
ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ 'ಲೇಡೀಸ್ & ಲೇಡೀಸ್' ಪ್ರೋಮೋ ಬಿಡುಗಡೆಯಾಗಿದೆ.
‘ಪ್ರೀತಿ ಹೆಣ್ಣನ್ನು ರಾಕ್ಷಸಿಯಾಗಿಸುತ್ತದೆ!’; ‘ಟಾಕ್ಸಿಕ್’ ಪ್ರೋಮೋದಲ್ಲಿ ನಾಯಕಿಯರ ರಗಡ್ ಲುಕ್
ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ 'ಲೇಡೀಸ್ & ಲೇಡೀಸ್' ಪ್ರೋಮೋ ಬಿಡುಗಡೆಯಾಗಿದೆ. ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್ ಸೇರಿದಂತೆ ಪ್ರಬಲ ಮಹಿಳಾ ಸೈನ್ಯ ಈ ವಿಡಿಯೋದಲ್ಲಿ ಅಬ್ಬರಿಸಿದೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್ ದಾಸ್ ನಿರ್ದೇಶನದ ಬಹುನಿರೀಕ್ಷಿತ ಆಕ್ಷನ್ ಡ್ರಾಮಾ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದ ಭರ್ಜರಿ ಪ್ರೋಮೋ ವಿಡಿಯೋವೊಂದು ಬಿಡುಗಡೆಯಾಗಿದೆ.
‘ಲೇಡೀಸ್ & ಲೇಡೀಸ್’ ಹೆಸರಿನ ಈ ಪ್ರಮೋಷನಲ್ ವಿಡಿಯೋ ಚಿತ್ರದ ಪ್ರಬಲ ಮಹಿಳಾ ಪಾತ್ರವರ್ಗ ಮತ್ತು ಈ ಡಾರ್ಕ್ ಜಗತ್ತಿನಲ್ಲಿ ಅವರ ಸುತ್ತ ಹೆಣೆಯಲಾದ ರಗಡ್ ಪಾತ್ರಗಳನ್ನು ಪರಿಚಯಿಸಿದೆ. ವಿಡಿಯೋದ ಆರಂಭದಲ್ಲೇ ಗಮನ ಸೆಳೆಯುವ ವಿಭಿನ್ನವಾದ ವಯಸ್ಸಿನ ಎಚ್ಚರಿಕೆಯ ಸಂದೇಶವೊಂದನ್ನು ನೀಡಲಾಗಿದ್ದು, "ಮಕ್ಕಳೇ ದೂರವಿರಿ, ಪೋಷಕರೇ ನಿಮ್ಮ ಮಕ್ಕಳನ್ನು ದೂರವಿಡಿ, ಮುತ್ತಜ್ಜ-ಮುತ್ತಜ್ಜಿಯರೇ ನಿಮ್ಮ ಸ್ವಂತ ಜವಾಬ್ದಾರಿಯ ಮೇಲೆ ನೋಡಿ" ಎನ್ನುವ ಒಕ್ಕಣೆ ಕುತೂಹಲ ಮೂಡಿಸಿದೆ. ಕೇವಲ ಪ್ರೇಮಪಾತ್ರಗಳಿಗೆ ಸೀಮಿತವಾಗದ ಈ ನಾರಿಯರು, "ಪ್ರೀತಿ ಹೆಣ್ಣುಮಕ್ಕಳನ್ನು ರಾಕ್ಷಸರನ್ನಾಗಿ ಮಾಡುತ್ತದೆ. ಅದರ ವಂಚನೆಯ ಆಳವನ್ನು ಅರ್ಥಮಾಡಿಕೊಂಡರೆ ಅದೊಂದು ಸುಂದರ ಭ್ರಮೆ" ಎಂಬ ಗಂಭೀರ ಹಿನ್ನೆಲೆ ಧ್ವನಿಯೊಂದಿಗೆ ಅಬ್ಬರಿಸಿದ್ದಾರೆ.
