
ನಟಿ ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ತಮ್ಮ 4 ವರ್ಷಗಳ ದಾಂಪತ್ಯ ಜೀವನಕ್ಕೆ ವಿದಾಯ ಹೇಳಿದ್ದಾರೆ.
ಮೌನಿ ರಾಯ್-ಸೂರಜ್ ನಂಬಿಯಾರ್ 4 ವರ್ಷದ ದಾಂಪತ್ಯ ಅಂತ್ಯ
ನಟಿ ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ತಮ್ಮ 4 ವರ್ಷಗಳ ದಾಂಪತ್ಯ ಜೀವನಕ್ಕೆ ವಿದಾಯ ಹೇಳಿದ್ದಾರೆ. ಪರಸ್ಪರ ಒಪ್ಪಿಗೆಯಿಂದ ಬೇರ್ಪಡುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಈ ಜೋಡಿ ಸ್ಪಷ್ಟಪಡಿಸಿದೆ.
ನಟಿ ಮೌನಿ ರಾಯ್ ಮತ್ತು ಉದ್ಯಮಿ ಸೂರಜ್ ನಂಬಿಯಾರ್ ತಮ್ಮ ನಾಲ್ಕು ವರ್ಷಗಳ ವೈವಾಹಿಕ ಜೀವನಕ್ಕೆ ಅಧಿಕೃತವಾಗಿ ವಿದಾಯ ಹೇಳಿದ್ದಾರೆ. ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದ ಇವರ ವಿಚ್ಛೇದನದ ವದಂತಿಗಳಿಗೆ ಈಗ ಮೌನಿ ರಾಯ್ ಅವರೇ ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ನಾವಿಬ್ಬರೂ ಪರಸ್ಪರ ಒಪ್ಪಿಗೆಯಿಂದ ಬೇರ್ಪಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿರುವ ಮೌನಿ ರಾಯ್, ನಮ್ಮ ಖಾಸಗಿ ಜೀವನದ ಬಗ್ಗೆ ಹರಿದಾಡುತ್ತಿರುವ ಸುಳ್ಳು ಸುದ್ದಿಗಳು ಬೇಸರ ತಂದಿವೆ ಎಂದು ಹೇಳಿದ್ದಾರೆ. ವೈಯಕ್ತಿಕ ಆದ್ಯತೆಗಳು ಬದಲಾಗಿರುವ ಕಾರಣ ಈ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಒಬ್ಬರಿಗೊಬ್ಬರು ಉತ್ತಮ ಸ್ನೇಹಿತರಾಗಿ ಮುಂದುವರಿಯುವುದಾಗಿ ಅವರು ತಮ್ಮ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಲ್ಲದೆ ಈ ಸಂದರ್ಭದಲ್ಲಿ ತಮ್ಮ ಗೌಪ್ಯತೆಯನ್ನು ಗೌರವಿಸಬೇಕೆಂದು ಅವರು ಅಭಿಮಾನಿಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಮನವಿ ಮಾಡಿದ್ದಾರೆ.
ದುಬೈನಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದ ಈ ಜೋಡಿ, ಸುಮಾರು ನಾಲ್ಕು ವರ್ಷಗಳ ಕಾಲ ಪ್ರೀತಿಸಿ 2022ರಲ್ಲಿ ಗೋವಾದಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಬಂಗಾಳಿ ಮತ್ತು ಮಲಯಾಳಿ ಸಂಪ್ರದಾಯದಂತೆ ನಡೆದ ಇವರ ವಿವಾಹವು ಆಗ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಆದರೆ ಈಗ ಕೇವಲ ನಾಲ್ಕು ವರ್ಷಗಳಲ್ಲೇ ಈ ಸುಂದರ ಸಂಬಂಧ ಅಂತ್ಯಗೊಂಡಿರುವುದು ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿದೆ.
ದಿಶಾ ಪಟಾನಿಯನ್ನು ಎಳೆದು ತಂದ ನೆಟ್ಟಿಗರು
ಈ ಎಲ್ಲಾ ಬೆಳವಣಿಗೆಗಳ ನಡುವೆ ಮೌನಿ ರಾಯ್ ಅವರ ಆಪ್ತ ಗೆಳತಿ ಮತ್ತು ನಟಿ ದಿಶಾ ಪಟಾನಿ ಅವರ ಹೆಸರನ್ನು ಈ ವಿಷಯಕ್ಕೆ ಎಳೆದು ತಂದಿರುವ ನೆಟ್ಟಿಗರು, ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಗುರಿಯಾಗಿಸಿಕೊಂಡು ಟ್ರೋಲ್ ಮಾಡುತ್ತಿದ್ದಾರೆ. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಮೌನಿ ರಾಯ್, ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳ ಕಾಮೆಂಟ್ ಸೆಕ್ಷನ್ ಅನ್ನು ಆಫ್ ಮಾಡಿದ್ದಾರೆ. ಅನಗತ್ಯ ಟೀಕೆಗಳು ಮತ್ತು ನಕಾರಾತ್ಮಕ ಪ್ರತಿಕ್ರಿಯೆಗಳನ್ನು ತಡೆಯಲು ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

