
'ಬಾಹುಬಲಿ 3' ಚಿತ್ರದ ಬಗ್ಗೆ ಬಿಗ್ ಹಿಂಟ್ ಕೊಟ್ಟ ರೆಬೆಲ್ ಸ್ಟಾರ್ ಪ್ರಭಾಸ್
ಬಾಹುಬಲಿ 3 ಸಿನಿಮಾ ಸುಳಿವು ನೀಡಿದ ಪ್ರಭಾಸ್
ಪ್ರಭಾಸ್, ರಾಣಾ ಮತ್ತು ಅನುಷ್ಕಾ ಅವರ ಹೊಸ ವಿಡಿಯೋ ಬಾಹುಬಲಿ 3 ಚಿತ್ರದ ಬಗ್ಗೆ ದೊಡ್ಡ ಚರ್ಚೆ ಹುಟ್ಟುಹಾಕಿದೆ. ಆದರೆ ರಾಜಮೌಳಿ ಅವರ ಬಿಡುವಿಲ್ಲದ ವೇಳಾಪಟ್ಟಿ ದೊಡ್ಡ ಸವಾಲಾಗಿದೆ.
ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದ 'ಬಾಹುಬಲಿ' ಚಿತ್ರದ ಮಾಹಿಸ್ಮತಿ ಸಾಮ್ರಾಜ್ಯದ ಹವಾ ಇಂದಿಗೂ ಕಡಿಮೆಯಾಗಿಲ್ಲ. ದಶಕ ಕಳೆದರೂ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವ ಈ ಚಿತ್ರದ ಮುಂದುವರಿದ ಭಾಗದ ಬಗ್ಗೆ ಈಗ ಮತ್ತೆ ದೊಡ್ಡ ಮಟ್ಟದ ಚರ್ಚೆ ಶುರುವಾಗಿದೆ. ಇದಕ್ಕೆ ಮುಖ್ಯ ಕಾರಣ ಸ್ವತಃ ರೆಬೆಲ್ ಸ್ಟಾರ್ ಪ್ರಭಾಸ್ ನೀಡಿರುವ ಒಂದು ಬಿಗ್ ಹಿಂಟ್.
ಇತ್ತೀಚೆಗಷ್ಟೇ ನೆಟ್‌ಫ್ಲಿಕ್ಸ್‌ನಲ್ಲಿ ಬಾಹುಬಲಿ ಚಿತ್ರದ ನಿರ್ಮಾಣದ ಹಿಂದಿನ ಕಥೆಯನ್ನು ಒಳಗೊಂಡ 'ಬಾಹುಬಲಿ: ದಿ ಟಾರ್ಚ್‌ಬೇರರ್' ಎಂಬ ವಿಶೇಷ ಡಾಕ್ಯುಮೆಂಟರಿ ಸರಣಿ ಬಿಡುಗಡೆಯಾಗಿದೆ. ಈ ಸರಣಿಯ ಪ್ರಚಾರಕ್ಕಾಗಿ ಚಿತ್ರದ ಪ್ರಮುಖ ತಾರಾಗಣವಾದ ಪ್ರಭಾಸ್, ರಾಣಾ ದಗ್ಗುಬಾಟಿ ಮತ್ತು ಅನುಷ್ಕಾ ಶೆಟ್ಟಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ವೇಳೆ ಚಿತ್ರತಂಡ ಹಂಚಿಕೊಂಡಿರುವ ಪ್ರಚಾರದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದೆ. ವಿಡಿಯೋದಲ್ಲಿ ಈ ಮೂವರು ತಾರೆಗಳು ಪ್ರೇಕ್ಷಕರಿಗೆ ದೊಡ್ಡ ಆಶ್ಚರ್ಯವೊಂದನ್ನು ನೀಡಿದ್ದು, "ಈ ಪ್ರಕಟಣೆಗೆ ಜಗತ್ತು ಇನ್ನೂ ಸಿದ್ಧವಾಗಿಲ್ಲ, ಬಾಹುಬಲಿ ನಿಮಗಾಗಿ ಮತ್ತೆ ಬರುತ್ತಿದೆ" ಎಂಬ ಕ್ರೇಜಿ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ. ಇದಕ್ಕಿಂತಲೂ ಹೆಚ್ಚಾಗಿ ವಿಡಿಯೋದ ಕೊನೆಯಲ್ಲಿ ಪ್ರಭಾಸ್ ತಮ್ಮ ಮೂರು ಬೆರಳುಗಳನ್ನು ತೋರಿಸುವ ಮೂಲಕ 'ಬಾಹುಬಲಿ 3' ಚಿತ್ರ ಬರುವುದು ಖಚಿತ ಎಂಬಂತೆ ಸಖತ್ ಹಿಂಟ್ ನೀಡಿದ್ದಾರೆ.
