
Rashmika Mandanna|ರಶ್ಮಿಕಾ ಮಂದಣ್ಣ ಮದುವೆ ಹಿಂದಿನ ರಾತ್ರಿ ಏನಾಗಿತ್ತು? ಮೇಕಪ್ ಆರ್ಟಿಸ್ಟ್ ಬಿಚ್ಚಿಟ್ಟ ಆ ರಹಸ್ಯ ಏನು?
ಮದುವೆ ದಿನ ನಿದ್ದೆಯಿಲ್ಲದಿದ್ದರೂ ರಶ್ಮಿಕಾ ಮಂದಣ್ಣ ಕೇವಲ 40 ನಿಮಿಷಗಳಲ್ಲಿ ಸಿದ್ಧವಾಗಿ ಅಚ್ಚರಿ ಮೂಡಿಸಿದ್ದರು. 40 ನಿಮಿಷದ ಚಾಲೆಂಜ್ ನೀಡಿದ್ದ ನಟಿಯ ಮೇಕಪ್ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ ತನ್ವಿ
ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವಿವಾಹ ಈ ವರ್ಷದ ಫೆಬ್ರವರಿಯಲ್ಲಿ ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿಯಾಗಿ ನೆರವೇರಿತ್ತು. ಇತ್ತೀಚೆಗೆ ರಶ್ಮಿಕಾ ಅವರ ಮದುವೆಯ ಫೋಟೋವೊಂದು ಏಷ್ಯಾದಲ್ಲೇ ಅತಿ ಹೆಚ್ಚು ಲೈಕ್ಸ್ ಪಡೆದ ಇನ್‌ಸ್ಟಾಗ್ರಾಮ್ ಪೋಸ್ಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ವಿರಾಟ್ ಕೊಹ್ಲಿಯವರ ದಾಖಲೆಯನ್ನೂ ಮುರಿದಿದೆ. ಈ ಐಕಾನಿಕ್ ಲುಕ್‌ನ ಹಿಂದಿರುವ ಗುಟ್ಟನ್ನು ರಶ್ಮಿಕಾ ಅವರ ವೈಯಕ್ತಿಕ ಮೇಕಪ್ ಆರ್ಟಿಸ್ಟ್ ತನ್ವಿ ಚೆಂಬುರ್ಕರ್ ಈಗ ಬಹಿರಂಗಪಡಿಸಿದ್ದಾರೆ.
ಕೇವಲ 40 ನಿಮಿಷದ ಗಡುವು
ಮದುವೆಯ ದಿನದ ಸಿದ್ಧತೆಗಳ ಬಗ್ಗೆ ಮಾತನಾಡಿದ ತನ್ವಿ, ರಶ್ಮಿಕಾ ಅವರು ಮದುವೆಯ ಹಿಂದಿನ ರಾತ್ರಿ ಕಾರ್ಯಕ್ರಮವಿದ್ದ ಕಾರಣ ಸರಿಯಾಗಿ ನಿದ್ರಿಸಿರಲಿಲ್ಲ. ಮದುವೆಯ ದಿನ ಮೇಕಪ್ ಮಾಡಲು ಬಂದಾಗ ರಶ್ಮಿಕಾ, "ನನ್ನನ್ನು ಸಿದ್ಧಪಡಿಸಲು ನಿಮ್ಮ ಬಳಿ ಕೇವಲ 40 ನಿಮಿಷಗಳಿವೆ" ಎಂದು ತಂಡಕ್ಕೆ ಸವಾಲು ನೀಡಿದ್ದರಂತೆ. ಆದರೆ ಅಂತಿಮವಾಗಿ ಕೂದಲ ವಿನ್ಯಾಸ, ಮೇಕಪ್ ಮತ್ತು ಡ್ರೆಸ್ಸಿಂಗ್ ಎಲ್ಲವೂ ಸೇರಿ ಕೇವಲ ಒಂದೂವರೆ ಗಂಟೆಯಲ್ಲಿ ರಶ್ಮಿಕಾ ಸಂಪೂರ್ಣವಾಗಿ ಸಿದ್ಧವಾಗಿದ್ದರು ಎಂದು ಅವರು ತಿಳಿಸಿದ್ದಾರೆ.
