
ರಜನಿಕಾಂತ್‌ರ 'ಜೈಲರ್ 2' ದೃಶ್ಯ ಸೋರಿಕೆ
Jailer 2 Movie| ರಜನಿಕಾಂತ್ ಅಭಿನಯದ 'ಜೈಲರ್ 2' ವಿಡಿಯೋ ತುಣುಕು ಸೋರಿಕೆ
ರಜನಿಕಾಂತ್‌ರ 'ಜೈಲರ್ 2' ದೃಶ್ಯ ಸೋರಿಕೆಯಾಗಿದೆ. ವಿಡಿಯೋ ಹಂಚಿಕೊಳ್ಳದಂತೆ ಸನ್ ಪಿಕ್ಚರ್ಸ್ ಎಚ್ಚರಿಕೆ ನೀಡಿದೆ. ಚಿತ್ರವು 2026ರ ಬೇಸಿಗೆಯಲ್ಲಿ ತೆರೆಗೆ ಬರಲಿದೆ.
ರಜನಿಕಾಂತ್ ಅವರ ಬಹುನಿರೀಕ್ಷಿತ 'ಜೈಲರ್ 2' ಚಿತ್ರದ ಪ್ರಮುಖ ದೃಶ್ಯವೊಂದು ಸೋರಿಕೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಇತ್ತೀಚೆಗಷ್ಟೇ ದಳಪತಿ ವಿಜಯ್ ಅವರ 'ಜನನಾಯಕನ್' ಚಿತ್ರದ ದೃಶ್ಯಗಳು ಸೋರಿಕೆಯಾದ ಬೆನ್ನಲ್ಲೇ ಈಗ ರಜನಿಕಾಂತ್ ಅವರ ಚಿತ್ರಕ್ಕೂ ಪೈರಸಿ ಕಾಟ ಶುರುವಾಗಿದೆ. ಈ ಬೆಳವಣಿಗೆಯಿಂದ ಚಿತ್ರತಂಡ ಮತ್ತು ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ.
ಸನ್ ಪಿಕ್ಚರ್ಸ್ ಅಧಿಕೃತ ಹೇಳಿಕೆ
ಈ ಭದ್ರತಾ ಲೋಪದ ಬಗ್ಗೆ ತಕ್ಷಣವೇ ಕಾರ್ಯಪ್ರವೃತ್ತರಾಗಿರುವ ಸನ್ ಪಿಕ್ಚರ್ಸ್ ಸಂಸ್ಥೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. "ಜೈಲರ್ 2 ಸೆಟ್‌ನ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ನಮ್ಮ ಆಂಟಿ-ಪೈರಸಿ ತಂಡವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಇಂತಹ ವಿಷಯಗಳನ್ನು ಹಂಚಿಕೊಳ್ಳುವ ಅಥವಾ ಪ್ರೋತ್ಸಾಹಿಸುವ ಖಾತೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮಾಧ್ಯಮಗಳು ಮತ್ತು ಅಭಿಮಾನಿಗಳು ಈ ವಿಡಿಯೋವನ್ನು ಮರು-ಹಂಚಿಕೆ ಮಾಡದಂತೆ ವಿನಂತಿಸುತ್ತೇವೆ. ಒಂದು ವೇಳೆ ಅಂತಹ ಖಾತೆಗಳು ನಿರ್ಬಂಧಕ್ಕೊಳಗಾದರೆ (Suspension) ಅದಕ್ಕೆ ನಿರ್ಮಾಣ ಸಂಸ್ಥೆ ಜವಾಬ್ದಾರರಲ್ಲ," ಎಂದು ತಿಳಿಸಿದೆ.
