
ನಟ ಯಶ್
ಕ್ಯಾನ್ಸರ್ ಪೀಡಿತ ಅಭಿಮಾನಿಗೆ ರಾಕಿ ಭಾಯ್ ಆಸರೆ; ಯಶ್ ನಡೆಗೆ ಮೆಚ್ಚುಗೆ
ಅಭಿಮಾನಿಯ ಆರೋಗ್ಯದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ಯಶ್, ಧೈರ್ಯವಾಗಿ ಕಾಯಿಲೆಯ ವಿರುದ್ಧ ಹೋರಾಡುವಂತೆ ಸಾಂತ್ವನ ಹೇಳಿದ್ದಾರೆ. ಅಷ್ಟೇ ಅಲ್ಲದೆ, ಸುನಿಲ್ ಅವರ ಕುಟುಂಬದವರಿಗೂ ಆಸರೆಯಾಗಿ ನಿಲ್ಲುವ ಭರವಸೆ ನೀಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅವರು ಸದ್ಯ ಸಾಲು ಸಾಲು ಮೆಗಾ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದು ಕಡೆ ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’, ಮತ್ತೊಂದು ಕಡೆ ಬಾಲಿವುಡ್‌ನ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ. ಹೀಗೆ ಬ್ಯಾಕ್ ಟು ಬ್ಯಾಕ್ ಶೂಟಿಂಗ್ ಹಾಗೂ ಪ್ರೊಡಕ್ಷನ್ ಕೆಲಸಗಳಲ್ಲಿ ಮುಳುಗಿರುವ ಯಶ್, ತಮ್ಮ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ಅಭಿಮಾನಿಗಳ ಮೇಲಿನ ಕಾಳಜಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಅಭಿಮಾನಿಗೆ ಧೈರ್ಯ ತುಂಬಿದ ಯಶ್!
ಸಿನಿಮಾ ಕೆಲಸಗಳಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ತಮಗೆ ಬಿಗ್ ಸ್ಕ್ರೀನ್ ಮೇಲೆ ಜೀವನ ಕೊಟ್ಟ ಅಭಿಮಾನಿಗಳನ್ನು ಯಶ್ ಎಂದಿಗೂ ಮರೆಯುವುದಿಲ್ಲ. ಶಿವಮೊಗ್ಗದ ಯಶ್ ಫ್ಯಾನ್ಸ್ ಅಸೋಸಿಯೆಷನ್ ಅಧ್ಯಕ್ಷ ಸುನಿಲ್ ಕುಮಾರ್ ಎನ್. ಅವರು ಸದ್ಯ ರೆಕ್ಟಲ್ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಿಷಯ ತಿಳಿದ ರಾಕಿಂಗ್ ಸ್ಟಾರ್ ತಕ್ಷಣವೇ ಆಸ್ಪತ್ರೆಯಲ್ಲಿದ್ದ ಸುನಿಲ್ ಅವರಿಗೆ ವಿಡಿಯೋ ಕಾಲ್ ಮಾಡಿದ್ದಾರೆ.
ಅಭಿಮಾನಿಯ ಆರೋಗ್ಯದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ಯಶ್, ಧೈರ್ಯವಾಗಿ ಕಾಯಿಲೆಯ ವಿರುದ್ಧ ಹೋರಾಡುವಂತೆ ಸಾಂತ್ವನ ಹೇಳಿದ್ದಾರೆ. ಅಷ್ಟೇ ಅಲ್ಲದೆ, ಸುನಿಲ್ ಅವರ ಕುಟುಂಬದವರಿಗೂ ಸಮಾಧಾನ ಹೇಳಿ ಆಸರೆಯಾಗಿ ನಿಲ್ಲುವ ಭರವಸೆ ನೀಡಿದ್ದಾರೆ. ಸದ್ಯ ಯಶ್ ಅವರು ಅಭಿಮಾನಿ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ನೆಟ್ಟಿಗರು ರಾಕಿ ಭಾಯ್ ಮಾನವೀಯತೆಗೆ ಹ್ಯಾಟ್ಸಾಫ್ ಎನ್ನುತ್ತಿದ್ದಾರೆ.
ನಟ ಯಶ್
'ಟಾಕ್ಸಿಕ್' ಸಿನಿಮಾ ರಿಲೀಸ್ ಮುಂದೂಡಿಕೆ!
