
ಕಾಕ್‌ಟೇಲ್ 2' ಚಿತ್ರದ ರೋಮ್ಯಾಂಟಿಕ್ ಹಾಡು 'ತುಝ್ಕೋ' ಪ್ರಿವ್ಯೂ ವಿಡಿಯೋವನ್ನು ನಟಿ ರಶ್ಮಿಕಾ ಡಿಲೀಟ್ ಮಾಡಿದ್ದಾರೆ.
ಕಾಕ್‌ಟೇಲ್ 2 ಹಾಡು ಡಿಲೀಟ್ ಮಾಡಿದ ನಟಿ ರಶ್ಮಿಕಾ ಮಂದಣ್ಣ
'ಕಾಕ್‌ಟೇಲ್ 2' ಚಿತ್ರದ ರೋಮ್ಯಾಂಟಿಕ್ ಹಾಡು 'ತುಝ್ಕೋ' ಪ್ರಿವ್ಯೂ ವಿಡಿಯೋವನ್ನು ನಟಿ ರಶ್ಮಿಕಾ ಮಂದಣ್ಣ ದಿಢೀರ್ ಡಿಲೀಟ್ ಮಾಡಿದ್ದು, ಅಭಿಮಾನಿಗಳಲ್ಲಿ ತೀವ್ರ ಗೊಂದಲ ಮೂಡಿಸಿದೆ.
ಬಾಲಿವುಡ್‌ನ ಬಹುನಿರೀಕ್ಷಿತ 'ಕಾಕ್‌ಟೇಲ್ 2' ಚಿತ್ರದ ಪ್ರಚಾರದ ನಡುವೆಯೇ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಕುತೂಹಲ ಕೆರಳಿಸುವ ಘಟನೆಯೊಂದು ನಡೆದಿದೆ. ನಟಿ ರಶ್ಮಿಕಾ ಮಂದಣ್ಣ ಅವರು ತಮ್ಮ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದ್ದ ಚಿತ್ರದ ರೋಮ್ಯಾಂಟಿಕ್ ಹಾಡು 'ತುಝ್ಕೋ' ಪ್ರಿವ್ಯೂ ವಿಡಿಯೋವನ್ನು ದಿಢೀರನೆ ಡಿಲೀಟ್ ಮಾಡಿದ್ದಾರೆ. ಇದು ಅವರ ಅಭಿಮಾನಿಗಳಲ್ಲಿ ತೀವ್ರ ಗೊಂದಲವನ್ನು ಉಂಟುಮಾಡಿದ್ದು, ಚಿತ್ರತಂಡದ ಮುಂದಿನ ನಡೆ ಬಗ್ಗೆ ಹತ್ತಾರು ಪ್ರಶ್ನೆಗಳು ಎದ್ದೇಳುವಂತೆ ಮಾಡಿದೆ.
ಇತ್ತೀಚೆಗಷ್ಟೇ ನಡೆದ 'ಕಾಕ್‌ಟೇಲ್ 2' ಚಿತ್ರದ ಸಂಗೀತ ಬಿಡುಗಡೆ ಸಮಾರಂಭದಲ್ಲಿ ಎರಡು ಪ್ರಮುಖ ಹಾಡುಗಳ ಝಲಕ್ ತೋರಿಸಲಾಗಿತ್ತು. ಅದರಲ್ಲಿ ಶಾಹಿದ್ ಕಪೂರ್ ಮತ್ತು ಕೃತಿ ಸನನ್ ಅಭಿನಯದ ಹೈ-ಎನರ್ಜಿ ಪಾರ್ಟಿ ಸಾಂಗ್ 'ಮಾಶೂಕಾ' ನೇರ ಮತದಾನದ ಮೂಲಕ ಪ್ರೇಕ್ಷಕರ ನೆಚ್ಚಿನ ಹಾಡಾಗಿ ಹೊರಹೊಮ್ಮಿತ್ತು. ಈ ವೇಳೆ ರಶ್ಮಿಕಾ ಮಂದಣ್ಣ ಅವರು ತಮಾಷೆಯಾಗಿ, ಮತದಾನ ಪ್ರಕ್ರಿಯೆಯಲ್ಲಿ ಮೋಸ ನಡೆದಿದೆ ಎಂದು ಕಾಲೆಳೆದಿದ್ದರು. ಅಲ್ಲದೆ ಮೆಲೋಡಿ ಹಾಡುಗಳನ್ನು ಇಷ್ಟಪಡುವವರಿಗಾಗಿ ತಾವು ನಟಿಸಿರುವ 'ತುಝ್ಕೋ' ಹಾಡಿನ ಸಣ್ಣ ತುಣುಕನ್ನು ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಮಾಡುವ ಮೂಲಕ ಹಂಚಿಕೊಂಡಿದ್ದರು.
