
ಸಿದ್ಧಾರ್ಥ್ ಮಲ್ಹೋತ್ರಾ ನೀಡಿದ ಬೆಂಬಲದ ಬಗ್ಗೆ ನಟಿ ಕಿಯಾರಾ ಅಡ್ವಾಣಿ ಇತ್ತೀಚಿನ ಸಂದರ್ಶನದಲ್ಲಿ ಭಾವುಕರಾಗಿ ಮಾತನಾಡಿದ್ದಾರೆ.
ಮಗಳ ಜನನದ ನಂತರ ಕಣ್ಣೀರಿಡುತ್ತಿದ್ದ ಕಿಯಾರಾ; ಪತಿಯ ಬೆಂಬಲದ ಬಗ್ಗೆ ಭಾವುಕ ನುಡಿ
ತಾಯಿ ಸಾರಾಯಾ ಜನನದ ನಂತರದ ಮಾನಸಿಕ ಸವಾಲುಗಳು ಮತ್ತು ಪತಿ ಸಿದ್ಧಾರ್ಥ್ ಮಲ್ಹೋತ್ರಾ ನೀಡಿದ ಬೆಂಬಲದ ಬಗ್ಗೆ ನಟಿ ಕಿಯಾರಾ ಅಡ್ವಾಣಿ ಇತ್ತೀಚಿನ ಸಂದರ್ಶನದಲ್ಲಿ ಭಾವುಕರಾಗಿ ಮಾತನಾಡಿದ್ದಾರೆ.
ಖ್ಯಾತ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ತಾಯ್ತನದ ನಂತರದ ಸವಾಲುಗಳು ಮತ್ತು ಪತಿ ಸಿದ್ಧಾರ್ಥ್ ಮಲ್ಹೋತ್ರಾ ನೀಡಿದ ಬೆಂಬಲದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. 2025ರ ಜುಲೈನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಕಿಯಾರಾ, ಹೆರಿಗೆಯ ನಂತರದ ದಿನಗಳು (ಪೋಸ್ಟ್‌ಪಾರ್ಟಮ್) ಮಾನಸಿಕವಾಗಿ ಎಷ್ಟು ಕಠಿಣವಾಗಿದ್ದವು ಎಂಬುದನ್ನು ಹಂಚಿಕೊಂಡಿದ್ದಾರೆ.
ತಮ್ಮ ಮಗಳು ಸಾರಾಯಾ ಮಲ್ಹೋತ್ರಾ ಜನಿಸಿದ ನಂತರದ ದಿನಗಳಲ್ಲಿ ತಾವು ವಿಪರೀತ ಭಾವೋದ್ವೇಗಕ್ಕೆ ಒಳಗಾಗುತ್ತಿದ್ದೆ ಎಂದು ಅವರು ತಿಳಿಸಿದ್ದಾರೆ. ಸಿದ್ಧಾರ್ಥ್ ತಮ್ಮ ಸಿನಿಮಾಗಳ ಚಿತ್ರೀಕರಣದಲ್ಲಿ ಬಿಜಿಯಾಗಿದ್ದರೂ, ತಡರಾತ್ರಿ ಮನೆಗೆ ಬಂದು ಮಗು ಮತ್ತು ತಮ್ಮ ಆರೈಕೆ ಮಾಡುತ್ತಿದ್ದರು ಎಂದು ಕಿಯಾರಾ ಸ್ಮರಿಸಿದ್ದಾರೆ. ಆ ಸಮಯದಲ್ಲಿ ಸಣ್ಣ ವಿಷಯಗಳಿಗೂ ಕಣ್ಣೀರು ಬರುತ್ತಿತ್ತು ಮತ್ತು ಯಾವುದೋ ಒತ್ತಡ ತಮ್ಮನ್ನು ಕಾಡುತ್ತಿತ್ತು ಎಂದು ಅವರು ಹೇಳಿದ್ದಾರೆ.
ಮಗುವಿನ ವೈದ್ಯರ ಸಲಹೆಯಂತೆ ಸಿದ್ಧಾರ್ಥ್ ಅವರು ಪ್ರತಿದಿನ ರಾತ್ರಿ ಕಿಯಾರಾ ಅವರನ್ನು ಲಾಂಗ್ ಡ್ರೈವ್‌ಗೆ ಕರೆದೊಯ್ಯುತ್ತಿದ್ದರು. ಈ ಪುಟ್ಟ ಬದಲಾವಣೆಯು ಕಿಯಾರಾ ಅವರ ಮಾನಸಿಕ ನೆಮ್ಮದಿಗೆ ಬಹಳ ಸಹಾಯ ಮಾಡಿತು. ತಾಯಿಯಾದ ನಂತರ ಮಹಿಳೆಯ ಗುರುತು ಹೇಗೆ ಬದಲಾಗುತ್ತದೆ ಮತ್ತು ಆ ಸಮಯದಲ್ಲಿ ಯಾವುದೇ ಸಲಹೆಗಳಿಲ್ಲದೆ ಕೇವಲ ಮನದ ಮಾತನ್ನು ಕೇಳಿಸಿಕೊಳ್ಳುವ ವ್ಯಕ್ತಿಯ ಅಗತ್ಯವಿರುತ್ತದೆ ಎಂಬುದನ್ನು ಕಿಯಾರಾ ಈ ಸಂದರ್ಭದಲ್ಲಿ ಹೇಳಿದ್ದಾರೆ.
