
ರಾಗಿಣಿ ದ್ವಿವೇದಿ ಬರ್ತ್‌ಡೇ ಸ್ಪೆಷಲ್: 'ರಾಗಿಣಿ ಐಪಿಎಸ್ 2' ಸಿನಿಮಾ ಘೋಷಣೆ
ನಟಿ ರಾಗಿಣಿ ದ್ವಿವೇದಿ ಹುಟ್ಟುಹಬ್ಬದಂದು 'ರಾಗಿಣಿ ಐಪಿಎಸ್ 2' ಚಿತ್ರ ಘೋಷಣೆಯಾಗಿದೆ. ಜಗ್ಗೇಶ್ ಪುತ್ರರಾದ ಗುರುರಾಜ್ ಹಾಗೂ ಯತಿರಾಜ್ ಈ ಆ್ಯಕ್ಷನ್ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ.
ತಮ್ಮ ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ಸ್ಯಾಂಡಲ್‌ವುಡ್ ಖ್ಯಾತ ನಟಿ ರಾಗಿಣಿ ದ್ವಿವೇದಿ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ಸಂದರ್ಭದಲ್ಲೇ ಅವರ ಅಭಿಮಾನಿಗಳಿಗೆ ಚಿತ್ರತಂಡವೊಂದು ದೊಡ್ಡ ಉಡುಗೊರೆ ನೀಡಿದ್ದು, ನೂತನ ಚಿತ್ರದ ಅಧಿಕೃತ ಘೋಷಣೆಯಾಗಿದೆ. ಹನ್ನೆರಡು ವರ್ಷಗಳ ಹಿಂದೆ ರಾಗಿಣಿ ಅವರು ನಾಯಕಿಯಾಗಿ ನಟಿಸಿ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿದ್ದ "ರಾಗಿಣಿ ಐಪಿಎಸ್" ಚಿತ್ರದ ಮುಂದುವರಿದ ಭಾಗವಾಗಿ ಈಗ "ರಾಗಿಣಿ ಐಪಿಎಸ್ 2" ಚಿತ್ರ ಸೆಟ್ಟೇರಲು ಸಜ್ಜಾಗಿದೆ.
ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಮತ್ತಿಬ್ಬರು ನೂತನ ನಿರ್ದೇಶಕರ ಎಂಟ್ರಿಯಾಗುತ್ತಿದೆ. ಖ್ಯಾತ ನಟ, ನವರಸ ನಾಯಕ ಜಗ್ಗೇಶ್ ಅವರ ಪುತ್ರರಾದ ಗುರುರಾಜ್ ಹಾಗೂ ಯತಿರಾಜ್ ಜಂಟಿಯಾಗಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದುವರೆಗೆ ನಟರಾಗಿ ಜನಪ್ರಿಯರಾಗಿದ್ದ ಈ ಸಹೋದರರು, ಈಗ ಈ ಬಹುನಿರೀಕ್ಷಿತ ಸೀಕ್ವೆಲ್ ಮೂಲಕ ನಿರ್ದೇಶಕರಾಗಿ ಹೊಸ ಇನಿಂಗ್ಸ್ ಆರಂಭಿಸುತ್ತಿದ್ದಾರೆ. ಈ ಹೈ-ವೋಲ್ಟೇಜ್ ಆ್ಯಕ್ಷನ್ ಸಿನಿಮಾವನ್ನು ಪ್ರಖ್ಯಾತ ನಿರ್ಮಾಪಕ ಕೆ.ಮಂಜು ಹಾಗೂ ರಾಗಿಣಿ ವೆಂಚರ್ಸ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.
ತಮ್ಮ ಹುಟ್ಟುಹಬ್ಬದ ದಿನದಂದು ಮಾಧ್ಯಮಗಳ ಸಮ್ಮುಖದಲ್ಲಿ ಚಿತ್ರದ ಪೋಸ್ಟರ್ ಹಾಗೂ ಶೀರ್ಷಿಕೆಯನ್ನು ಹಂಚಿಕೊಂಡ ನಟಿ ರಾಗಿಣಿ ದ್ವಿವೇದಿ, ಚಿತ್ರದ ಕುರಿತು ಹಲವು ಆಸಕ್ತಿದಾಯಕ ಮಾಹಿತಿಗಳನ್ನು ಹಂಚಿಕೊಂಡರು.