ಅರಿಜಿತ್ ಸಿಂಗ್ ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡಿನ ಪ್ರಿವ್ಯೂ ವಿಡಿಯೋದಲ್ಲಿ ಶಾಹಿದ್ ಕಪೂರ್ ಮತ್ತು ರಶ್ಮಿಕಾ ನಡುವಿನ ರೋಮ್ಯಾಂಟಿಕ್ ಕೆಮಿಸ್ಟ್ರಿ ಅದ್ಭುತವಾಗಿ ಮೂಡಿಬಂದಿತ್ತು. ರಶ್ಮಿಕಾ ಕೂಡ ಇದನ್ನು ತಮ್ಮ ನೆಚ್ಚಿನ ಹಾಡು ಎಂದು ಬರೆದುಕೊಂಡಿದ್ದರು. ಆದರೆ, ವಿಡಿಯೋ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಿಂದ ಅದನ್ನು ಸಂಪೂರ್ಣವಾಗಿ ತೆಗೆದುಹಾಕಿದ್ದಾರೆ. ಇದು ಅಭಿಮಾನಿಗಳಿಗೆ ನಿರಾಸೆ ತಂದಿರುವುದಷ್ಟೇ ಅಲ್ಲದೆ, ಚಿತ್ರದ ಪ್ರಚಾರಕ್ಕಾಗಿ ಚಿತ್ರತಂಡವೇ ಯೋಜಿತವಾಗಿ ಮಾಡಿದ ಲೀಕ್ ಇದಾಗಿತ್ತೇ ಅಥವಾ ನಿರ್ಮಾಣ ಸಂಸ್ಥೆಯ ಒತ್ತಡಕ್ಕೆ ಮಣಿದು ರಶ್ಮಿಕಾ ಈ ಪೋಸ್ಟ್ ಡಿಲೀಟ್ ಮಾಡಿದ್ದಾರೆಯೇ ಎಂಬ ಚರ್ಚೆಗೆ ಕಾರಣವಾಗಿದೆ.
ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಮಾನಿಗಳು ಮ್ಯಾಡಾಕ್ ಫಿಲ್ಮ್ಸ್ ಸಂಸ್ಥೆಯನ್ನು ಟ್ಯಾಗ್ ಮಾಡುತ್ತಿದ್ದು, ಹಾಡನ್ನು ಅಧಿಕೃತವಾಗಿ ಯಾವಾಗ ಬಿಡುಗಡೆ ಮಾಡುತ್ತೀರಿ ಎಂದು ಪ್ರಶ್ನಿಸುತ್ತಿದ್ದಾರೆ. ರಶ್ಮಿಕಾ ಅವರ ಈ ದಿಢೀರ್ ನಿರ್ಧಾರದ ಹಿಂದೆ ಏನಾಗುತ್ತಿದೆ ಎಂಬ ಗೊಂದಲಕ್ಕೆ ಸದ್ಯದಲ್ಲೇ ಚಿತ್ರತಂಡ ಸ್ಪಷ್ಟನೆ ನೀಡುವ ಸಾಧ್ಯತೆಯಿದೆ. ಹೋಮಿ ಅದಾಜಾನಿಯಾ ನಿರ್ದೇಶನದ 'ಕಾಕ್‌ಟೇಲ್ 2' ಚಿತ್ರದಲ್ಲಿ ಶಾಹಿದ್ ಕಪೂರ್, ಕೃತಿ ಸನನ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದು, ಸಿನಿಮಾ ಜೂನ್ 19 ರಂದು ತೆರೆಕಾಣಲು ಸಜ್ಜಾಗಿದೆ.

