Operation Sindoor |ಆಪರೇಷನ್ ಸಿಂದೂರ್ ಸಿನಿಮಾ ಏನಾಯ್ತು? ನಿರ್ಮಾಪಕರ ಸಂಘ ಹೇಳೋದೇನು?
x

ಆಪರೇಷನ್ ಸಿಂದೂರ್ ಸಿನಿಮಾ ಶೀರ್ಷಿಕೆಗಾಗಿ 150ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿದ್ದು, ಯಾರಿಗೂ ಶೀರ್ಷಿಕೆ ನೀಡಿಲ್ಲ ಎಂದು ಇಂಪಾ ತಿಳಿಸಿದೆ.

Operation Sindoor |ಆಪರೇಷನ್ ಸಿಂದೂರ್ ಸಿನಿಮಾ ಏನಾಯ್ತು? ನಿರ್ಮಾಪಕರ ಸಂಘ ಹೇಳೋದೇನು?

ಆಪರೇಷನ್ ಸಿಂದೂರ್ ಸಿನಿಮಾ ಶೀರ್ಷಿಕೆಗಾಗಿ 150ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿದ್ದು, ಯಾರಿಗೂ ಶೀರ್ಷಿಕೆ ನೀಡಿಲ್ಲ ಎಂದು ನಿರ್ಮಾಪಕ ಸಂಘ IMPPA ತಿಳಿಸಿದೆ.


Click the Play button to hear this message in audio format

ಸೇನಾ ಕಾರ್ಯಾಚರಣೆಯ ಆಧಾರಿತ 'ಆಪರೇಷನ್ ಸಿಂದೂರ್' ಹೆಸರಿನ ಚಲನಚಿತ್ರದ ಶೀರ್ಷಿಕೆಗಾಗಿ ಬಾಲಿವುಡ್ ನಿರ್ಮಾಪಕರಲ್ಲಿ ಭಾರಿ ಪೈಪೋಟಿ ಏರ್ಪಟ್ಟಿದ್ದು, ಈ ಕುರಿತು ಭಾರತೀಯ ಚಲನಚಿತ್ರ ನಿರ್ಮಾಪಕರ ಸಂಘವು (IMPPA) ಮಹತ್ವದ ಮಾಹಿತಿ ಹಂಚಿಕೊಂಡಿದೆ. ಈವರೆಗೂ ಯಾವುದೇ ನಿರ್ಮಾಪಕರಿಗೆ ಅಧಿಕೃತವಾಗಿ ಈ ಶೀರ್ಷಿಕೆಯನ್ನು ಮಂಜೂರು ಮಾಡಿಲ್ಲ ಎಂದು ಸಂಘದ ಅಧ್ಯಕ್ಷ ಅಭಯ್ ಸಿನ್ಹಾ ಸ್ಪಷ್ಟಪಡಿಸಿದ್ದಾರೆ.

ಸರಿಸುಮಾರು 150ಕ್ಕೂ ಹೆಚ್ಚು ಅರ್ಜಿಗಳು ಈ ಒಂದೇ ಹೆಸರಿಗಾಗಿ ಸಲ್ಲಿಕೆಯಾಗಿದ್ದು, ಅರ್ಜಿದಾರರ ಸಂಖ್ಯೆ ಹೆಚ್ಚಿರುವ ಕಾರಣ ಸಂಘವು ಶೀರ್ಷಿಕೆ ಹಂಚಿಕೆಯ ನಿರ್ಧಾರವನ್ನು ಸದ್ಯಕ್ಕೆ ಮುಂದೂಡಿದೆ. ಸಾಮಾನ್ಯವಾಗಿ ದೇಶದಲ್ಲಿ ಯಾವುದಾದರೂ ಪ್ರಮುಖ ಘಟನೆಗಳು ಅಥವಾ ಸೇನಾ ಕಾರ್ಯಾಚರಣೆಗಳು ನಡೆದಾಗ, ಅದರ ಪ್ರಚಾರದ ಲಾಭ ಪಡೆಯಲು ನಿರ್ಮಾಪಕರು ಶೀರ್ಷಿಕೆ ನೋಂದಾಯಿಸಲು ಮುಗಿಬೀಳುವುದು ಒಂದು ಸಂಪ್ರದಾಯವಾಗಿ ಬೆಳೆದಿದೆ. ಆದರೆ ಹೀಗೆ ನೋಂದಾಯಿಸುವ ಎಲ್ಲ ಚಿತ್ರಗಳು ಸೆಟ್ಟೇರುವುದಿಲ್ಲ ಎಂದು ಚಿತ್ರೋದ್ಯಮದ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಸದ್ಯಕ್ಕೆ ಈ ವಿಷಯಕ್ಕೆ ಸಂಬಂಧಿಸಿದಂತೆ ಕೇವಲ ಎರಡು ಚಿತ್ರಗಳು ಮಾತ್ರ ಅಧಿಕೃತವಾಗಿ ಘೋಷಣೆಯಾಗಿವೆ. ಇದರಲ್ಲಿ ವಿವೇಕ್ ಅಗ್ನಿಹೋತ್ರಿ ಅವರು ಲೆಫ್ಟಿನೆಂಟ್ ಜನರಲ್ ಕೆ.ಜೆ.ಎಸ್. ಧಿಲ್ಲೋನ್ ಅವರ ಪುಸ್ತಕದ ಆಧಾರದ ಮೇಲೆ ಸಿನಿಮಾ ಮಾಡುವುದಾಗಿ ಘೋಷಿಸಿದ್ದಾರೆ.