ಮತ್ತೊಂದೆಡೆ, ಯಶ್ ನಟನೆಯ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ 'ಟಾಕ್ಸಿಕ್' ರಿಲೀಸ್ ಮುಂದೂಡಿಕೆಯಾಗಿದೆ. ಈ ಮೊದಲು ಸಿನಿಮಾ ಜೂನ್ 4 ರಂದು ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿತ್ತು. ಆದರೆ ಇದೀಗ ಯಶ್ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಸಿನಿಮಾ ಮುಂದೂಡಿಕೆಯಾಗಿರುವ ಅಧಿಕೃತ ಸುದ್ದಿಯನ್ನು ಹೊರಹಾಕಿದ್ದಾರೆ.
"ನಾವು ಮಾಡುವ ಸಿನಿಮಾಗಳು ಒಂದು ಕಡೆ, ಮತ್ತು ನಮಗೆ ಸಿನಿಮಾ ಮೇಲೆ ಪ್ರೀತಿ ಹುಟ್ಟುವಂತೆ ಮಾಡಿದ ಸಿನಿಮಾಗಳು ಇನ್ನೊಂದೆಡೆ. ಯಾಕೆ ನಾವು ಸಿನಿಮಾವನ್ನು ಇಷ್ಟೊಂದು ಪ್ರೀತಿಸುತ್ತೇವೆ ಎಂಬುದನ್ನು ನೆನಪಿಸುವ ಸಿನಿಮಾಗಳಿವೆ. 'ಟಾಕ್ಸಿಕ್' ಅಂತಹ ಒಂದು ಅದ್ಭುತ ಪ್ರಯಾಣವಾಗಿದೆ." ಎಂದು ಯಶ್ ಭಾವುಕರಾಗಿ ಬರೆದುಕೊಂಡಿದ್ದಾರೆ.
ಗ್ಲೋಬಲ್ ಮಟ್ಟದಲ್ಲಿ ಸದ್ದು!
ಇತ್ತೀಚೆಗೆ ನಡೆದ ಪ್ರತಿಷ್ಠಿತ 'ಸಿನಿಮಾಕಾನ್' ಸಮಾರಂಭದಲ್ಲಿ 'ಟಾಕ್ಸಿಕ್' ಚಿತ್ರವನ್ನು ಪ್ರಸ್ತುತಪಡಿಸಲಾಗಿದ್ದು, ಅಲ್ಲಿ ಸಿಕ್ಕ ಜಾಗತಿಕ ಮಟ್ಟದ ಪ್ರತಿಕ್ರಿಯೆ ಚಿತ್ರತಂಡದ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಬಗ್ಗೆ ಬರೆದುಕೊಂಡಿರುವ ಯಶ್, "ಸಿನಿಮಾಕಾನ್‌ನಲ್ಲಿ ನಮ್ಮ ಚಿತ್ರವನ್ನು ಪ್ರಸ್ತುತಪಡಿಸಿದಾಗ ಸಿಕ್ಕ ಅಗಾಧವಾದ ಜಾಗತಿಕ ಪ್ರತಿಕ್ರಿಯೆ ನಮ್ಮ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿದೆ. ಈ ಚಿತ್ರವು ವಿಶ್ವಾದ್ಯಂತ ದೊಡ್ಡ ಮಟ್ಟದಲ್ಲಿ ತಲುಪಲು ಅರ್ಹವಾಗಿದೆ ಎಂದು ನಾವು ಮೊದಲಿನಿಂದಲೂ ನಂಬಿದ್ದೆವು, ಅದು ಈಗ ಸಾಬೀತಾಗಿದೆ" ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ವಿಶ್ವಮಟ್ಟದ ಕ್ವಾಲಿಟಿ ನೀಡುವ ಸಲುವಾಗಿ ಚಿತ್ರದ ಬಿಡುಗಡೆ ತಡವಾಗುತ್ತಿದ್ದು, ಹೊಸ ರಿಲೀಸ್ ದಿನಾಂಕ ಸದ್ಯದಲ್ಲೇ ಹೊರಬೀಳಲಿದೆ ಎಂದು ತಿಳಿಸಿದ್ದಾರೆ.