ಫೌಂಡೇಶನ್ ಇಲ್ಲದ ಮಿನಿಮಲ್ ಮೇಕಪ್
ಸಾಮಾನ್ಯವಾಗಿ ನಟಿಯರು ತಮ್ಮ ಮದುವೆಯ ದಿನ ಅತಿ ಹೆಚ್ಚಿನ ಮೇಕಪ್ ಮತ್ತು ಬಣ್ಣಗಳನ್ನು ಬಳಸುತ್ತಾರೆ. ಆದರೆ ರಶ್ಮಿಕಾ ಇದಕ್ಕೆ ವಿರುದ್ಧವಾಗಿ "ನಾನು ಹೇಗಿದ್ದೇನೋ ಹಾಗೆಯೇ ನೈಸರ್ಗಿಕವಾಗಿ ಕಾಣಬೇಕು" ಎಂದು ಪಟ್ಟು ಹಿಡಿದಿದ್ದರು. ಕಣ್ಣುಗಳಿಗೆ ಕಾಡಿಗೆಯನ್ನು ಬಳಸಲು ಕೂಡ ಅವರು ಇಷ್ಟಪಟ್ಟಿರಲಿಲ್ಲ ಎನ್ನಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ರಶ್ಮಿಕಾ ಜೊತೆ ಕೆಲಸ ಮಾಡುತ್ತಿರುವ ತನ್ವಿ, ರಶ್ಮಿಕಾ ಈಗ ಫೌಂಡೇಶನ್ ಬಳಸುವುದನ್ನೇ ಬಿಟ್ಟಿದ್ದು, ಕೇವಲ ಕನ್ಸೀಲರ್ ಮತ್ತು ಕಲರ್ ಕರೆಕ್ಟರ್ ಮಾತ್ರ ಬಳಸುತ್ತಾರೆ ಎಂದು ತಿಳಿಸಿದ್ದಾರೆ.
ರಶ್ಮಿಕಾ ಮತ್ತು ವಿಜಯ್ ಕಳೆದ ಫೆಬ್ರವರಿ 26 ರಂದು ಉದಯಪುರದ ಐಟಿಸಿ ಮೆಮೆಂಟೋಸ್‌ನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು. ವಿಜಯ್ ಅವರ ತೆಲುಗು ಸಂಪ್ರದಾಯ ಮತ್ತು ರಶ್ಮಿಕಾ ಅವರ ಕೊಡವ ಸಂಪ್ರದಾಯಗಳ ಸಮ್ಮಿಲನದೊಂದಿಗೆ ಈ ವಿವಾಹ ಮಹೋತ್ಸವ ನೆರವೇರಿತ್ತು. ಪ್ರಖ್ಯಾತ ಡಿಸೈನರ್ ಅನಾಮಿಕಾ ಖನ್ನಾ ವಿನ್ಯಾಸಗೊಳಿಸಿದ ಉಡುಪುಗಳಲ್ಲಿ ಮಿಂಚಿದ್ದ ಈ ಜೋಡಿ, ಮಾರ್ಚ್ 4 ರಂದು ಹೈದರಾಬಾದ್‌ನಲ್ಲಿ ಚಿತ್ರರಂಗದ ಗಣ್ಯರಿಗಾಗಿ ಭರ್ಜರಿ ಔತಣಕೂಟವನ್ನು ಆಯೋಜಿಸಿದ್ದರು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರೂ, ಮದುವೆಯವರೆಗೂ ತಮ್ಮ ಪ್ರೇಮ ಸಂಬಂಧವನ್ನು ಈ ಜೋಡಿ ಗುಟ್ಟಾಗಿ ಇರಿಸಿದ್ದರು.

