ಲಿ ಸೀತೆಯ ಸಂಭಾಷಣೆಗಳು ನೈಜವಾಗಿ ಮತ್ತು ಸ್ಪಷ್ಟವಾಗಿ ಕೇಳಿಸಲು ಡಬ್ಬಿಂಗ್ ಮೊರೆ ಹೋಗುವುದು ಅನಿವಾರ್ಯ ಎಂಬ ತೀರ್ಮಾನಕ್ಕೆ ಚಿತ್ರತಂಡ ಬಂದಿದೆ ಎಂದು ಹೇಳಲಾಗುತ್ತಿದೆ. ಈ ವರ್ಷದ ದೀಪಾವಳಿ ಹಬ್ಬಕ್ಕೆ 'ರಾಮಾಯಣ' ಭಾಗ-1 ಬಿಡುಗಡೆಯಾಗುವ ಸಾಧ್ಯತೆ ಇದೆ.

ರಾಮಾಯಣ ಸಿನಿಮಾದಲ್ಲಿ ರಣಬೀರ್ ಕಪೂರ್ ಪ್ರಭು ಶ್ರೀರಾಮನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಪಾತ್ರಕ್ಕಾಗಿ ಅವರು ತಮ್ಮ ಆಹಾರ ಪದ್ಧತಿ ಮತ್ತು ಜೀವನಶೈಲಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಸಿನಿಮಾದಲ್ಲಿ ಅತಿ ಹೆಚ್ಚು ಕುತೂಹಲ ಮೂಡಿಸಿರುವುದು ನಮ್ಮ ಹೆಮ್ಮೆಯ ಕನ್ನಡಿಗ 'ರಾಕಿಂಗ್ ಸ್ಟಾರ್' ಯಶ್ ಅವರ ಪಾತ್ರ. ಯಶ್ ಈ ಸಿನಿಮಾದಲ್ಲಿ ಲಂಕೇಶ್ವರ ರಾವಣನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಅವರು ಈ ಸಿನಿಮಾದ ನಿರ್ಮಾಣದಲ್ಲಿಯೂ ಪಾಲುದಾರರಾಗಿದ್ದಾರೆ.ಬಲಿಷ್ಠ ಹನುಮಂತನ ಪಾತ್ರಕ್ಕೆ ಬಾಲಿವುಡ್‌ನ ಹಿರಿಯ ನಟ ಸನ್ನಿ ಡಿಯೋಲ್ ಆಯ್ಕೆಯಾಗಿದ್ದಾರೆ. ಮೊದಲ ಭಾಗದಲ್ಲಿ ಅವರ ಪಾತ್ರ ಸೀಮಿತವಾಗಿದ್ದರೂ, ಎರಡನೇ ಭಾಗದಲ್ಲಿ ಅವರ ಪಾತ್ರಕ್ಕೆ ಹೆಚ್ಚಿನ ಮಹತ್ವ ಇರಲಿದೆ.

Read More
Next Story