
ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಆದ ನೊರಾ ಫತೇಹಿ
ಫಿಫಾ 2026: ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಆದ ನೊರಾ ಫತೇಹಿ
ಫಿಫಾ ವಿಶ್ವಕಪ್ 2026 ಪ್ರದರ್ಶನದ ನಂತರ ಬಾಲಿವುಡ್ ನಟಿ ನೊರಾ ಫತೇಹಿ ಗೂಗಲ್ ಟ್ರೆಂಡ್ಸ್‌ನಲ್ಲಿ ಆಲಿಯಾ ಭಟ್ ಮತ್ತು ದೀಪಿಕಾ ಪಡುಕೋಣೆ ಅವರನ್ನೇ ಹಿಂದಿಕ್ಕಿ ಹೊಸ ದಾಖಲೆ ಬರೆದಿದ್ದಾರೆ.
ಬಾಲಿವುಡ್‌ನಲ್ಲಿ ನಟನೆಯಿಂದ ಹಲವು ನಟಿಯರು ಸುದ್ದಿಯಲ್ಲಿದ್ದರೆ, ಇನ್ನು ಕೆಲವರು ತಮ್ಮ ಗ್ಲಾಮರ್ ಮತ್ತು ಅದ್ಭುತ ನೃತ್ಯದ ಮೂಲಕ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ. ಆದರೆ ಈ ಬಾರಿ ಜನಪ್ರಿಯತೆಯ ವಿಷಯದಲ್ಲಿ ಸ್ಟಾರ್ ನೃತ್ಯಗಾರ್ತಿ ನೊರಾ ಫತೇಹಿ ಮೈಲುಗಲ್ಲು ಸೃಷ್ಟಿಸಿದ್ದಾರೆ. ವಿಶ್ವದ ಅತಿ ದೊಡ್ಡ ಸರ್ಚ್ ಇಂಜಿನ್ ಆದ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಆದ ಬಾಲಿವುಡ್ ತಾರೆಯಾಗಿ ನೊರಾ ಫತೇಹಿ ಹೊರಹೊಮ್ಮಿದ್ದಾರೆ. ವಿಶೇಷವೆಂದರೆ, ಗೂಗಲ್ ಟ್ರೆಂಡ್ಸ್‌ನಲ್ಲಿ ಅವರು ಬಾಲಿವುಡ್‌ನ ಮುಂಚೂಣಿ ನಟಿಯರಾದ ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾ ಮತ್ತು ದೀಪಿಕಾ ಪಡುಕೋಣೆ ಅವರನ್ನೂ ಸಹ ಜನಪ್ರಿಯತೆಯಲ್ಲಿ ಭಾರಿ ಅಂತರದಿಂದ ಹಿಂದಿಕ್ಕಿದ್ದಾರೆ.
ಫಿಫಾ ವಿಶ್ವಕಪ್ 2026 ರ ಭವ್ಯ ಉದ್ಘಾಟನಾ ಸಮಾರಂಭದಲ್ಲಿ ನೊರಾ ಫತೇಹಿ ನೀಡಿದ ಅದ್ಭುತ ಪ್ರದರ್ಶನದ ನಂತರ ಅವರ ಜನಪ್ರಿಯತೆ ಜಾಗತಿಕ ಮಟ್ಟದಲ್ಲಿ ತೀವ್ರವಾಗಿ ಹೆಚ್ಚಾಗಿದೆ. ಜೂನ್ 12 ರಂದು ನಡೆದ ಈ ಅದ್ಧೂರಿ ಸಮಾರಂಭದಲ್ಲಿ ನೊರಾ ತಮ್ಮ ಮನಮೋಹಕ ನೃತ್ಯ ಮತ್ತು ಅತ್ಯುತ್ತಮ ಸ್ಟೇಜ್ ಪ್ರೆಸೆನ್ಸ್ ಮೂಲಕ ಜಗತ್ತಿನಾದ್ಯಂತದ ಪ್ರೇಕ್ಷಕರ ಮನ ಗೆದ್ದಿದ್ದರು. ಇದರ ಬೆನ್ನಲ್ಲೇ ಅವರ ನೃತ್ಯದ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದವು.
ಗೂಗಲ್ ಟ್ರೆಂಡ್ಸ್‌ನ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಕಳೆದ ಕೆಲವು ದಿನಗಳಿಂದ ಜಗತ್ತಿನಾದ್ಯಂತದ ಇಂಟರ್ನೆಟ್ ಬಳಕೆದಾರರು ನೊರಾ ಫತೇಹಿ ಅವರ ಬಗ್ಗೆ ಅತಿ ಹೆಚ್ಚು ಹುಡುಕಾಟ ನಡೆಸಿದ್ದಾರೆ. ಅವರ ಹಾಡುಗಳು, ಚಲನಚಿತ್ರಗಳು ಮಾತ್ರವಲ್ಲದೆ ಅವರ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಜನರು ಗೂಗಲ್‌ನಲ್ಲಿ ಮುಗಿಬಿದ್ದಿದ್ದಾರೆ. ಇದರಿಂದಾಗಿ ಅವರು ಸದ್ಯ ಅತಿ ಹೆಚ್ಚು ಚರ್ಚೆಯಲ್ಲಿರುವ ಬಾಲಿವುಡ್ ಸೆಲೆಬ್ರಿಟಿ ಎನಿಸಿಕೊಂಡಿದ್ದಾರೆ. ನೊರಾ ಅವರ ಕ್ರೇಜ್ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿರದೆ ಮಧ್ಯಪ್ರಾಚ್ಯ, ಯುರೋಪ್ ಸೇರಿದಂತೆ ಹಲವು ವಿದೇಶಗಳಲ್ಲೂ ದೊಡ್ಡ ಮಟ್ಟದಲ್ಲಿ ಹಬ್ಬಿದೆ.