ಇನ್ನೊಂದೆಡೆ, ಸೂಕ್ಷ್ಮ ಭೌಗೋಳಿಕ ಮತ್ತು ಸೇನಾ ಕಾರ್ಯಾಚರಣೆಗಳ ಹೆಸರನ್ನು ಚಲನಚಿತ್ರಗಳಿಗೆ ಇಡುವ ಬಗ್ಗೆ ಚಿತ್ರೋದ್ಯಮದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಈ ಹಿಂದೆ ಸಲ್ಮಾನ್ ಖಾನ್ ಅವರ 'ಬ್ಯಾಟಲ್ ಆಫ್ ಗಲ್ವಾನ್' ಚಿತ್ರದ ಹೆಸರನ್ನು ಬದಲಾಯಿಸಲಾಗಿತ್ತು. ಇಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ಸೇನೆಯಿಂದ ಅಥವಾ ಸರ್ಕಾರದಿಂದ ಯಾವುದೇ ನಿರ್ಬಂಧಗಳಿಲ್ಲದ ಕಾರಣ, ಸಂಘವು ತನ್ನ ನಿಯಮದಂತೆ 'ಮೊದಲು ಬಂದವರಿಗೆ ಮೊದಲ ಆದ್ಯತೆ' ಎಂಬ ಆಧಾರದ ಮೇಲೆ ಶೀರ್ಷಿಕೆ ಹಂಚಿಕೆ ಪ್ರಕ್ರಿಯೆಯನ್ನು ಮುಂದುವರಿಸಲಿದೆ ಎಂದು ತಿಳಿದುಬಂದಿದೆ. ಮುಂದಿನ ವಾರ ನಡೆಯಲಿರುವ ಸಭೆಯಲ್ಲಿ ಈ ಕುರಿತು ಅಂತಿಮ ತೀರ್ಮಾನ ಹೊರಬೀಳುವ ಸಾಧ್ಯತೆಯಿದೆ.

ಭಾರತೀಯ ಚಿತ್ರರಂಗದ ಖ್ಯಾತ ನಿರ್ಮಾಣ ಸಂಸ್ಥೆ ಟಿ-ಸೀರೀಸ್ ಮತ್ತು ವಿವೇಕ್ ರಂಜನ್ ಅಗ್ನಿಹೋತ್ರಿ ಅವರ ‘ಐ ಆಮ್ ಬುದ್ಧ’ ಪ್ರೊಡಕ್ಷನ್ಸ್ ಜಂಟಿಯಾಗಿ ತಮ್ಮ ನೂತನ ಚಿತ್ರ ‘ಆಪರೇಷನ್ ಸಿಂದೂರ್’ ಅನ್ನು ಈ ಹಿಂದೆ ಘೋಷಿಸಿದೆ. 2025ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ನಡೆದ ಭೀಕರ ಭಯೋತ್ಪಾದನಾ ದಾಳಿಗೆ ಭಾರತೀಯ ಸೇನೆಯು ನೀಡಿದ ಪ್ರತ್ಯುತ್ತರದ ಕಥೆಯೇ ಈ ಸಿನಿಮಾದ ಜೀವಾಳ. ಲೆಫ್ಟಿನೆಂಟ್ ಜನರಲ್ ಕೆ.ಜೆ.ಎಸ್. 'ಟೈನಿ' ಧಿಲ್ಲೋನ್ ಅವರು ಬರೆದ ‘ಆಪರೇಷನ್ ಸಿಂದೂರ್: ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಇಂಡಿಯಾಸ್ ಡೀಪ್ ಸ್ಟ್ರೈಕ್ಸ್ ಇನ್‌ಸೈಡ್ ಪಾಕಿಸ್ತಾನ್’ ಎಂಬ ಕೃತಿಯನ್ನು ಆಧರಿಸಿ ಈ ಸಿನಿಮಾ ಸಿದ್ಧವಾಗುತ್ತಿದೆ.

ಪಹಲ್ಗಾಮ್ ಹತ್ಯಾಕಾಂಡದಲ್ಲಿ 26 ಮಂದಿ ನಾಗರಿಕರು ಬಲಿಯಾದ ನಂತರ, ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಒಳ ನುಗ್ಗಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದ ಭಾರತೀಯ ಸೇನೆಯ ಶೌರ್ಯದ ಕಥೆ ಈ ಚಿತ್ರದ ಮೂಲಕ ತೆರೆಯ ಮೇಲೆ ಅನಾವರಣಗೊಳ್ಳಲಿದೆ. ‘ದಿ ಕಾಶ್ಮೀರ್ ಫೈಲ್ಸ್’ ಮತ್ತು ‘ದಿ ತಾಷ್ಕೆಂಟ್ ಫೈಲ್ಸ್’ ನಂತಹ ಸಂಚಲನ ಸೃಷ್ಟಿಸಿದ ಚಿತ್ರಗಳ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

Read More
Next Story