ಶ್ರೀರಾಮನ ಲುಕ್‌ನಲ್ಲಿ ಮಿಂಚಿದ ಮಹೇಶ್ ಬಾಬು
x

'ವಾರಣಾಸಿ' ಚಿತ್ರದ ಶ್ರೀರಾಮನ ಲುಕ್‌ನಲ್ಲಿ ಮಿಂಚಿದ ಮಹೇಶ್ ಬಾಬು: ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್

ಶ್ರೀರಾಮನ ಲುಕ್‌ನಲ್ಲಿ ಮಿಂಚಿದ ಮಹೇಶ್ ಬಾಬು

ರಾಜಮೌಳಿ ನಿರ್ದೇಶನದ 'ವಾರಣಾಸಿ' ಚಿತ್ರದಲ್ಲಿ ಶ್ರೀರಾಮನ ಅವತಾರದಲ್ಲಿ ಕಾಣಿಸಿಕೊಂಡ ಮಹೇಶ್ ಬಾಬು ಅವರ ಹೊಸ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಕುತೂಹಲ ಮೂಡಿಸಿದೆ.


Click the Play button to hear this message in audio format

ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಮತ್ತು ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಅವರ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಅತ್ಯಂತ ನಿರೀಕ್ಷಿತ ಚಿತ್ರ 'ವಾರಣಾಸಿ' ಮತ್ತೊಮ್ಮೆ ದೇಶಾದ್ಯಂತ ಭಾರಿ ಸದ್ದು ಮಾಡುತ್ತಿದೆ.

ಈ ಬಹುಕೋಟಿ ಬಜೆಟ್‌ನ ಆ್ಯಕ್ಷನ್ ಸಿನಿಮಾದಲ್ಲಿ ಮಹೇಶ್ ಬಾಬು ಅವರು ಭಗವಾನ್ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಈಗಾಗಲೇ ಅಭಿಮಾನಿಗಳಲ್ಲಿ ರೋಮಾಂಚನ ಉಂಟುಮಾಡಿದೆ. ಇದಕ್ಕೆ ಪೂರಕವೆಂಬಂತೆ, ಇತ್ತೀಚೆಗೆ ಮಹೇಶ್ ಬಾಬು ಶ್ರೀರಾಮನ ಅವತಾರದಲ್ಲಿರುವ ಧರಿಸಿರುವ ಅತ್ಯಾಕರ್ಷಕ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಖತ್ ವೈರಲ್ ಆಗಿದೆ. ಕೇಸರಿ ವಸ್ತ್ರ ಧರಿಸಿ, ಹೆಗಲ ಮೇಲೆ ಬಿಲ್ಲು ಹೊತ್ತುಕೊಂಡು ಗ್ರಾಮೀಣ ಹಿನ್ನೆಲೆಯಲ್ಲಿ ನಿಂತಿರುವ ಮಹೇಶ್ ಬಾಬು ಅವರ ಈ ಲುಕ್ ನೋಡುಗರ ಕಣ್ಣು ಸೆಳೆಯುತ್ತಿದೆ.

ಸಾಮಾಜಿಕ ಜಾಲತಾಣಗಳ ಅಭಿಮಾನಿ ಪುಟಗಳಲ್ಲಿ ಹರಿದಾಡುತ್ತಿರುವ ಈ ಫೋಟೋ ಅಧಿಕೃತವೇ ಅಥವಾ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಮೂಲಕ ಸೃಷ್ಟಿಸಲಾದ ಚಿತ್ರವೇ ಎಂಬ ಗೊಂದಲವಿದ್ದರೂ, ಮಹೇಶ್ ಬಾಬು ಅವರ ಈ ಡಿವೋಶನಲ್‌ ಲುಕ್‌ಗೆ ಇಡೀ ಚಿತ್ರರಂಗವೇ ಮಾರುಹೋಗಿದೆ. ಚಿತ್ರತಂಡವು ಇದುವರೆಗೆ ಕೇವಲ ಟೀಸರ್ ಮೂಲಕ ಮಹೇಶ್ ಬಾಬು ಅವರ ಪಾತ್ರದ ಸಣ್ಣ ತುಣುಕನ್ನಷ್ಟೇ ಪ್ರದರ್ಶಿಸಿತ್ತು. ಆದರೆ ಈಗ ವೈರಲ್ ಆಗಿರುವ ಈ ಫೋಟೋ, ಶ್ರೀರಾಮನಾಗಿ ಮಹೇಶ್ ಬಾಬು ತೆರೆಯ ಮೇಲೆ ಎಷ್ಟು ಭವ್ಯವಾಗಿ ಕಾಣಿಸಲಿದ್ದಾರೆ ಎಂಬುದಕ್ಕೆ ಕನ್ನಡಿ ಹಿಡಿದಂತಿದೆ. ಇದರೊಂದಿಗೆ ತ್ರಿಶೂಲ ಹಿಡಿದಿರುವ ಮತ್ತೊಂದು ಪೋಸ್ಟರ್ ಕೂಡ ವೈರಲ್ ಆಗಿದ್ದು, ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ಮಹೇಶ್ ಬಾಬು ಲುಕ್ ಕಂಡು ರಾಜಮೌಳಿ ಥ್ರಿಲ್‌

ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರು ಫ್ರಾನ್ಸ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಈ ವಿಶೇಷ ಪಾತ್ರದ ಬಗ್ಗೆ ಹಂಚಿಕೊಂಡಿದ್ದರು. ಮೊದಲ ಬಾರಿಗೆ ಮಹೇಶ್ ಬಾಬು ಅವರನ್ನು ಶ್ರೀರಾಮನ ಲುಕ್‌ನಲ್ಲಿ ನೋಡಿದಾಗ ತಮಗೆ ಅಕ್ಷರಶಃ ಮೈ ರೋಮಾಂಚನಗೊಂಡಿತ್ತು ಎಂದು ಅವರು ನೆನಪಿಸಿಕೊಂಡಿದ್ದಾರೆ. ಮಹೇಶ್ ಬಾಬು ಅವರಲ್ಲಿ ಕೃಷ್ಣನ ಚಾರ್ಮ್ ಹಾಗೂ ಶ್ರೀರಾಮನ ಶಾಂತ ಸ್ವಭಾವ ಎರಡೂ ಇದೆ ಎಂದು ರಾಜಮೌಳಿ ಕೊಂಡಾಡಿದ್ದಾರೆ. ಚಿತ್ರದ ಪ್ರಮುಖ ಆಕರ್ಷಣೆಯಾಗಿ ಮೂಡಿಬರಲಿರುವ ಈ ರಾಮಾಯಣದ ಸನ್ನಿವೇಶವನ್ನು ಬರೋಬ್ಬರಿ 60 ದಿನಗಳ ಕಾಲ ಐಮ್ಯಾಕ್ಸ್ (IMAX) ತಂತ್ರಜ್ಞಾನದಲ್ಲಿ ಚಿತ್ರೀಕರಿಸಲಾಗಿದ್ದು, ಇದು ಚಿತ್ರದ ದೃಶ್ಯ ವೈಭವವನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ಯಲಿದೆ.

ಚಿತ್ರೀಕರಣದ ಅಂತಿಮ ಹಂತದಲ್ಲಿ 'ವಾರಣಾಸಿ'

ಪ್ರಸ್ತುತ ಫ್ರಾನ್ಸ್‌ನಲ್ಲಿ ಚಿತ್ರದ ಪ್ರಚಾರದ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ರಾಜಮೌಳಿ, 'ವಾರಣಾಸಿ' ಯಾವುದೇ ಫ್ರಾಂಚೈಸಿ ಅಥವಾ ಸರಣಿ ಚಿತ್ರವಲ್ಲ, ಇದೊಂದು ಸಂಪೂರ್ಣ ಸ್ವತಂತ್ರ ಸಿನಿಮಾ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ಚಿತ್ರದ ಪ್ರಮುಖ ಆ್ಯಕ್ಷನ್ ದೃಶ್ಯಗಳ ಶೂಟಿಂಗ್ ಮುಕ್ತಾಯಗೊಂಡಿದ್ದು, ಕೇವಲ 80 ದಿನಗಳ ಚಿತ್ರೀಕರಣ ಬಾಕಿ ಉಳಿದಿದೆ. ಮಹೇಶ್ ಬಾಬು ಜೊತೆಗೆ ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಈ ದೃಶ್ಯಕಾವ್ಯವು 2027ರ ಏಪ್ರಿಲ್ ತಿಂಗಳಿನಲ್ಲಿ ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಕಾಣಲು ಸಜ್ಜಾಗುತ್ತಿದೆ.

Read More
Next Story