ಚಿತ್ರದ ಕುರಿತು ಮಾತನಾಡಿದ ನಿರ್ದೇಶಕರಾದ ಗುರುರಾಜ್ ಮತ್ತು ಯತಿರಾಜ್, "ರಾಗಿಣಿ ಐಪಿಎಸ್ ಚಿತ್ರವು ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಜನಪ್ರಿಯ ಸಿನಿಮಾ. ಆ ಚಿತ್ರದಲ್ಲಿ ರಾಗಿಣಿ ಅವರ ಖಡಕ್ ಅಭಿನಯಕ್ಕೆ ಇಡೀ ಕರ್ನಾಟಕವೇ ಫಿದಾ ಆಗಿತ್ತು. ಈಗ ಅದರ ಮುಂದುವರಿದ ಭಾಗವನ್ನು ಕೈಗೆತ್ತಿಕೊಂಡಿದ್ದೇವೆ. ನಾವಿಬ್ಬರು 2019 ರಿಂದಲೂ ನಿರ್ದೇಶನಕ್ಕಾಗಿ ಚಿತ್ರಕಥೆ ಸೇರಿದಂತೆ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ನಟನೆಗಿಂತ ನಿರ್ದೇಶನವೇ ಬೇರೆ ಆಗಿರುವುದರಿಂದ ಸೂಕ್ತ ತಯಾರಿ ಅತ್ಯಗತ್ಯವಾಗಿತ್ತು. ರಾಗಿಣಿ ಅವರು ಈಗಾಗಲೇ ದೊಡ್ಡ ಮಟ್ಟದ ಅಭಿಮಾನಿ ಬಳಗ ಹೊಂದಿರುವ ನಟಿ, ಅವರ ಸಿನಿಮಾವನ್ನು ನಿರ್ದೇಶಿಸುವುದು ಅಷ್ಟು ಸುಲಭವಲ್ಲ. ರಾಗಿಣಿ ಐಪಿಎಸ್ ಚಿತ್ರದ ಕಥೆ ಎಲ್ಲಿಗೆ ಕೊನೆಯಾಗಿತ್ತೋ, ಅಲ್ಲಿಂದಲೇ ಈ ಎರಡನೇ ಭಾಗದ ಕಥೆ ಮುಂದುವರೆಯಲಿದೆ" ಎಂದು ತಿಳಿಸಿದರು.
ನಟಿ ರಾಗಿಣಿ ದ್ವಿವೇದಿ ಮಾತನಾಡಿ, "ನಾನು ಚಿತ್ರರಂಗಕ್ಕೆ ಕಾಲಿಟ್ಟ ದಿನದಿಂದಲೂ ಮಾಧ್ಯಮದವರು ನನಗೆ ಅಪಾರವಾದ ಸಹಕಾರ ನೀಡುತ್ತಾ ಬಂದಿದ್ದಾರೆ. ಹಾಗಾಗಿ ನನ್ನ ಈ ಹೊಸ ಚಿತ್ರದ ಘೋಷಣೆಯನ್ನು ಹುಟ್ಟುಹಬ್ಬದ ದಿನ ಮಾಧ್ಯಮದವರ ಸಮ್ಮುಖದಲ್ಲೇ ಮಾಡುತ್ತಿರುವುದು ಖುಷಿ ತಂದಿದೆ. ಹಿರಿಯ ನಿರ್ಮಾಪಕರಾದ ಕೆ.ಮಂಜು ಅವರು ನಮ್ಮೊಂದಿಗೆ ಕೈಜೋಡಿಸಿರುವುದು ಹಾಗೂ ಜಗ್ಗೇಶ್ ಅವರ ಮಕ್ಕಳಾದ ಗುರುರಾಜ್-ಯತಿರಾಜ್ ಈ ಚಿತ್ರವನ್ನು ನಿರ್ದೇಶಿಸುತ್ತಿರುವುದು ಚಿತ್ರದ ಮೇಲಿನ ಭರವಸೆಯನ್ನು ಹೆಚ್ಚಿಸಿದೆ" ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ನಿರ್ಮಾಪಕ ಕೆ.ಮಂಜು ಮಾತನಾಡಿ, "ರಾಗಿಣಿ ಅವರು ಚಿತ್ರರಂಗಕ್ಕೆ ನಾಯಕಿಯಾಗಿ ಬಂದ ದಿನದಿಂದಲೂ ನನಗೆ ಆತ್ಮೀಯರು. ಇತ್ತೀಚೆಗೆ ಅವರು ಕರೆ ಮಾಡಿ ಹೊಸ ಕಥೆ ಕೇಳಲು ನಿರ್ದೇಶಕರು ಬರುತ್ತಿದ್ದಾರೆ ಎಂದು ಹೇಳಿದಾಗ ನನಗೆ ಯಾರೆಂದು ತಿಳಿದಿರಲಿಲ್ಲ. ಆದರೆ ನನ್ನ ಆತ್ಮೀಯ ಸ್ನೇಹಿತ ಜಗ್ಗೇಶ್ ಅವರ ಮಕ್ಕಳಾದ ಗುರುರಾಜ್ ಮತ್ತು ಯತಿರಾಜ್ ಬಂದು 'ರಾಗಿಣಿ ಐಪಿಎಸ್ ೨' ಚಿತ್ರದ ಒನ್‌ಲೈನ್ ಕಥೆ ಹೇಳಿದರು. ಸಿನಿಮಾದ ಕಂಟೆಂಟ್ ತುಂಬಾ ಚೆನ್ನಾಗಿದೆ. ರಾಗಿಣಿ ವೆಂಚರ್ಸ್ ಕೂಡ ನಿರ್ಮಾಣದಲ್ಲಿ ಜೊತೆಯಾಗಿರುವುದರಿಂದ ಆದಷ್ಟು ಬೇಗ ಚಿತ್ರಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದ್ದೇವೆ" ಎಂದು ಭರವಸೆ ನೀಡಿದರು. ಚಿತ್ರದ ಪ್ರಕಟಣೆಯ ಈ ವಿಶೇಷ ಸಂದರ್ಭದಲ್ಲಿ ಪ್ರಖ್ಯಾತ ಉದ್ಯಮಿ ಸುಬ್ರಹ್ಮಣ್ಯ ಹಾಗೂ ಚಿತ್ರತಂಡದ ಪ್ರಮುಖರು ಉಪಸ್ಥಿತರಿದ್ದರು.