ಪ್ರಭಾಸ್ ಅವರ ಈ ನಡೆ ಕೋಟ್ಯಂತರ ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿದ್ದು, ಬಾಹುಬಲಿ ಭಾಗ 3 ಬರುವುದು ಗ್ಯಾರಂಟಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಿಸುತ್ತಿದ್ದಾರೆ. ಆದರೆ, ಚಿತ್ರರಂಗದ ವಿಶ್ಲೇಷಕರ ಪ್ರಕಾರ ಇದು ಕೇವಲ ಮುಂದಿನ ವರ್ಷ ತೆರೆಗೆ ಬರಲಿರುವ 'ಬಾಹುಬಲಿ: ದಿ ಎಟರ್ನಲ್ ವಾರ್' ಎಂಬ ಅನಿಮೇಷನ್ ಸರಣಿಯ ಪ್ರಚಾರಕ್ಕಾಗಿ ಮಾಡಲಾದ ತಂತ್ರವೂ ಆಗಿರಬಹುದು ಎನ್ನಲಾಗುತ್ತಿದೆ.
ಒಂದು ವೇಳೆ ದರ್ಶಕ ಎಸ್.ಎಸ್. ರಾಜಮೌಳಿ ಮತ್ತು ನಿರ್ಮಾಪಕರು ನಿಜವಾಗಿಯೂ ಬಾಹುಬಲಿ 3 ಚಿತ್ರದ ಮೂರನೇ ಭಾಗವನ್ನು ಸಿನಿಮಾವಾಗಿ ಮಾಡಲು ಯೋಜಿಸುತ್ತಿದ್ದರೂ ಸಹ, ಅದನ್ನು ಸೆಟ್‌ಗೆ ಕೊಂಡೊಯ್ಯುವುದು ಸದ್ಯದ ಪರಿಸ್ಥಿತಿಯಲ್ಲಿ ಅಷ್ಟು ಸುಲಭವಲ್ಲ. ಏಕೆಂದರೆ, ಈ ಚಿತ್ರದಲ್ಲಿ ಕೆಲಸ ಮಾಡಿದ ಪ್ರಭಾಸ್, ರಾಣಾ, ಅನುಷ್ಕಾ ಸೇರಿದಂತೆ ಪ್ರಮುಖ ನಟರು ಮತ್ತು ತಂತ್ರಜ್ಞರು ಪ್ರಸ್ತುತ ತಮ್ಮದೇ ಆದ ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಜೊತೆಗೆ ರಾಜಮೌಳಿ ಅವರು ಪ್ರತಿ ಚಿತ್ರಕ್ಕೂ ಕನಿಷ್ಠ 3 ರಿಂದ 4 ವರ್ಷಗಳ ಸುದೀರ್ಘ ಸಮಯ ತೆಗೆದುಕೊಳ್ಳುವುದರಿಂದ, ಸದ್ಯದ ಭವಿಷ್ಯದಲ್ಲಿ ಬಾಹುಬಲಿ 3 ಸೆಟ್ ಏರುವುದು ಅನುಮಾನವೇ ಸರಿ. ಈ ಎಲ್ಲಾ ಸವಾಲುಗಳ ನಡುವೆಯೂ, ಭವಿಷ್ಯದಲ್ಲಿ ಒಂದು ವೇಳೆ ಬಾಹುಬಲಿ 3 ಸಿನಿಮಾ ನಿಜವಾದರೆ ಭಾರತೀಯ ಚಿತ್ರರಂಗದಲ್ಲಿ ಹಿಂದೆಂದೂ ಕಾಣದ ಇತಿಹಾಸ ಸೃಷ್ಟಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

