
ರಾಮ್ ಚರಣ್ ಅವಳಿ ಮಕ್ಕಳ ಫೋಟೋ
ಅವಳಿ ಮಕ್ಕಳ ಮುದ್ದಾದ ಚಿತ್ರ ಹಂಚಿಕೊಂಡ ನಟ ರಾಮ್ ಚರಣ್-ಉಪಾಸನಾ ದಂಪತಿ
ತಮ್ಮ 14ನೇ ವಿವಾಹ ವಾರ್ಷಿಕೋತ್ಸವದಂದು ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮತ್ತು ಉಪಾಸನಾ ದಂಪತಿ ತಮ್ಮ ನವಜಾತ ಅವಳಿ ಮಕ್ಕಳ ಪುಟ್ಟ ಕೈಗಳಿರುವ ಮೊದಲ ಭಾವಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಟಾಲಿವುಡ್‌ನ ಜನಪ್ರಿಯ ಜೋಡಿಗಳಲ್ಲೊಂದಾದ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಹಾಗೂ ಉಪಾಸನಾ ಕೊನಿಡೇಲ ದಂಪತಿ 14ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಕೊಳ್ಳುತ್ತಿದ್ದು, ಅವಳಿ ಮಕ್ಕಳು (ಒಬ್ಬ ಮಗ ಮತ್ತು ಮಗಳು) ಮೊದಲ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಮೂರೂ ಮಕ್ಕಳ ಪುಟ್ಟ ಕೈಗಳಿರುವ ಮುದ್ದಾದ ಫೋಟೋವನ್ನು ಪೋಸ್ಟ್ ಮಾಡಿರುವ ಉಪಾಸನಾ, "ಹೃದಯ ತುಂಬಿ ಬಂದಿದೆ" ಎಂದು ಬರೆದುಕೊಂಡು ತಮ್ಮ ಆನಂದವನ್ನು ವ್ಯಕ್ತಪಡಿಸಿದ್ದಾರೆ.
ದಂಪತಿಗಳು ತಮ್ಮ ನವಜಾತ ಅವಳಿ ಮಕ್ಕಳಿಗೆ 'ಶಿವ್ರಾಮ್' ಮತ್ತು 'ಅನ್ವೀರಾ ದೇವಿ' ಎಂದು ನಾಮಕರಣ ಮಾಡಿದ್ದಾರೆ. ಈ ಹೆಸರಿನ ಹಿಂದಿರುವ ವಿಶೇಷ ಅರ್ಥದ ಬಗ್ಗೆ ಇತ್ತೀಚೆಗೆ ಮಾಧ್ಯಮವೊಂದರ ಜೊತೆ ಮಾತನಾಡಿದ್ದ ರಾಮ್ ಚರಣ್, ಮಗನಿಗೆ ಇಟ್ಟಿರುವ ಶಿವ್ರಾಮ್ ಎಂಬ ಹೆಸರು ಭಗವಾನ್ ಶಿವ ಮತ್ತು ಶ್ರೀರಾಮನ ಸಂಯೋಜನೆಯಾಗಿದ್ದು, ಇದು ಧರ್ಮ, ಸಹನೆ ಮತ್ತು ಶಕ್ತಿಯನ್ನು ಸಂಕೇತಿಸುತ್ತದೆ ಎಂದು ತಿಳಿಸಿದ್ದಾರೆ. ಹಾಗೆಯೇ ಮಗಳಿಗೆ ಇಟ್ಟಿರುವ ಹೆಸರಿನಲ್ಲಿ 'ವೀರಾ' ಎಂದರೆ ಧೈರ್ಯ ಹಾಗೂ 'ಅನ್' ಎಂದರೆ ಮಿತಿಯಿಲ್ಲದ್ದು ಎಂಬ ಅರ್ಥವಿದ್ದು, ಹೆಣ್ಣುಮಕ್ಕಳು ತಮ್ಮ ಬದುಕಿನ ಬಹುದೊಡ್ಡ ಶಕ್ತಿ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ದಂಪತಿ, ತಮಗೆ ಮಗ ಮತ್ತು ಮಗಳು ಜನಿಸಿರುವುದು ಅಪಾರ ಕೃತಜ್ಞತಾ ಭಾವವನ್ನು ಮೂಡಿಸಿದೆ ಎಂದು ಹೇಳಿದ್ದಾರೆ. ಕಷ್ಟದ ದಿನಗಳಿಂದ ಹಿಡಿದು ಇಂದಿನವರೆಗೂ ಪ್ರೀತಿಯಿಂದ ಜೊತೆಗಿದ್ದ ಕುಟುಂಬದವರು, ಸ್ನೇಹಿತರು ಹಾಗೂ ಕೋಟ್ಯಂತರ ಅಭಿಮಾನಿಗಳಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ. ಕಳೆದ 2012ರಲ್ಲಿ ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದ ಈ ಜೋಡಿಗೆ, 2023ರಲ್ಲಿ ಮೊದಲ ಮಗಳು ಕ್ಲಿನ್ ಕಾರಾ ಕೊನಿಡೇಲ ಜನಿಸಿದ್ದಳು. ಇದೀಗ ದಂಪತಿಯ ಬಾಳಿಗೆ ಅವಳಿ ಮಕ್ಕಳ ಆಗಮನವಾಗಿದ್ದು, ಇಡೀ ಮೆಗಾ ಕುಟುಂಬದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಈ ದಂಪತಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

