
'ಪುಷ್ಪ ರಾಜ್ - ಶ್ರೀವಲ್ಲಿ' ಜೋಡಿ ಮತ್ತೊಮ್ಮೆ ಬೆಳ್ಳಿಪರದೆ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿದೆಯೇ
ಅಟ್ಲಿ ನಿರ್ದೇಶನದ ಹೊಸ ಚಿತ್ರದಲ್ಲಿ ಮತ್ತೆ ಒಂದಾಗಲಿದೆಯೇ ಪುಷ್ಪ ಜೋಡಿ?
ಅಟ್ಲಿ ನಿರ್ದೇಶನದಲ್ಲಿ ಅಲ್ಲು ಅರ್ಜುನ್ ನಟಿಸುತ್ತಿರುವ ಭಾರಿ ಬಜೆಟ್‌ನ 'ರಾಕಾ' ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
'ಪುಷ್ಪ ರಾಜ್ - ಶ್ರೀವಲ್ಲಿ' ಜೋಡಿ ಮತ್ತೊಮ್ಮೆ ಬೆಳ್ಳಿಪರದೆ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿದೆಯೇ? ಎಂಬ ಪ್ರಶ್ನೆಗೆ ಸದ್ಯ ಸಿನಿಮಾ ವಲಯದಲ್ಲಿ 'ಹೌದು' ಎಂಬ ಉತ್ತರ ಕೇಳಿಬರುತ್ತಿದೆ. ಆಟ್ಲಿ ನಿರ್ದೇಶನದಲ್ಲಿ ಅಲ್ಲು ಅರ್ಜುನ್ ಮತ್ತು ದೀಪಿಕಾ ಪಡುಕೋಣೆ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ 'ರಾಕಾ' ಚಿತ್ರದಲ್ಲಿ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಕೂಡ ಬಣ್ಣ ಹಚ್ಚಲಿದ್ದಾರೆ ಎಂದು ತಿಳಿದುಬಂದಿದೆ.
ಶೀಘ್ರದಲ್ಲೇ ಮುಂಬೈನಲ್ಲಿ ಈ ಚಿತ್ರದ ಹೊಸ ಶೆಡ್ಯೂಲ್ ಆರಂಭವಾಗಲಿದ್ದು, ರಶ್ಮಿಕಾ ಕೂಡ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. 'ಪುಷ್ಪ' ಚಿತ್ರದಲ್ಲಿ ಈ ಜೋಡಿಯ ಕೆಮಿಸ್ಟ್ರಿ ಪ್ರೇಕ್ಷಕರನ್ನು ಭಾರೀ ರಂಜಿಸಿತ್ತು. ಈಗ ಈ ಚಿತ್ರದಲ್ಲಿ ರಶ್ಮಿಕಾ ಅವರೊಂದಿಗೆ ಮೃಣಾಲ್ ಠಾಕೂರ್ ಮತ್ತು ಜಾನ್ವಿ ಕಪೂರ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ.
ಬಾಲಿವುಡ್ ನಟ ಶಾರುಖ್ ಖಾನ್ ಕೂಡ ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿ ದಟ್ಟವಾಗಿದೆ. ಆದರೆ ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬಂದಿಲ್ಲ. ಶೀಘ್ರದಲ್ಲೇ ಅಟ್ಲಿ, ಅಲ್ಲು ಅರ್ಜುನ್ ಮತ್ತು ದೀಪಿಕಾ ಪಡುಕೋಣೆ ಭಾಗವಹಿಸಲಿರುವ ದೊಡ್ಡ ಕಾರ್ಯಕ್ರಮವೊಂದರಲ್ಲಿ ಶಾರುಖ್ ಖಾನ್ ಅವರೇ ಈ ಚಿತ್ರಕ್ಕೆ ಸಂಬಂಧಿಸಿದ ದೊಡ್ಡ ಅಪ್‌ಡೇಟ್ ಹಂಚಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಸನ್ ಪಿಕ್ಚರ್ಸ್ ಸಂಸ್ಥೆಯು ಸುಮಾರು 700 ಕೋಟಿ ರೂ. ಭಾರಿ ಬಜೆಟ್‌ನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಈ ವರ್ಷದ ಅಂತ್ಯದೊಳಗೆ ಶೂಟಿಂಗ್ ಪೂರ್ಣಗೊಳಿಸಲು ಚಿತ್ರತಂಡ ಯೋಜಿಸಿದೆ.

