ನವಿಲು ಗರಿ ವಿವಾದ: ಕ್ಷಮೆ ಯಾಚಿಸಿದ ನಿವೇದಿತಾ ಗೌಡ
x

ನಿವೇದಿತಾ ಗೌಡ

ನವಿಲು ಗರಿ ವಿವಾದ: ಕ್ಷಮೆ ಯಾಚಿಸಿದ ನಿವೇದಿತಾ ಗೌಡ

ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ನವಿಲು ಗರಿಗಳನ್ನು ಇಟ್ಟುಕೊಳ್ಳುವುದು ಮತ್ತು ಬಳಸುವುದು ಕಾನೂನುಬಾಹಿರ ಹಾಗೂ ಶಿಕ್ಷಾರ್ಹ ಅಪರಾಧ ಎಂಬ ವಿಷಯ ತಮ್ಮ ತಂಡಕ್ಕೆ ತಿಳಿದಿರಲಿಲ್ಲ ಎಂದು ನಿವೇದಿತಾ ಹೇಳಿದ್ದಾರೆ.


Click the Play button to hear this message in audio format

ನೃತ್ಯ ಸಂಯೋಜಕ ಹಾಗೂ ಡ್ಯಾನ್ಸರ್ ಕಿಶನ್ ಬಿಳಗಲಿ ಅವರೊಂದಿಗೆ ಮಾಡಿದ ಇನ್ಸ್ಟಾಗ್ರಾಮ್ ವಿಡಿಯೋದಲ್ಲಿ ರಾಷ್ಟ್ರಪಕ್ಷಿ ನವಿಲಿನ ಗರಿಗಳನ್ನು ಬಳಸಿದ ವಿವಾದಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಖ್ಯಾತಿಯ ನಟಿ ನಿವೇದಿತಾ ಗೌಡ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಈ ಕುರಿತು ವಿಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅವರು, ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ನವಿಲು ಗರಿಗಳನ್ನು ಇಟ್ಟುಕೊಳ್ಳುವುದು ಮತ್ತು ಬಳಸುವುದು ಕಾನೂನುಬಾಹಿರ ಹಾಗೂ ಶಿಕ್ಷಾರ್ಹ ಅಪರಾಧ ಎಂಬ ವಿಷಯ ತಮ್ಮ ತಂಡಕ್ಕೆ ತಿಳಿದಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಈ ವಿಡಿಯೋದಲ್ಲಿ ನವಿಲು ಗರಿಗಳನ್ನು ಬಳಸಲಾಗಿತ್ತು. ಇದು ಹಲವು ತಂಡಗಳ ಸಹಯೋಗದೊಂದಿಗೆ ನಡೆದ ಚಿತ್ರೀಕರಣವಾಗಿದ್ದು, ಕಾನೂನಿನ ಅರಿವಿಲ್ಲದೆ ಈ ತಪ್ಪು ಸಂಭವಿಸಿದೆ ಎಂದು ನಿವೇದಿತಾ ಒಪ್ಪಿಕೊಂಡಿದ್ದಾರೆ. ನವಿಲು ಭಾರತದ ರಾಷ್ಟ್ರಪಕ್ಷಿಯಾಗಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಶೆಡ್ಯೂಲ್ 1 ಹಾಗೂ ಕರ್ನಾಟಕ ಅರಣ್ಯ ಕಾಯ್ದೆಯಡಿ ಅದಕ್ಕೆ ವಿಶೇಷ ರಕ್ಷಣೆ ಇದೆ. ವನ್ಯಜೀವಿಗಳನ್ನು ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ನವಿಲು ಗರಿಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಕೂಡ ಅಪರಾಧ ಎಂಬ ಸಂಗತಿ ಈಗ ನಮಗೆ ಮನವರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.

ಈ ಘಟನೆಗಾಗಿ ತೀವ್ರ ವಿಷಾದ ವ್ಯಕ್ತಪಡಿಸಿರುವ ನಿವೇದಿತಾ ಗೌಡ, ಇನ್ನು ಮುಂದೆ ಇಂತಹ ವನ್ಯಜೀವಿ ವಸ್ತುಗಳನ್ನು ತಮ್ಮ ಕಂಟೆಂಟ್ ಅಥವಾ ವಿಡಿಯೋಗಳಲ್ಲಿ ಬಳಸದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಅಲ್ಲದೆ, ಅರಣ್ಯ ಇಲಾಖೆ ನಡೆಸುತ್ತಿರುವ ತನಿಖೆಗೆ ತಾವು ಸಂಪೂರ್ಣವಾಗಿ ಸಹಕರಿಸುವುದಾಗಿ ಭರವಸೆ ನೀಡಿದ್ದಾರೆ. ಇತ್ತ ನೃತ್ಯ ಸಂಯೋಜಕ ಕಿಶನ್ ಬಿಳಗಲಿ ಕೂಡ ಈ ಘಟನೆಗೆ ಬೇಸರ ವ್ಯಕ್ತಪಡಿಸಿದ್ದು, ವನ್ಯಜೀವಿ ಕಾನೂನುಗಳನ್ನು ಉಲ್ಲಂಘಿಸುವ ಯಾವುದೇ ಉದ್ದೇಶ ತಮಗಿರಲಿಲ್ಲ ಮತ್ತು ಅಧಿಕಾರಿಗಳ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ನವಿಲು ಗರಿ ಬಳಕೆಯ ವಿರುದ್ಧ ಕರ್ನಾಟಕ ಅರಣ್ಯ ಇಲಾಖೆಗೆ ದೂರು ಸಲ್ಲಿಕೆಯಾದ ಬೆನ್ನಲ್ಲೇ ಅಧಿಕಾರಿಗಳು ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆ.

Read More
Next Story