ಭಾವುಕ ಪೋಸ್ಟ್ ಹಂಚಿಕೊಂಡ ನೊರಾ ಫತೇಹಿ
ಈ ಅಭೂತಪೂರ್ವ ಯಶಸ್ಸಿನ ನಂತರ ನೊರಾ ಫತೇಹಿ ಸಾಮಾಜಿಕ ಜಾಲತಾಣಗಳಲ್ಲಿ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಇಂತಹದೊಂದು ಜಾಗತಿಕ ವೇದಿಕೆಯಲ್ಲಿ ನೃತ್ಯ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ಸಂತಸ ವ್ಯಕ್ತಪಡಿಸಿರುವ ಅವರು, ತಮ್ಮ ಕುಟುಂಬದವರು ಮತ್ತು ಆಪ್ತರ ಸಮ್ಮುಖದಲ್ಲಿ ಈ ಕ್ಷಣವನ್ನು ಅನುಭವಿಸಿದ್ದು ಹೆಮ್ಮೆ ತಂದಿದೆ ಎಂದು ಹೇಳುತ್ತಾ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ಫಿಫಾ ವಿಶ್ವಕಪ್‌ನಲ್ಲಿ ಮಿಂಚಿದ ನಂತರ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಆದ ಬಾಲಿವುಡ್ ತಾರೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನೊರಾ ಅವರಿಗೆ ಮುಂಬರುವ ದಿನಗಳಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ದೊಡ್ಡ ಯೋಜನೆಗಳು ಮತ್ತು ಅವಕಾಶಗಳು ಸಿಗಲಿವೆ ಎಂದು ಸಿನಿಮಾ ರಂಗದಲ್ಲಿ ಅಂದಾಜಿಸಲಾಗುತ್ತಿದೆ.
ಮನರಂಜನಾ ಉದ್ಯಮದಲ್ಲಿ ಕಳೆದ ಹತ್ತು ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಸಕ್ರಿಯರಾಗಿರುವ ನೋರಾ, ತಮ್ಮ ವೃತ್ತಿಜೀವನದಲ್ಲಿ ಹಲವು ದೊಡ್ಡ ಸಾಧನೆಗಳನ್ನು ಮಾಡಿದ್ದಾರೆ. ಆದರೆ, ಸಾಮಾನ್ಯವಾಗಿ ತಾವು ಒಂಟಿಯಾಗಿಯೇ ಕೆಲಸಕ್ಕೆ ಹೋಗಿ, ಪ್ರದರ್ಶನ ಮುಗಿಸಿ ಮನೆಗೆ ಮರಳುತ್ತಿದ್ದ ದಿನಗಳನ್ನು ನೆನೆದಿರುವ ಅವರು, ಈ ಬಾರಿ ಮಾತ್ರ ಪರಿಸ್ಥಿತಿ ಸಂಪೂರ್ಣ ವಿಭಿನ್ನವಾಗಿತ್ತು ಎಂದಿದ್ದಾರೆ. ಪ್ರದರ್ಶನ ಮುಗಿಸಿ ವೇದಿಕೆಯಿಂದ ಕೆಳಗಿಳಿಯುತ್ತಿದ್ದಂತೆ ಇಡೀ ಕುಟುಂಬವೇ ತಬ್ಬಿಕೊಂಡು ಸಂಭ್ರಮಿಸಲು ಕಾಯುತ್ತಿತ್ತು ಎಂದು ಅವರು ಬರೆದುಕೊಂಡಿದ್ದಾರೆ. ತಮ್ಮ ಇಡೀ ಜೀವನದಲ್ಲಿ ಇಂತಹ ಒಂದು ಅದ್ಭುತ ಕ್ಷಣಕ್ಕಾಗಿ ಕಾಯುತ್ತಿದ್ದುದ್ದಾಗಿ ಹೇಳಿರುವ ನೋರಾ, ಆ ಸಮಯದಲ್ಲಿ ಉಂಟಾದ ಆನಂದ ಮತ್ತು ಭಾವನೆಯನ್ನು ವ್ಯಕ್ತಪಡಿಸಲು ಮಾತುಗಳೇ ಸಿಗುತ್ತಿಲ್ಲ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೆ, ತಮ್ಮ ಬದುಕು ಮತ್ತು ವೃತ್ತಿಜೀವನವನ್ನು ರೂಪಿಸಿದ ಭಾರತ, ಮೊರಾಕೊ ಮತ್ತು ಕೆನಡಾ ದೇಶಗಳಿಗೂ ಅವರು ಈ ಹಿಂದೆ ಧನ್ಯವಾದ ಅರ್ಪಿಸಿದ್ದರು.