ಈ ಹಿಂದೆ ರಜನಿಕಾಂತ್ ಅವರ 'ಕೂಲಿ' ಚಿತ್ರದ ಚಿತ್ರೀಕರಣದ ವೇಳೆ ನಾಗಾರ್ಜುನ ಅವರ ದೃಶ್ಯಗಳು ಸೋರಿಕೆಯಾಗಿದ್ದವು. ತಮಿಳು ಚಿತ್ರರಂಗದಲ್ಲಿ ಈ ರೀತಿ ಬಿಹೈಂಡ್ ದಿ ಸೀನ್ ದೃಶ್ಯಗಳು ಸೋರಿಕೆಯಾಗುತ್ತಿರುವುದು ಚಿತ್ರೋದ್ಯಮಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಜೈಲರ್ 2 ಬಗ್ಗೆ
ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ 'ಜೈಲರ್ 2' ಚಿತ್ರದಲ್ಲಿ ರಜನಿಕಾಂತ್ ಅವರೊಂದಿಗೆ ಶಿವರಾಜ್‌ಕುಮಾರ್, ಮೋಹನ್ ಲಾಲ್, ಪವನ್ ಕಲ್ಯಾಣ್, ಮಿಥುನ್ ಚಕ್ರವರ್ತಿ ಮತ್ತು ವಿದ್ಯಾ ಬಾಲನ್ ಅವರಂತಹ ಘಟಾನುಘಟಿ ಕಲಾವಿದರು ನಟಿಸುತ್ತಿದ್ದಾರೆ. ಟೈಗರ್ ಮುತ್ತುವೇಲ್ ಪಾಂಡಿಯನ್ ಹೊಸ ಮಿಷನ್ ಮೇಲೆ ಹೊರಡುವ ಕಥೆ ಇದಾಗಿದೆ. ಜನ ನಾಯಕನ್ ಆನ್‌ಲೈನ್‌ನಲ್ಲಿ ಎಚ್‌ಡಿ ಗುಣಮಟ್ಟದಲ್ಲಿ ಅಕ್ರಮವಾಗಿ ಸೋರಿಕೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಲಾಗಿತ್ತು.
ಕ್ಲೌಡ್ ಮೂಲಕ ಹಂಚಿಕೆ
ತನಿಖೆಯಲ್ಲಿ ಆರೋಪಿಗಳು ಕ್ಲೌಡ್ ಸ್ಟೋರೇಜ್ ಪ್ಲಾಟ್‌ಫಾರ್ಮ್‌ಗಳು ಮತ್ತು ಶೇರ್ಡ್ ಡ್ರೈವ್ ಲಿಂಕ್‌ಗಳ ಮೂಲಕ ಚಿತ್ರದ ನಕಲು ಪ್ರತಿಗಳನ್ನು ಹರಡಿರುವುದು ಬೆಳಕಿಗೆ ಬಂದಿದೆ. ಬಂಧಿತರಿಂದ ಮಹತ್ವದ ಡಿಜಿಟಲ್ ಸಾಕ್ಷ್ಯಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯಕ್ಕೆ 300ಕ್ಕೂ ಹೆಚ್ಚು ಅಕ್ರಮ ಲಿಂಕ್‌ಗಳನ್ನು ತಡೆಗಟ್ಟುವ ಪ್ರಕ್ರಿಯೆ ಕೈಗೊಳ್ಳಲಾಗಿದ್ದು, ಇನ್ನೂ ಕೆಲವು ಲಿಂಕ್‌ಗಳನ್ನು ತೆಗೆದುಹಾಕುವ ಕೆಲಸ ಮುಂದುವರಿದಿದೆ. ಸಾಮಾಜಿಕ ಜಾಲತಾಣಗಳು, ವೆಬ್‌ಸೈಟ್‌ಗಳು ಮತ್ತು ಫೈಲ್ ಶೇರ್ ಮಾಡುವ ಸೇವೆಗಳ ಮೇಲೆ ಸೈಬರ್ ವಿಂಗ್ ನಿಗಾ ಇಟ್ಟಿದ್ದು, ಇನ್ನಷ್ಟು ಮಂದಿಯ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದೆ.

