
ಬಾಲಿವುಡ್‌ನಲ್ಲಿ ರಾಜ್ ಬಿ ಶೆಟ್ಟಿ ಧಮಾಕಾ: 'ಪಿಂಜಾರಾ' ಹಾಡು ವೈರಲ್
ಅನುರಾಗ್ ಕಶ್ಯಪ್ ನಿರ್ದೇಶನದ 'ಬಂದರ್' ಚಿತ್ರದ ಹೈ-ವೋಲ್ಟೇಜ್ 'ಪಿಂಜಾರಾ' ಹಾಡಿನಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ ರಾಜ್ ಬಿ ಶೆಟ್ಟಿ ಭರ್ಜರಿ ಸ್ಟೆಪ್ಸ್ ಹಾಕಿದ್ದು, ಬಾಲಿವುಡ್ ಎಂಟ್ರಿ ವೈರಲ್ ಆಗಿದೆ.
ಸ್ಯಾಂಡಲ್‌ವುಡ್‌ನಲ್ಲಿ ತನ್ನ ವಿಶಿಷ್ಟ ನಟನೆ ಹಾಗೂ ಗಡುಸಾದ ನಿರ್ದೇಶನ ಶೈಲಿಯಿಂದ ಗುರುತಿಸಿಕೊಂಡಿರುವ ನಟ-ನಿರ್ದೇಶಕ ರಾಜ್ ಬಿ ಶೆಟ್ಟಿ ಈಗ ಬಾಲಿವುಡ್ ಅಂಗಳಕ್ಕೆ ಅದ್ಧೂರಿ ಎಂಟ್ರಿ ಕೊಟ್ಟಿದ್ದಾರೆ.
ಖ್ಯಾತ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ನಿರ್ದೇಶನದ, ಬಾಬಿ ಡಿಯೋಲ್ ಮುಖ್ಯಭೂಮಿಕೆಯಲ್ಲಿರುವ 'ಬಂದರ್' ಚಿತ್ರದ ಹೈ-ವೋಲ್ಟೇಜ್ ವಿಡಿಯೋ ಸಾಂಗ್ 'ಪಿಂಜಾರ' ಬಿಡುಗಡೆಯಾಗಿದ್ದು, ಇಂಟರ್ನೆಟ್‌ನಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಇತ್ತೀಚೆಗಷ್ಟೇ ತೆರೆಕಂಡ ಈ ಸಾಂಗ್‌ನಲ್ಲಿ ರಾಜ್ ಬಿ ಶೆಟ್ಟಿ ಅವರ ಎನರ್ಜಿಟಿಕ್ ಮತ್ತು ರಾ ಲುಕ್‌ನ ಡ್ಯಾನ್ಸ್ ಸ್ಟೆಪ್ಸ್ ಕಂಡು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಫಿದಾ ಆಗಿದ್ದು, "ಅದೇನ್ ಸ್ಟೆಪ್ ಗುರೂ!" ಎಂದು ಕೊಂಡಾಡುತ್ತಿದ್ದಾರೆ.
ಜೈಲಿನಲ್ಲಿ ರಾಜ್ ಬಿ ಶೆಟ್ಟಿ ಅಬ್ಬರ, ಬಾಬಿ ಡಿಯೋಲ್ ಸಂಕಷ್ಟ
ಅಮಿತ್ ತ್ರಿವೇದಿ ಅವರ ಸಂಗೀತ ಹಾಗೂ ಸುದೀಪ್ ಶರ್ಮಾ ಅವರ ಸಾಹಿತ್ಯವಿರುವ ಈ 'ಪಿಂಜಾರಾ' ಹಾಡು ಸಂಪೂರ್ಣವಾಗಿ ವಿಭಿನ್ನ ಶೈಲಿಯಲ್ಲಿ ಮೂಡಿಬಂದಿದೆ. ಹಾಡಿನ ದೃಶ್ಯಗಳಲ್ಲಿ ಜೈಲಿನ ಒಳಗಿನ ಸಂಭ್ರಮಾಚರಣೆಯ ಸೀಕ್ವೆನ್ಸ್‌ನಲ್ಲಿ ರಾಜ್ ಬಿ ಶೆಟ್ಟಿ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ. ಮತ್ತೊಂದೆಡೆ, ಚಿತ್ರದ ನಾಯಕ ಬಾಬಿ ಡಿಯೋಲ್ ಸಂಬಂಧಗಳ ಜಾಲ ಮತ್ತು ಮಾನಸಿಕ ಸಂಘರ್ಷದಲ್ಲಿ ಸಿಲುಕಿ ಒದ್ದಾಡುವ ದೃಶ್ಯಗಳನ್ನು ಈ ಹಾಡಿನಲ್ಲಿ ಕತ್ತರಿಸಿ ತೋರಿಸಲಾಗಿದೆ.
ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ 'ಬಂದರ್' ಸಿನಿಮಾದಲ್ಲಿ ಬಾಬಿ ಡಿಯೋಲ್ ತಪ್ಪು ಆರೋಪದ ಮೇಲೆ ಜೈಲು ಪಾಲಾಗಲಿದ್ದು, ಅಲ್ಲಿ ಅವರಿಗೆ ಎದುರಾಗುವ ಸಹ-ಕೈದಿಯ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ಅತಿಥಿ ನಟನಾಗಿ ಅಬ್ಬರಿಸಲಿದ್ದಾರೆ ಎಂಬುದು ಟ್ರೈಲರ್ ಮತ್ತು ಹಾಡಿನ ತುಣುಕುಗಳಿಂದ ಸ್ಪಷ್ಟವಾಗಿದೆ.
ಗರುಡ ಗಮನಕ್ಕೆ ಫಿದಾ ಆಗಿದ್ದ ಅನುರಾಗ್ ಕಶ್ಯಪ್
ರಾಜ್ ಬಿ ಶೆಟ್ಟಿ ಅವರ ಈ ಬಾಲಿವುಡ್ ಎಂಟ್ರಿ ಇಷ್ಟೊಂದು ಕುತೂಹಲ ಮೂಡಿಸಲು ಮುಖ್ಯ ಕಾರಣ ನಿರ್ದೇಶಕ ಅನುರಾಗ್ ಕಶ್ಯಪ್. ರಾಜ್ ನಿರ್ದೇಶಿಸಿ, ನಟಿಸಿದ್ದ ಕನ್ನಡದ ಕಲ್ಟ್ ಕ್ಲಾಸಿಕ್ ಸಿನಿಮಾ 'ಗರುಡ ಗಮನ ವೃಷಭ ವಾಹನ' ಚಿತ್ರವನ್ನು ನೋಡಿ ಕಶ್ಯಪ್ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ರಾಜ್ ಅವರ ಮೇಕಿಂಗ್ ಮತ್ತು ರಗಡ್ ಶೈಲಿಗೆ ಮನಸೋತಿದ್ದ ಅವರು, ತಮ್ಮದೇ 'ಬಂದರ್' ಸಿನಿಮಾದ ಈ ವಿಶಿಷ್ಟ ಪಾತ್ರಕ್ಕೆ ರಾಜ್ ಬಿ ಶೆಟ್ಟಿ ಅವರನ್ನೇ ಖುದ್ದಾಗಿ ಆಹ್ವಾನಿಸಿದ್ದರು ಎನ್ನಲಾಗಿದೆ.
'ಪಾತಾಳ್ ಲೋಕ್' ಖ್ಯಾತಿಯ ಸುದೀಪ್ ಶರ್ಮಾ ಮತ್ತು ಅಭಿಷೇಕ್ ಬ್ಯಾನರ್ಜಿ ಚಿತ್ರಕಥೆ ಬರೆದಿರುವ, ನಿಖಿಲ್ ದ್ವಿವೇದಿ ಅವರ ಸ್ಯಾಫ್ರಾನ್ ಮ್ಯಾಜಿಕ್‌ವರ್ಕ್ಸ್ ಮತ್ತು ಜೀ ಸ್ಟುಡಿಯೋಸ್ ನಿರ್ಮಿಸಿರುವ 'ಬಂದರ್' ಸಿನಿಮಾ ಇದೇ ಜೂ. 5 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ಸನ್ಯಾ ಮಲ್ಹೋತ್ರಾ, ಸಬಾ ಆಜಾದ್ ಮತ್ತು ಮಲಯಾಳಂ ನಟ ಇಂದ್ರಜಿತ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

