
'ಪೆದ್ದಿ' ಚಿತ್ರದಲ್ಲಿ ಜಾನ್ವಿ ಕಪೂರ್ ದೃಶ್ಯಕ್ಕೆ ವಿರೋಧ
ರಾಮ್ ಚರಣ್ 'ಪೆದ್ದಿ' ಚಿತ್ರದ ವಿರುದ್ಧ ಮಹಿಳಾ ವಿರೋಧಿ ವಿವಾದ
ಬುಚ್ಚಿ ಬಾಬು ಸನಾ ನಿರ್ದೇಶನದ ರಾಮ್ ಚರಣ್ ಅಭಿನಯದ 'ಪೆದ್ದಿ' ಚಿತ್ರದಲ್ಲಿ ಜಾನ್ವಿ ಕಪೂರ್ ಪಾತ್ರವನ್ನು ಅಸಭ್ಯವಾಗಿ ಚಿತ್ರಿಸಿರುವುದಕ್ಕೆ ಪ್ರೇಕ್ಷಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮತ್ತು ಬಾಲಿವುಡ್ ನಟಿ ಜಾನ್ವಿ ಕಪೂರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ 'ಪೆದ್ದಿ' ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಭಾರೀ ವಿವಾದಕ್ಕೆ ಸಿಲುಕಿದೆ.
ಚಿತ್ರದ ಕಥೆ ಅಥವಾ ಮೇಕಿಂಗ್‌ಗಿಂತ ಹೆಚ್ಚಾಗಿ, ನಾಯಕಿ ಜಾನ್ವಿ ಕಪೂರ್ ಅವರನ್ನು ಸಿನಿಮಾದಲ್ಲಿ ತೋರಿಸಿರುವ ಅಸಭ್ಯ ಮತ್ತು ಆಕ್ಷೇಪಾರ್ಹ ರೀತಿಗೆ ಪ್ರೇಕ್ಷಕರು ಹಾಗೂ ಅಭಿಮಾನಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇಡೀ ಸಿನಿಮಾದಲ್ಲಿ ನಾಯಕಿಗೆ ಯಾವುದೇ ಪ್ರಮುಖ ಪಾತ್ರವನ್ನು ನೀಡದೆ, ಕೇವಲ ಗ್ಲಾಮರ್ ಮತ್ತು ಪುರುಷರ ಕಾಮದ ದೃಷ್ಟಿಯಿಂದ ಮಾತ್ರ ಬಳಸಿಕೊಳ್ಳಲಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಚಿತ್ರತಂಡವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಚಿತ್ರದಲ್ಲಿ ನಾಯಕನ ಪಾತ್ರವು ನಾಯಕಿಯ ಮುಖ ಅಥವಾ ಕಣ್ಣುಗಳನ್ನು ಹೊಗಳುವಾಗ, ಕ್ಯಾಮೆರಾ ಆಕೆಯ ದೇಹದ ಇತರೆ ಭಾಗಗಳನ್ನು ಅಸಭ್ಯವಾಗಿ ತೋರಿಸುತ್ತದೆ ಎಂದು ಪ್ರೇಕ್ಷಕರು ಕಿಡಿಕಾರಿದ್ದಾರೆ. ಮಹಿಳೆಯ ಒಪ್ಪಿಗೆಯಿಲ್ಲದೆ ನಾಯಕ ಬಲವಂತವಾಗಿ ಮುತ್ತು ಕೊಡುವ ದೃಶ್ಯಗಳು ಮತ್ತು ಚುನಾವಣಾ ಪ್ರಚಾರದ ವೇಳೆ ನಾಯಕಿಯನ್ನು ಸಾರ್ವಜನಿಕವಾಗಿ ಅವಮಾನಿಸುವ ದೃಶ್ಯಗಳನ್ನು ರೋಮ್ಯಾಂಟಿಕ್ ಹಿನ್ನೆಲೆ ಸಂಗೀತದೊಂದಿಗೆ ಗ್ಲೋರಿಫೈ ಮಾಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಇಂತಹ ಅಶ್ಲೀಲ ಮತ್ತು ಮಹಿಳಾ ವಿರೋಧಿ ದೃಶ್ಯಗಳಿಗೆ ಅನುಮತಿ ನೀಡಿದ ಸೆನ್ಸಾರ್ ಮಂಡಳಿಯ (CBFC) ದ್ವಂದ್ವ ನೀತಿಯನ್ನು ಸಹ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ನಿರ್ದೇಶಕ ಬುಚ್ಚಿ ಬಾಬು ಸನಾ ಅವರು ಕಮರ್ಷಿಯಲ್ ಸಿನಿಮಾದ ಹೆಸರಿನಲ್ಲಿ ಮಹಿಳಾ ಪಾತ್ರವನ್ನು ಇಷ್ಟೊಂದು ಕೀಳಾಗಿ ಚಿತ್ರಿಸಿರುವುದು ಚಿತ್ರಮಂದಿರಕ್ಕೆ ಬರುವ ಮಹಿಳಾ ಪ್ರೇಕ್ಷಕರಿಗೆ ಮಾಡಿದ ಅವಮಾನ ಎಂದು ಸಿನೆಮಾ ಪ್ರೇಮಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

