ಮಿರ್ಜಾಪುರ ಸಿನಿಮಾ ಟೀಸರ್ ಔಟ್; ರಕ್ತಪಾತಕ್ಕೆ ಸಜ್ಜಾದ ಕಾಲಿನ್, ಗುಡ್ಡು, ಮುನ್ನಾ
x

'ಮಿರ್ಜಾಪುರ: ದಿ ಮೂವಿ' ಟೀಸರ್ ಬಿಡುಗಡೆ

ಮಿರ್ಜಾಪುರ ಸಿನಿಮಾ ಟೀಸರ್ ಔಟ್; ರಕ್ತಪಾತಕ್ಕೆ ಸಜ್ಜಾದ ಕಾಲಿನ್, ಗುಡ್ಡು, ಮುನ್ನಾ

'ಮಿರ್ಜಾಪುರ: ದಿ ಮೂವಿ' ಟೀಸರ್ ಬಿಡುಗಡೆ! ಪಂಕಜ್ ತ್ರಿಪಾಠಿ, ಅಲಿ ಫಜಲ್ ಹಾಗೂ ದಿವ್ಯೇಂದು ಅಬ್ಬರಕ್ಕೆ ಸೆಪ್ಟೆಂಬರ್ 4 ರಂದು ಚಿತ್ರಮಂದಿರಗಳು ಸಜ್ಜು. ಈ ಬಾರಿ ಹೊಸ ನಟರ ಎಂಟ್ರಿಯಾಗಿದೆ.


Click the Play button to hear this message in audio format

ದೇಶಾದ್ಯಂತ ಅಪಾರ ಜನಪ್ರಿಯತೆ ಗಳಿಸಿರುವ 'ಮಿರ್ಜಾಪುರ' ವೆಬ್ ಸರಣಿಯು ಈಗ ಬೆಳ್ಳಿ ಪರದೆಯ ಮೇಲೆ ಅಬ್ಬರಿಸಲು ಸಜ್ಜಾಗಿದೆ. ಬಹುನಿರೀಕ್ಷಿತ 'ಮಿರ್ಜಾಪುರ: ದಿ ಮೂವಿ' ಚಿತ್ರದ ಮೊದಲ ಅಧಿಕೃತ ಟೀಸರ್ ಇಂದು ಬಿಡುಗಡೆಯಾಗಿದ್ದು, ಭರ್ಜರಿ ಆ್ಯಕ್ಷನ್ ಹಾಗೂ ರಕ್ತಪಾತದ ರೋಮಾಂಚಕ ದೃಶ್ಯಗಳೊಂದಿಗೆ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಸುಮಾರು ಎರಡೂವರೆ ನಿಮಿಷಗಳ ಈ ಟೀಸರ್ ಚಿತ್ರದ ಭವ್ಯತೆ ಮತ್ತು ಹಿಂಸಾಚಾರದ ತೀವ್ರತೆಯನ್ನು ಪರಿಚಯಿಸುತ್ತದೆ. ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿಧ್ವಾನಿ ನಿರ್ಮಾಣದ ಈ ಚಿತ್ರವನ್ನು ಗುರುಮೀತ್ ಸಿಂಗ್ ನಿರ್ದೇಶಿಸಿದ್ದು, ಪುನೀತ್ ಕೃಷ್ಣ ಕಥೆ ಬರೆದಿದ್ದಾರೆ.

