
ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ವಿಚ್ಛೇದನದ ವದಂತಿಗಳಿಗೆ ನಟಿ ಬ್ರೇಕ್ ಹಾಕಿದ್ದಾರೆ.
ಮೌನಿ ರಾಯ್-ಸೂರಜ್ ವಿಚ್ಛೇದನ ವದಂತಿ: ಕೊನೆಗೂ ಮೌನ ಮುರಿದ ನಟಿ
ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ವಿಚ್ಛೇದನದ ವದಂತಿಗಳಿಗೆ ನಟಿ ಬ್ರೇಕ್ ಹಾಕಿದ್ದಾರೆ. ಸುಳ್ಳು ಸುದ್ದಿ ಹರಡದಂತೆ ಹಾಗೂ ತಮ್ಮ ಖಾಸಗಿತನ ಗೌರವಿಸುವಂತೆ ಅವರು ಮಾಧ್ಯಮಗಳಲ್ಲಿ ಮನವಿ ಮಾಡಿದ್ದಾರೆ.
ಬಾಲಿವುಡ್ ಖ್ಯಾತ ನಟಿ ಮೌನಿ ರಾಯ್ ಮತ್ತು ಅವರ ಪತಿ ಸೂರಜ್ ನಂಬಿಯಾರ್ ಅವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎಂಬ ವದಂತಿಗಳು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿವೆ.
ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿರುವುದು ಹಾಗೂ ಸೂರಜ್ ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್ ಅನ್ನು ಡಿಲೀಟ್ ಮಾಡಿರುವುದು ಈ ಅನುಮಾನಗಳಿಗೆ ಪುಷ್ಟಿ ನೀಡಿತ್ತು. ಇದಲ್ಲದೆ ಮೌನಿ ರಾಯ್ ಕೂಡ ತಮ್ಮ ಪತಿಯೊಂದಿಗಿನ ಫೋಟೋಗಳನ್ನು ಸಾಮಾಜಿಕ ಜಾಲತಾಣದಿಂದ ತೆಗೆದುಹಾಕಿದ್ದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು.
ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ನಟಿ ಮೌನಿ ರಾಯ್ ಕೊನೆಗೂ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮ ಸಂಸ್ಥೆಗಳಲ್ಲಿ ವಿನಂತಿಸಿಕೊಂಡಿರುವ ಅವರು ನಮ್ಮ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡಬೇಡಿ ಮತ್ತು ನಮಗೆ ನಮ್ಮದೇ ಆದ ಖಾಸಗಿ ಸಮಯ ಹಾಗೂ ಗೌಪ್ಯತೆಯನ್ನು ನೀಡಿ ಎಂದು ಮನವಿ ಮಾಡಿದ್ದಾರೆ. ಯಾವುದೇ ರೀತಿಯ ತಪ್ಪು ಮಾಹಿತಿಯನ್ನು ಪ್ರಕಟಿಸದಂತೆ ಅವರು ಕೈಮುಗಿದು ಕೇಳಿಕೊಂಡಿದ್ದಾರೆ.
ಮೌನಿ ಅವರ ಈ ಸ್ಪಷ್ಟನೆ ಪರೋಕ್ಷವಾಗಿ ವಿಚ್ಛೇದನದ ವದಂತಿಗಳಿಗೆ ಉತ್ತರ ನೀಡಿದಂತಿದ್ದರೂ ಅವರ ವೈಯಕ್ತಿಕ ಜೀವನದ ಬಗ್ಗೆ ಕುತೂಹಲ ಮಾತ್ರ ಕಡಿಮೆಯಾಗಿಲ್ಲ.
ಮೌನಿ ರಾಯ್ ಮತ್ತು ಬೆಂಗಳೂರು ಮೂಲದ ಉದ್ಯಮಿ ಸೂರಜ್ ನಂಬಿಯಾರ್ ಜನವರಿ 2022ರಲ್ಲಿ ಗೋವಾದಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಮಲಯಾಳಿ ಮತ್ತು ಬಂಗಾಳಿ ಸಂಪ್ರದಾಯದಂತೆ ನಡೆದ ಈ ಮದುವೆ ಆಗ ಸಿನಿರಂಗದಲ್ಲಿ ದೊಡ್ಡ ಸುದ್ದಿಯಾಗಿತ್ತು. ಸದಾ ತಮ್ಮ ಪ್ರೀತಿಯ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದ ಈ ಜೋಡಿಯ ನಡುವೆ ಈಗ ಏನಾಗಿದೆ ಎಂಬುದು ಅವರ ಅಭಿಮಾನಿಗಳಿಗೆ ಮಾತ್ರ ಯಕ್ಷಪ್ರಶ್ನೆಯಾಗಿ ಉಳಿದಿದೆ.

