100 ಕೋಟಿ ದಾಟಿದ ರಾಜಾ ಶಿವಾಜಿ ಸಿನಿಮಾ : ಮುರಿಯಲಿದೆಯೇ ಸೈರಾಟ್ ರೆಕಾರ್ಡ್?
x

100 ಕೋಟಿ ಕ್ಲಬ್ ಸೇರಿದ ಎರಡನೇ ಮರಾಠಿ ಸಿನಿಮಾ 'ರಾಜಾ ಶಿವಾಜಿ

100 ಕೋಟಿ ದಾಟಿದ 'ರಾಜಾ ಶಿವಾಜಿ' ಸಿನಿಮಾ : ಮುರಿಯಲಿದೆಯೇ 'ಸೈರಾಟ್' ರೆಕಾರ್ಡ್?

ರಿತೇಶ್ ದೇಶ್‌ಮುಖ್ ನಿರ್ದೇಶನದ 'ರಾಜಾ ಶಿವಾಜಿ' ಸಿನಿಮಾ 100 ಕೋಟಿ ಕ್ಲಬ್ ಸೇರಿದ್ದು, ಮರಾಠಿ ಚಿತ್ರರಂಗದ ಸಾರ್ವಕಾಲಿಕ ದಾಖಲೆಯಾದ 'ಸೈರಾಟ್' ಚಿತ್ರವನ್ನು ಹಿಂದಿಕ್ಕುವ ಮುನ್ಸೂಚನೆ ನೀಡಿದೆ.


Click the Play button to hear this message in audio format

ಮರಾಠಿ ಚಿತ್ರರಂಗದಲ್ಲಿ ನಟ ಹಾಗೂ ನಿರ್ದೇಶಕ ರಿತೇಶ್ ದೇಶ್‌ಮುಖ್ ಅವರ ಮಹತ್ವಾಕಾಂಕ್ಷೆಯ ಐತಿಹಾಸಿಕ ಚಲನಚಿತ್ರ 'ರಾಜಾ ಶಿವಾಜಿ' ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಪ್ರದರ್ಶನ ಕಂಡ ಕೇವಲ 17 ದಿನಗಳಲ್ಲಿ ಈ ಚಿತ್ರವು ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ 100 ಕೋಟಿ ರೂಪಾಯಿ ಒಟ್ಟು ಗಳಿಕೆಯನ್ನು ದಾಟುವ ಮೂಲಕ ದಾಖಲೆ ಬರೆದಿದೆ. ಈ ಮಹತ್ತರ ಮೈಲಿಗಲ್ಲನ್ನು ತಲುಪಿದ ಮರಾಠಿ ಚಿತ್ರರಂಗದ ಇತಿಹಾಸದ ಎರಡನೇ ಸಿನಿಮಾ ಎಂಬ ಹೆಗ್ಗಳಿಕೆಗೆ 'ರಾಜಾ ಶಿವಾಜಿ' ಪಾತ್ರವಾಗಿದೆ.

ಛತ್ರಪತಿ ಶಿವಾಜಿ ಮಹಾರಾಜರ ವೀರಗಾಥೆಯನ್ನು ಆಧರಿಸಿದ ಚಿತ್ರವು ಬಿಡುಗಡೆಯಾದ ಮೊದಲ ದಿನದಿಂದಲೇ ಪ್ರೇಕ್ಷಕರಿಂದ ಅಭೂತಪೂರ್ವ ಬೆಂಬಲ ಪಡೆದುಕೊಂಡಿತ್ತು. ಮೊದಲ ವಾರದಲ್ಲಿ 52.65 ಕೋಟಿ ಹಾಗೂ ಎರಡನೇ ವಾರದಲ್ಲಿ 24.30 ಕೋಟಿ ರೂಪಾಯಿ ಗಳಿಸಿದ್ದ ಈ ಸಿನಿಮಾ, ಮೂರನೇ ವಾರಾಂತ್ಯದಲ್ಲೂ ತನ್ನ ಅಬ್ಬರವನ್ನು ಮುಂದುವರಿಸಿದೆ. ಪ್ರಮುಖವಾಗಿ ಮಹಾರಾಷ್ಟ್ರದಲ್ಲಿ ಮರಾಠಿ ಆವೃತ್ತಿಗೆ ಭಾರಿ ಜನಮನ್ನಣೆ ಸಿಕ್ಕಿದ್ದು, ಇದರೊಂದಿಗೆ ಹಿಂದಿ ಆವೃತ್ತಿಯೂ ಚಿತ್ರದ ಯಶಸ್ಸಿಗೆ ಗಣನೀಯ ಕೊಡುಗೆ ನೀಡಿದೆ.

ಚಿತ್ರದ ಈ ಆವೇಗವನ್ನು ಗಮನಿಸಿದರೆ, ಮರಾಠಿ ಚಿತ್ರರಂಗದಲ್ಲಿ ಕಳೆದ ಹತ್ತು ವರ್ಷಗಳಿಂದ ಅಲುಗಾಡದಂತೆ ಉಳಿದಿದ್ದ 'ಸೈರಾಟ್' ಸಿನಿಮಾದ ಸಾರ್ವಕಾಲಿಕ ಗಲ್ಲಾಪೆಟ್ಟಿಗೆ ದಾಖಲೆಯನ್ನು 'ರಾಜಾ ಶಿವಾಜಿ' ಶೀಘ್ರದಲ್ಲೇ ಮುರಿಯಲಿದೆ ಎಂದು ಸಿನಿಮಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಸದ್ಯ ಚಿತ್ರರಂಗದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಎರಡನೇ ಚಿತ್ರವಾಗಿದ್ದ 'ಬೈಪನ್ ಭಾರಿ ದೇವಾ' ಸಿನಿಮಾದ ದಾಖಲೆಯನ್ನು ಈಗಾಗಲೇ ರಿತೇಶ್ ಚಿತ್ರ ಹಿಂದಿಕ್ಕಿದೆ.

ರಿತೇಶ್ ದೇಶ್‌ಮುಖ್ ಅವರ ಅದ್ಭುತ ನಟನೆ ಮತ್ತು ನಿರ್ದೇಶನಕ್ಕೆ ಚಿತ್ರರಂಗದ ಗಣ್ಯರು ಹಾಗೂ ಪ್ರೇಕ್ಷಕರು ಪ್ರಶಂಸೆಗಳ ಮಳೆ ಹರಿಸುತ್ತಿದ್ದಾರೆ. ಜಿಯೋ ಸ್ಟುಡಿಯೋಸ್ ಮತ್ತು ಮುಂಬೈ ಫಿಲ್ಮ್ ಕಂಪನಿ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರದಲ್ಲಿ ಜಿನೆಲಿಯಾ ದೇಶ್‌ಮುಖ್, ಸಂಜಯ್ ದತ್, ಅಭಿಷೇಕ್ ಬಚ್ಚನ್ ಮತ್ತು ವಿದ್ಯಾ ಬಾಲನ್ ಸೇರಿದಂತೆ ದಂಡೇ ನಟಿಸಿದೆ.

Read More
Next Story