
ರಾಮಾಯಣದ ಮೊದಲ ಭಾಗದಲ್ಲಿ ರಾಮ-ರಾವಣ ಮುಖಾಮುಖಿ ಇಲ್ಲ
Ramayana Movie| ರಾಮಾಯಣದ ಮೊದಲ ಭಾಗದಲ್ಲಿ ರಣಬೀರ್ ಸಿಂಗ್ ಜೊತೆ ಸೀನ್ ಇಲ್ಲ: ರಾಕಿಂಗ್ ಸ್ಟಾರ್ ಯಶ್
Actor Yash| ಯಶ್ ಅಭಿನಯದ 'ರಾಮಾಯಣ'ದ ಮೊದಲ ಭಾಗದಲ್ಲಿ ರಾಮ-ರಾವಣ ಮುಖಾಮುಖಿ ಇರುವುದಿಲ್ಲ. 4,000 ಕೋಟಿ ಬಜೆಟ್‌ನ ಈ ಚಿತ್ರದ ವಿಶೇಷತೆ, ಪಾತ್ರವರ್ಗ ಮತ್ತು ಬಿಡುಗಡೆ ದಿನಾಂಕದ ಸಂಪೂರ್ಣ ಮಾಹಿತಿ ಇಲ್ಲಿದೆ.
ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ'ದ ಸಿನಿಮಾದಲ್ಲಿ ರಾವಣನ ಪಾತ್ರ ನಿರ್ವಹಿಸುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅವರು ರಾಮ ಮತ್ತು ರಾವಣನ ಮುಖಾಮುಖಿ ದೃಶ್ಯಗಳು ಚಿತ್ರದ ಮೊದಲ ಭಾಗದಲ್ಲಿ ಇರುವುದಿಲ್ಲ ಎಂದು ಯಶ್ ಸ್ಪಷ್ಟಪಡಿಸಿದ್ದಾರೆ.
ಹಾಲಿವುಡ್ ಫ್ಯಾಂಡಾಂಗೋ ಜೊತೆಗಿನ ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ ಯಶ್, "ಈ ಚಿತ್ರವು ಎರಡು ಭಾಗಗಳಲ್ಲಿ ಬರಲಿದೆ. ಮೊದಲ ಭಾಗದಲ್ಲಿ ರಾಮ ಮತ್ತು ರಾವಣ ಇಬ್ಬರೂ ತಮ್ಮ ತಮ್ಮ ಸಾಮ್ರಾಜ್ಯಗಳಲ್ಲಿ ಇರುತ್ತಾರೆ. ಹೀಗಾಗಿ ಮೊದಲ ಭಾಗದಲ್ಲಿ ನಾವಿಬ್ಬರೂ ತೆರೆಯ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳುವುದಿಲ್ಲ" ಎಂದು ಹೇಳಿದ್ದಾರೆ. ನಟ ರಣಬೀರ್ ಕಪೂರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ರಣಬೀರ್ ಅದ್ಭುತ ನಟರಾಗಿದ್ದು, ಇಬ್ಬರ ನಡುವೆ ಪರಸ್ಪರ ಗೌರವವಿದೆ. ಈ ಐತಿಹಾಸಿಕ ಕಥೆಯನ್ನು ಜಾಗತಿಕ ಮಟ್ಟದಲ್ಲಿ ಅತ್ಯುತ್ತಮವಾಗಿ ಪ್ರಸ್ತುತಪಡಿಸುವುದೇ ನಮ್ಮೆಲ್ಲರ ಗುರಿಯಾಗಿದೆ ಎಂದು ತಿಳಿಸಿದ್ದಾರೆ.
ರಾವಣನ ಪಾತ್ರಕ್ಕೆ ಹೊಸ ಆಯಾಮ
ನಿರ್ದೇಶಕ ನಿತೇಶ್ ತಿವಾರಿ ಅವರು ತಮ್ಮ ಕಲ್ಪನೆಯ ರಾವಣ ಕೇವಲ ಖಳನಾಯಕನಲ್ಲ ಎಂದು ಈ ಮೊದಲೇ ಹೇಳಿದ್ದರು. ರಾವಣ ಒಬ್ಬ ಮಹಾನ್ ವಿದ್ವಾಂಸ, ಸಂಗೀತಗಾರ, ಶಿವಭಕ್ತ ಮತ್ತು ದಕ್ಷ ಆಡಳಿತಗಾರನಾಗಿದ್ದ. ಕೇವಲ ನಕಾರಾತ್ಮಕ ಅಂಶಗಳನ್ನಷ್ಟೇ ತೋರಿಸದೆ, ರಾವಣನ ಜೀವನದ ವಿವಿಧ ಮಜಲುಗಳನ್ನು ಈ ಸಿನಿಮಾದಲ್ಲಿ ಪರಿಚಯಿಸಲಾಗುತ್ತಿದೆ. ಅಹಂಕಾರ ಮತ್ತು ಸೇಡಿನ ಭಾವನೆಯಿಂದ ಒಬ್ಬ ಶ್ರೇಷ್ಠ ವ್ಯಕ್ತಿಯ ಅಂತ್ಯ ಹೇಗಾಗುತ್ತದೆ ಎಂಬ ಪಾಠವು ಈ ಪಾತ್ರದ ಮೂಲಕ ಅಡಗಿದೆ ಎಂದು ಅವರು ವಿವರಿಸಿದ್ದಾರೆ. ರಣಬೀರ್ ಕಪೂರ್ ಕೂಡ ಯಶ್ ಅವರ ಸ್ಕ್ರೀನ್ ಪ್ರೆಸೆನ್ಸ್ ಮತ್ತು ರಾವಣನಾಗಿ ಅವರ ವಿಭಿನ್ನ ಅಭಿನಯವನ್ನು ಶ್ಲಾಘಿಸಿದ್ದಾರೆ.
ಬರೋಬ್ಬರಿ 4,000 ಕೋಟಿ ರೂಪಾಯಿ ಬಜೆಟ್
'ರಾಮಾಯಣ' ಸಿನಿಮಾ ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ಚಿತ್ರವಾಗಿ ಹೊರಹೊಮ್ಮುತ್ತಿದೆ. ಅಂದಾಜು 4,000 ಕೋಟಿ ರೂಪಾಯಿಗಳ ಬೃಹತ್ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ವಿಶೇಷವೆಂದರೆ, ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಹ್ಯಾನ್ಸ್ ಜಿಮ್ಮರ್ ಮತ್ತು ಎ.ಆರ್. ರೆಹಮಾನ್ ಮೊದಲ ಬಾರಿಗೆ ಈ ಚಿತ್ರಕ್ಕಾಗಿ ಕೈಜೋಡಿಸಿದ್ದಾರೆ.
ಚಿತ್ರದ ಮೊದಲ ಭಾಗವು 2026ರ ಅಕ್ಟೋಬರ್‌ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಎರಡನೇ ಭಾಗವು 2027ರ ದೀಪಾವಳಿ ಸಮಯಕ್ಕೆ ತೆರೆಕಾಣಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಹಾಲಿವುಡ್ ಮಟ್ಟದ ವಿಎಫ್‌ಎಕ್ಸ್ ತಂತ್ರಜ್ಞಾನವನ್ನು ಈ ಚಿತ್ರದಲ್ಲಿ ಬಳಸಲಾಗುತ್ತಿದೆ.

