
'ಮ್ಯಾಂಗೋ ಪಚ್ಚ' ಪೋಸ್ಟರ್
ಕಿಚ್ಚ ಸುದೀಪ್ ಬಿಡುಗಡೆ ಮಾಡಿದ 'ಮ್ಯಾಂಗೋ ಪಚ್ಚ' ಪೋಸ್ಟರ್
ಕಿಚ್ಚ ಸುದೀಪ್ ತಮ್ಮ ಸೋದರಳಿಯ ಸಂಚಿತ್ ಸಂಜೀವ್ ನಟನೆಯ ‘ಮ್ಯಾಂಗೋ ಪಚ್ಚ’ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಮೈಸೂರು ಕ್ರೈಮ್ ಲೋಕದ ಈ ಸಿನಿಮಾ ಜೂನ್ 5ರಂದು ತೆರೆಕಾಣಲಿದೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಸಾಮಾಜಿಕ ಜಾಲತಾಣದಲ್ಲಿ 'ಮ್ಯಾಂಗೋ ಪಚ್ಚ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಬೆಂಬಲ ನೀಡಿದ್ದಾರೆ. ಮೈಸೂರಿನ ಭೂಗತ ಲೋಕದ ಹಿನ್ನೆಲೆಯಲ್ಲಿ ಸಾಗುವ ಈ ಕ್ರೈಮ್ ಡ್ರಾಮಾ ಸಿನಿಮಾ ಇದೀಗ ಸಿನಿರಂಗದಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಪೋಸ್ಟರ್ ಹಂಚಿಕೊಂಡಿರುವ ಸುದೀಪ್ ಅವರು, ಸುಪ್ರಿಯಾನ್ವಿ ಮತ್ತು ಕೆಆರ್‌ಜಿ ಸ್ಟುಡಿಯೋಸ್ ಅತ್ಯಂತ ಶ್ರದ್ಧೆ ಹಾಗೂ ಪರಿಶ್ರಮದಿಂದ ಈ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ ಎಂದು ಶ್ಲಾಘಿಸಿದ್ದಾರೆ. ಸಾಮಾನ್ಯ ಜೀವನದ ನಡುವೆ ಅಸಾಮಾನ್ಯವಾದುದನ್ನು ಹುಡುಕುವ ಪ್ರಯತ್ನವನ್ನು ಈ ತಂಡ ಮಾಡಿದೆ ಎಂದು ಬಣ್ಣಿಸಿರುವ ಅವರು, ಪ್ರಶಾಂತ್ ಅಲಿಯಾಸ್ 'ಪಚ್ಚ' ಎಂಬ ವ್ಯಕ್ತಿ ಹೇಗೆ 'ಮ್ಯಾಂಗೋ ಪಚ್ಚ'ನಾಗಿ ಬದಲಾಗುತ್ತಾನೆ ಎಂಬ ಜರ್ನಿಯನ್ನು ಈ ಸಿನಿಮಾ ಒಳಗೊಂಡಿದೆ ಎಂದು ತಿಳಿಸಿ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ.
ಈ ಚಿತ್ರವು 2001 ರಿಂದ 2011ರ ಕಾಲಘಟ್ಟದ ಮೈಸೂರಿನ ರೌಡಿಸಂ ಕಥೆಯನ್ನು ಆಧರಿಸಿದೆ. ಒಬ್ಬ ವ್ಯಕ್ತಿಯ ಜೀವನದ ಏಳುಬೀಳುಗಳು, ಆತ ಕ್ರೈಮ್ ಲೋಕಕ್ಕೆ ಪ್ರವೇಶಿಸುವ ಅನಿವಾರ್ಯತೆ ಮತ್ತು ಆತನ ಜೀವನದಲ್ಲಿ ಎದುರಾಗುವ ಕಠಿಣ ನಿರ್ಧಾರಗಳನ್ನು ಈ ಸಿನಿಮಾ ನೈಜವಾಗಿ ಚಿತ್ರಿಸಲಿದೆ. ಕೇವಲ ಆಕ್ಷನ್ ಮಾತ್ರವಲ್ಲದೆ, ಇದೊಂದು ಭಾವನಾತ್ಮಕ ಕ್ರೈಮ್ ಡ್ರಾಮಾ ಎಂದು ಚಿತ್ರತಂಡ ಹೇಳಿಕೊಂಡಿದೆ.
ವಿವೇಕ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಮೂಲಕ ಕಿಚ್ಚ ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜೀವ್ ನಾಯಕ ನಟನಾಗಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದಲ್ಲಿ ಪ್ರಿಯಾ ಆನಂದ್ ಮತ್ತು ಕಾಜಲ್ ಕುಂದರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚರಣ್ ರಾಜ್ ಮತ್ತು ಯೋಗಿ ರಾಜ್ ಅವರ ಸಂಗೀತ ನಿರ್ದೇಶನವಿದ್ದು, ನಿರ್ದೇಶಕ ವಿವೇಕ ಅವರೇ ಛಾಯಾಗ್ರಹಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. 'ಮ್ಯಾಂಗೋ ಪಚ್ಚ' ಸಿನಿಮಾ ಜೂನ್ 5ರಂದು ರಾಜ್ಯಾದ್ಯಂತ ತೆರೆಕಾಣಲು ಸಜ್ಜಾಗಿದೆ.