ಇತರರನ್ನು ಮೆಚ್ಚಿಸಲು ಪ್ರಯತ್ನಿಸುವ ವ್ಯಕ್ತಿ ಆಗಬಾರದು
ತಮ್ಮ ಮಗಳು ಬೆಳೆಯುತ್ತಾ ಹೋದಂತೆ ತನ್ನಂತೆಯೇ 'ಪೀಪಲ್ ಪ್ಲೀಸರ್' (ಇತರರನ್ನು ಮೆಚ್ಚಿಸಲು ಪ್ರಯತ್ನಿಸುವ ವ್ಯಕ್ತಿ) ಆಗಬಾರದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಬಾಲ್ಯದಲ್ಲಿ ತಮಗೆ ಸಿಕ್ಕ ಅತಿಯಾದ ಪ್ರೀತಿ ಮತ್ತು ಮನೆಯ ಸುರಕ್ಷಿತ ವಾತಾವರಣವೇ ತಮ್ಮಲ್ಲಿ ಇತರರನ್ನು ಮೆಚ್ಚಿಸುವ ಗುಣ ಬೆಳೆಯಲು ಕಾರಣವಾಯಿತು ಎಂದು ವಿಶ್ಲೇಷಿಸಿದ್ದಾರೆ. ಮನೆಯಲ್ಲಿ ಪೋಷಕರಿಂದ ಅತಿಯಾದ ಪ್ರೀತಿ ಸಿಕ್ಕಾಗ, ಮಕ್ಕಳು ತಿಳಿಯದೆಯೇ ತಮ್ಮ ಪೋಷಕರನ್ನು ನಿರಾಸೆಗೊಳಿಸಲು ಇಷ್ಟಪಡುವುದಿಲ್ಲ. ಇದರಿಂದಾಗಿ ಪೋಷಕರ ಮೆಚ್ಚುಗೆಗಾಗಿ ತಮ್ಮ ನೈಜ ವ್ಯಕ್ತಿತ್ವವನ್ನು ಮರೆಮಾಚುವ ಸಾಧ್ಯತೆ ಇರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ತಾಯ್ತನ ಮತ್ತು ಮದುವೆಯ ನಂತರ ತಮ್ಮ ಅನೇಕ ಗುಣಗಳ ಬಗ್ಗೆ ತಮಗೆ ಅರಿವಾಗಿದೆ ಎಂದ ಕಿಯಾರಾ, ಮಗಳು ಸಾರಾಯಾ ಯಾವುದೇ ಭಯವಿಲ್ಲದೆ ತಮ್ಮೊಂದಿಗೆ ಮುಕ್ತವಾಗಿ ಸಂವಹನ ನಡೆಸುವಂತೆ ಬೆಳೆಯಬೇಕು. ಅವಳು ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಆತ್ಮವಿಶ್ವಾಸವನ್ನು ಮೈಗೂಡಿಸಿಕೊಳ್ಳಬೇಕು ಮತ್ತು ಇತರರ ಮೆಚ್ಚುಗೆಗಾಗಿ ತನ್ನ ಇಷ್ಟಗಳನ್ನು ಬದಿಗೊತ್ತಬಾರದು ಎಂದು ಅವರು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ತಮ್ಮ ಪೋಷಕರ ಶ್ರಮವನ್ನು ನೆನೆದ ಕಿಯಾರಾ, ತಂದೆ ಚಿಕ್ಕ ವಯಸ್ಸಿನಲ್ಲೇ ಪೋಷಕರನ್ನು ಕಳೆದುಕೊಂಡು ಕಷ್ಟಪಟ್ಟು ಮೇಲೆ ಬಂದವರು ಎಂದು ತಿಳಿಸಿದರು. ತಮ್ಮ ತಾಯಿ ಕೇವಲ ಓದಿನ ಅಂಕಗಳಿಗಿಂತ ಮೌಲ್ಯ ಮತ್ತು ಶಿಸ್ತಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು ಎಂದು ಅವರು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

