
ಅಂಡಾಣು ಫ್ರೀಜ್ ಮಾಡುವ ಪ್ರಕ್ರಿಯೆಯು ಅಷ್ಟು ಸುಲಭದ್ದಲ್ಲ ಎಂದು ಕೃತಿ ಸನೋನ್
ಒಪ್ಪಿಕೊಂಡಿದ್ದಾರೆ.
ಮಿಮಿ ಸಿನಿಮಾ ಮುನ್ನವೇ ಅಂಡಾಣು ಫ್ರೀಜ್ ಮಾಡಿದ್ದ ಕೃತಿ ಸನೋನ್
ಖ್ಯಾತ ನಟಿ ಕೃತಿ ಸನೋನ್ ಬಯೋಲಾಜಿಕಲ್ ಕ್ಲಾಕ್ ಒತ್ತಡದಿಂದ ದೂರವಿರಲು 'ಮಿಮಿ' ಚಿತ್ರಕ್ಕೂ ಮುನ್ನವೇ ತಮ್ಮ ಅಂಡಾಣುಗಳನ್ನು ಫ್ರೀಜ್ ಮಾಡಿಸಿದ್ದಾಗಿ ಸವಾಲುಗಳ ಸಹಿತ ಬಿಚ್ಚಿಟ್ಟಿದ್ದಾರೆ.
ಬಾಲಿವುಡ್‌ನ ಖ್ಯಾತ ನಟಿ ಕೃತಿ ಸನೋನ್ ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ಜೀವನದ ಮಹತ್ವದ ನಿರ್ಧಾರವೊಂದನ್ನು ಬಹಿರಂಗಪಡಿಸಿದ್ದಾರೆ. ಪ್ರಸ್ತುತ 35 ವರ್ಷ ವಯಸ್ಸಿನ ಕೃತಿ, ಕೆಲವು ವರ್ಷಗಳ ಹಿಂದೆಯೇ ಅಂದರೆ ತಮ್ಮ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ 'ಮಿಮಿ' ಚಿತ್ರದ ಚಿತ್ರೀಕರಣಕ್ಕೂ ಮುನ್ನವೇ ತಮ್ಮ ಅಂಡಾಣುಗಳನ್ನು ಫ್ರೀಜ್ (Egg Freezing) ಮಾಡಿಸಿರುವುದಾಗಿ ತಿಳಿಸಿದ್ದಾರೆ. ಇದು ದೈಹಿಕವಾಗಿ ಮತ್ತು ಮಾನಸಿಕವಾಗಿ ಸುಲಭದ ಪ್ರಕ್ರಿಯೆಯಲ್ಲದಿದ್ದರೂ, ಜೀವನದಲ್ಲಿ ನಮಗೆ ಬೇಕಾದ ರೀತಿಯಲ್ಲಿ ಬದುಕಲು ಇದು ಭದ್ರತೆಯ ಭಾವನೆ ನೀಡುತ್ತದೆ ಎಂದು ಅವರು ಹೇಳಿದ್ದಾರೆ.
ಮದುವೆಯ ಒತ್ತಡಕ್ಕೆ ಬ್ರೇಕ್
ಮಹಿಳೆಯರ ವಯಸ್ಸು ಹೆಚ್ಚಾಗುತ್ತಿದ್ದಂತೆ ಎದುರಾಗುವ ಬಯೋಲಾಜಿಕಲ್ ಕ್ಲಾಕ್ ಮತ್ತು ಮದುವೆಯ ಒತ್ತಡಗಳ ಕುರಿತು ಮಾತನಾಡಿದ ಕೃತಿ, ಕೇವಲ ವಯಸ್ಸಾಗುತ್ತಿದೆ ಎಂಬ ಕಾರಣಕ್ಕಾಗಿ ಮದುವೆಯಾಗುವುದು ಅಥವಾ ಮಕ್ಕಳನ್ನು ಹೆರಬೇಕೆಂಬ ನಿಯಮಗಳಿಗೆ ತಾವೂ ಸಿಲುಕಲು ಬಯಸಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮದುವೆ ಅಥವಾ ಮಕ್ಕಳನ್ನು ಹೊರುವುದು ನಮ್ಮ ಒಳಗಿನಿಂದ ಬರಬೇಕಾದ ನಿರ್ಧಾರವೇ ಹೊರತು ಯಾರದೋ ಒತ್ತಡಕ್ಕೆ ಮಣಿದು ಮಾಡಬಾರದು. ಈ ಕಾರಣಕ್ಕಾಗಿಯೇ ತಮಗೆ ಭವಿಷ್ಯದಲ್ಲಿ ತಾಯಿಯಾಗುವ ಸ್ವಾತಂತ್ರ್ಯವನ್ನು ಕಾಯ್ದಿರಿಸಿಕೊಳ್ಳಲು ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ವಿವರಿಸಿದ್ದಾರೆ.