ಈ ವಿಡಿಯೋದಲ್ಲಿ ಚಿತ್ರದ ಪ್ರಮುಖ ನಾಯಕಿಯರನ್ನು ಅತ್ಯಂತ ವಿಶಿಷ್ಟವಾದ ರೆಟ್ರೋ-ಗೋಥಿಕ್ ಶೈಲಿಯಲ್ಲಿ ಪರಿಚಯಿಸಲಾಗಿದೆ. ನಯನತಾರಾ ಸರ್ಕಸ್ ಮಾದರಿಯ ಕೆಂಪು ಪರದೆಗಳ ಮಧ್ಯೆ ಪ್ರಕಾಶಮಾನವಾದ ವ್ಯಾನಿಟಿ ಕನ್ನಡಿಯ ಮುಂದೆ ಕಾಣಿಸಿಕೊಂಡರೆ, ಕಿಯಾರಾ ಅಡ್ವಾಣಿ ಬೆಂಕಿ ಉಗುಳುವ ಕಲಾಕಾರರ ಮಧ್ಯೆ ಗ್ಲಾಮರಸ್ ಆಗಿ ಮಿನುಗಿದ್ದಾರೆ. ಇನ್ನು ತಾರಾ ಸುತಾರಿಯಾ ಹೊಗೆ ತುಂಬಿದ ಅದ್ದೂರಿ ಲಾಂಜ್‌ನಲ್ಲಿ ಅಲ್ಟ್ರಾ ಮಾಡರ್ನ್ ಆಗಿ ಮಿಂಚಿದರೆ, ರುಕ್ಮಿಣಿ ವಸಂತ್ ವಿಂಟೇಜ್ ಮೆಟ್ಟಿಲುಗಳ ಮೇಲೆ ಪಿಸ್ತೂಲ್ ಹಿಡಿದು ಪಕ್ಕಾ ಆಕ್ಷನ್ ಮೂಡ್‌ನಲ್ಲಿ ಅಬ್ಬರಿಸಿದ್ದಾರೆ. ನಟಿ ಹುಮಾ ಖುರೇಷಿ ಕತ್ತಲೆಯಾದ ಡೈನಿಂಗ್ ಹಾಲ್‌ನಲ್ಲಿ ಚರ್ಮದ ಉಡುಪು ಧರಿಸಿದ ಗೋಥ್ ಗ್ಯಾಂಗ್ ಮುನ್ನಡೆಸುತ್ತಾ ರಗಡ್ ಆಗಿ ಎಂಟ್ರಿ ಕೊಟ್ಟಿದ್ದಾರೆ.
ಮೂಡಿ ಫ್ರೇಮಿಂಗ್ ಮತ್ತು ಅದ್ಭುತ ಎಲೆಕ್ಟ್ರಾನಿಕ್ ಹಿನ್ನೆಲೆ ಸಂಗೀತದೊಂದಿಗೆ ಸಾಗುವ ಈ ವಿಡಿಯೋ, ಕೊನೆಯ ಹಂತದಲ್ಲಿ ಬಾರ್ ಒಂದರಲ್ಲಿ ನಡೆಯುವ ಭೀಕರ ಫೈಟಿಂಗ್ ದೃಶ್ಯಕ್ಕೆ ತಿರುವು ಪಡೆದುಕೊಳ್ಳುತ್ತದೆ. ಕೌಂಟರ್‌ನ ಹಿಂದೆ ನಿಂತು ತನ್ನ ಕೈ ಶರ್ಟ್ ಮಡಚಿಕೊಳ್ಳುತ್ತಾ ಎದುರಾಳಿ ಗ್ಯಾಂಗ್‌ಗೆ ‘ಒಬ್ಬೊಬ್ಬರಾಗಿ ಬರ್ತೀರಾ... ಅಥವಾ ಎಲ್ಲರೂ ಒಟ್ಟಿಗೇ ಬರ್ತೀರಾ?’ ಎಂದು ಸವಾಲು ಹಾಕುವ ಯಶ್ ಅವರ 'ರಾಯಾ' ಪಾತ್ರದ ಖದರ್ ಮಾಸ್ ಆಗಿದೆ. ವೇಗದ ಸಾಹಸ ದೃಶ್ಯಗಳು, ಗಾಜು ಒಡೆಯುವ ಸೌಂಡ್ ಮತ್ತು ಅಕ್ರೋಬ್ಯಾಟಿಕ್ಸ್ ಮೂಲಕ ಈ ಫೈಟ್ ಸೀಕ್ವೆನ್ಸ್ ರೋಮಾಂಚನಕಾರಿಯಾಗಿದೆ. ಕೊನೆಯಲ್ಲಿ "ಆದರೆ ಇಲ್ಲೊಂದು ಪ್ಲಾಟ್ ಟ್ವಿಸ್ಟ್ ಇದೆ ಲೇಡೀಸ್... ಪುರುಷರ ಮತ್ತು ಅವರ ಗನ್ ಪ್ರದರ್ಶನದ ಪ್ರೆಡಿಕ್ಟಬಲ್ ಸ್ಪೆಕ್ಟಾಕಲ್ ಅನ್ನು ಮರೆಯಬೇಡಿ" ಎನ್ನುವ ಹಿನ್ನೆಲೆ ಧ್ವನಿಯೊಂದಿಗೆ ಗನ್ ಕಾಕ್ ಆಗುವ ಸೌಂಡ್ ಬಂದು ವಿಡಿಯೋ ಮುಕ್ತಾಯವಾಗುತ್ತದೆ.
ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರವು ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಿಗೆ ಡಬ್ ಆಗಿ ಬಿಡುಗಡೆಯಾಗಲಿದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಆಗಸ್ಟ್ 26 ರಂದು ‘ಟಾಕ್ಸಿಕ್’ ಪ್ರಪಂಚದಾದ್ಯಂತ ಚಿತ್ರಮಂದಿರಗಳಲ್ಲಿ ಅಬ್ಬರಿಸಲು ಸಜ್ಜಾಗಿದೆ.