ಟೀಸರ್ ಆರಂಭದಲ್ಲೇ ಕಾಲಿನ್ ಭಯ್ಯಾ ಪಾತ್ರಧಾರಿ ಪಂಕಜ್ ತ್ರಿಪಾಠಿ ಕೈಯಲ್ಲಿ ಉರಿಯುತ್ತಿರುವ ಮಡಕೆಯನ್ನು ಹಿಡಿದು, ಸಮರ್ಥ ಮಗನನ್ನು ಹೊಂದುವುದು ಎಷ್ಟು ಕಷ್ಟ ಎಂಬ ಖಡಕ್ ಡೈಲಾಗ್ ಹೊಡೆಯುತ್ತಾರೆ. ಇದರ ಬೆನ್ನಲ್ಲೇ ಗುಡ್ಡು ಪಂಡಿತ್ ಪಾತ್ರದ ಅಲಿ ಫಜಲ್ ತಮ್ಮ ಆಯುಧವನ್ನು ಸಿದ್ಧಪಡಿಸಿಕೊಳ್ಳುತ್ತಾ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಅತ್ಯಂತ ಕಾತರದಿಂದ ಕಾಯುತ್ತಿದ್ದ ಮುನ್ನಾ ಭಯ್ಯಾ ಅಲಿಯಾಸ್ ದಿವ್ಯೇಂದು ಅವರ ಪುನರಾಗಮನವು ಈ ಟೀಸರ್‌ನಲ್ಲಿ ಹೈಲೈಟ್ ಆಗಿದ್ದು, ತಮ್ಮದೇ ಆದ ಸ್ಟೈಲ್‌ನಲ್ಲಿ ಅಬ್ಬರಿಸಿದ್ದಾರೆ.

ಈ ಬಾರಿ ಚಿತ್ರಕ್ಕೆ ಹೊಸ ಸೇರ್ಪಡೆಯಾಗಿ ಜಿತೇಂದ್ರ ಕುಮಾರ್ ಎಂಟ್ರಿ ಕೊಟ್ಟಿದ್ದು, ಕಾರಿನಲ್ಲಿ ಗುಡ್ಡು ಪಂಡಿತ್ ಜೊತೆ ಕುಳಿತು "ನಮಗೆ ಸಾಮ್ರಾಜ್ಯವನ್ನು ನಡೆಸುವುದಲ್ಲ, ಹೊಸ ಸಾಮ್ರಾಜ್ಯವನ್ನು ನಿರ್ಮಿಸಬೇಕಾಗಿದೆ" ಎಂದು ಹೇಳುವ ಸಂಭಾಷಣೆ ಗಮನ ಸೆಳೆಯುತ್ತದೆ. ಟೀಸರ್‌ನಲ್ಲಿ ಮರಳುಗಾಡಿನ ಭೀಕರ ಆ್ಯಕ್ಷನ್ ದೃಶ್ಯಗಳು, ಕುತ್ತಿಗೆ ಸೀಳುವ ಕ್ರೌರ್ಯ ಮತ್ತು ಬಿಳಿ ಎಸ್‌ಯುವಿ ಕಾರುಗಳ ಹಾವಳಿ ಹೆಚ್ಚಾಗಿದೆ. ಮತ್ತೊಂದೆಡೆ ಕಾಲಿನ್ ಭಯ್ಯಾ, "ಎಲ್ಲಾ ಪ್ರಜೆಗಳನ್ನೂ ಕೊಂದರೆ ನಾವು ಯಾರ ಮೇಲೆ ಆಳ್ವಿಕೆ ಮಾಡುವುದು?" ಎಂಬ ಗಂಭೀರ ಪ್ರಶ್ನೆ ಎತ್ತುತ್ತಾರೆ.

ಟೀಸರ್‌ನ ಕೊನೆಯಲ್ಲಿ ನಟಿ ಶೀಬಾ ಚಡ್ಡಾ ಮತ್ತು ಹೊಸದಾಗಿ ಸೇರ್ಪಡೆಯಾಗಿರುವ ರವಿ ಕಿಶನ್ ನಡುವಿನ ಹಾಸ್ಯಭರಿತ ಸಂಭಾಷಣೆ ಮೂಡಿಬಂದಿದೆ. ಇದರೊಂದಿಗೆ ಶ್ವೇತಾ ತ್ರಿಪಾಠಿ ಮತ್ತು ರಸಿಕಾ ದುಗ್ಗಲ್ ಅವರ ಪಾತ್ರಗಳ ಝಲಕ್ ಕೂಡ ಕಾಣಿಸಿಕೊಂಡಿದೆ. ಭಾರಿ ನಿರೀಕ್ಷೆ ಹುಟ್ಟಿಸಿರುವ 'ಮಿರ್ಜಾಪುರ: ದಿ ಮೂವಿ' ಮುಂಬರುವ ಸೆಪ್ಟೆಂಬರ್ 4 ರಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಪ್ರಕಟಿಸಿದೆ.

Read More
Next Story