'ಮಿಮಿ' ಚಿತ್ರಕ್ಕಾಗಿ ತೂಕ ಹೆಚ್ಚಿಸಿಕೊಳ್ಳುವಾಗ ಕೈಗೊಂಡ ನಿರ್ಧಾರ
ಬಾಡಿಗೆ ತಾಯ್ತನದ (Surrogacy) ಕಥಾಹಂದರ ಹೊಂದಿದ್ದ 'ಮಿಮಿ' ಚಿತ್ರದಲ್ಲಿ ನಟಿಸಲು ಕೃತಿ ಸನೋನ್ 15 ಕೆಜಿ ತೂಕ ಹೆಚ್ಚಿಸಿಕೊಳ್ಳಬೇಕಾಗಿತ್ತು. ಆ ಸಮಯದಲ್ಲಿ ತಮಗೆ ಎರಡು ತಿಂಗಳ ಕಾಲ ಯಾವುದೇ ಶೂಟಿಂಗ್ ಇರಲಿಲ್ಲ. ಅದೇ ಬಿಡುವಿನ ಅವಧಿಯಲ್ಲಿ ಅವರು ಅಂಡಾಣುಗಳನ್ನು ಫ್ರೀಜ್ ಮಾಡುವ ನಿರ್ಧಾರ ಮಾಡಿದರು. ಚಿತ್ರದಲ್ಲಿ ಬಾಡಿಗೆ ತಾಯಿಯ ಪಾತ್ರ ಮಾಡುತ್ತಿದ್ದರಿಂದ ಈ ಪ್ರಕ್ರಿಯೆಯ ಬಗ್ಗೆ ತಮಗೆ ಹೆಚ್ಚಿನ ಅರಿವು ಮೂಡಿತು ಮತ್ತು ತಮಗೆ ತಾವೇ ನೀಡಬಹುದಾದ ಅತ್ಯುತ್ತಮ ಉಡುಗೊರೆ ಇದಾಗಿದೆ ಎಂದು ಭಾವಿಸಿ ನಿಕಟವರ್ತಿಗಳ ಸಲಹೆಯ ಮೇರೆಗೆ ಈ ಹೆಜ್ಜೆ ಇಟ್ಟಿದ್ದಾಗಿ ಕೃತಿ ಹೇಳಿದ್ದಾರೆ.
ಹಾರ್ಮೋನ್ ಏರುಪೇರು ಮತ್ತು ಕೃತಿ ಅನುಭವಿಸಿದ ಸವಾಲುಗಳು
ಅಂಡಾಣು ಫ್ರೀಜ್ ಮಾಡುವ ಪ್ರಕ್ರಿಯೆಯು ಅಷ್ಟು ಸುಲಭದ್ದಲ್ಲ ಎಂದು ಕೃತಿ ಸನೋನ್ ಒಪ್ಪಿಕೊಂಡಿದ್ದಾರೆ. ಈ ಪ್ರಕ್ರಿಯೆಯ ಸಂದರ್ಭದಲ್ಲಿ ದೇಹದಲ್ಲಿ ತೀವ್ರವಾದ ಹಾರ್ಮೋನ್ ಏರುಪೇರುಗಳು ಉಂಟಾಗುತ್ತವೆ. ಗರ್ಭಿಣಿಯರಲ್ಲಿ ಆಗುವಂತೆ ಮೂಡ್ ಸ್ವಿಂಗ್ಸ್ ಗರಿಷ್ಠ ಮಟ್ಟ ತಲುಪುತ್ತದೆ ಮತ್ತು ದೇಹವು ಉಬ್ಬಿದಂತಾಗುತ್ತದೆ . ಆದರೆ, ತಮಗೆ ಆರ್ಥಿಕವಾಗಿ ಇದನ್ನು ಭರಿಸುವ ಶಕ್ತಿ ಇದ್ದಿದ್ದರಿಂದ ತಮಗೆ ಹೆಮ್ಮೆಯಿದೆ ಎಂದು ಹೇಳಿರುವ ಕೃತಿ, ಮಾನಸಿಕ ನೆಮ್ಮದಿಗಾಗಿ ಮತ್ತು ಯಾವುದೇ ಕಾಲಮಿತಿಯ ಒತ್ತಡವಿಲ್ಲದೆ ಬದುಕಲು ಇದೊಂದು ಉತ್ತಮ ಸುರಕ್ಷತಾ ಕವಚ ಎಂದು ಬಣ್ಣಿಸಿದ್ದಾರೆ.

