
ಕಿಯಾರಾ ಅಡ್ವಾಣಿ
'ಟಾಕ್ಸಿಕ್' ಸೆಟ್‌ನ ಕಠಿಣ ನಿಯಮ ಬಿಚ್ಚಿಟ್ಟ ಕಿಯಾರಾ ಅಡ್ವಾಣಿ
ಯಶ್ ನಟನೆಯ 'ಟಾಕ್ಸಿಕ್' ಸೆಟ್‌ನಲ್ಲಿ ನಿರ್ದೇಶಕಿ ಗೀತು ಮೋಹನ್ ದಾಸ್ ಹಾಕಿದ್ದ ಕಟ್ಟುನಿಟ್ಟಿನ ನಿಯಮ ಹಾಗೂ ಶೂಟಿಂಗ್ ಅನುಭವಗಳನ್ನು ನಟಿ ಕಿಯಾರಾ ಅಡ್ವಾಣಿ ಹಂಚಿಕೊಂಡಿದ್ದಾರೆ.
ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದ ಶೂಟಿಂಗ್ ಅನುಭವಗಳನ್ನು ನಟಿ ಕಿಯಾರಾ ಅಡ್ವಾಣಿ ಹಂಚಿಕೊಂಡಿದ್ದಾರೆ. ಚಿತ್ರದ ಸೆಟ್‌ನಲ್ಲಿ ನಿರ್ದೇಶಕಿ ಗೀತು ಮೋಹನ್ ದಾಸ್ ಅವರು ಕಟ್ಟುನಿಟ್ಟಾದ ನಿಯಮವೊಂದನ್ನು ಜಾರಿಗೆ ತಂದಿದ್ದರು ಎಂದು ಕಿಯಾರಾ ಬಹಿರಂಗಪಡಿಸಿದ್ದಾರೆ.
ಸಾಮಾನ್ಯವಾಗಿ ಸೆಟ್‌ಗೆ ಬಂದ ತಕ್ಷಣ ಎಲ್ಲರಿಗೂ ಶುಭ ಕೋರುವ ಮತ್ತು ಹರಟೆ ಹೊಡೆಯುವ ಸ್ವಭಾವದ ಕಿಯಾರಾ ಅವರಿಗೆ, ಸೆಟ್‌ನಲ್ಲಿ ಯಾರೊಂದಿಗೂ ಅನಗತ್ಯ ಮಾತುಕತೆ ಅಥವಾ 'ಹಾಯ್, ಹಲೋ' ಎನ್ನಬಾರದು ಎಂದು ಗೀತು ಸೂಚಿಸಿದ್ದರಂತೆ. ಪಾತ್ರದ ಗಾಂಭೀರ್ಯವನ್ನು ಕಾಪಾಡಿಕೊಳ್ಳಲು ಮತ್ತು ಆ ಕಲ್ಪನಾ ಲೋಕದಲ್ಲೇ ಮುಳುಗಿರಲು ಈ 'ನೋ ಪ್ಲೆಸಂಟ್ರಿಸ್' (ಕುಶಲೋಪರಿ ವಿಚಾರಿಸದ) ನಿಯಮವನ್ನು ಮಾಡಲಾಗಿತ್ತು ಎಂದು ಕಿಯಾರಾ ಬಾಂಬೆ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಇದೇ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿರುವ ಕಿಯಾರಾ ಅಡ್ವಾಣಿ ಅವರಿಗೆ ಈ ಸಿನಿಮಾದ ಶೂಟಿಂಗ್ ಸಾಕಷ್ಟು ಸವಾಲಾಗಿತ್ತು. ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಿಸಲಾಗುತ್ತಿದ್ದು, ಪ್ರತಿ ದೃಶ್ಯವನ್ನು ಎರಡು ಬಾರಿ ನಟಿಸಬೇಕಾಗಿತ್ತು.
ಕನ್ನಡ ಭಾಷೆ ತಿಳಿಯದ ಕಾರಣ, ಶೂಟಿಂಗ್‌ನ ಹಿಂದಿನ ರಾತ್ರಿಯೇ ಸಂಭಾಷಣೆಗಳನ್ನು ಕಂಠಪಾಠ ಮಾಡುತ್ತಿದ್ದ ಕಷ್ಟದ ದಿನಗಳನ್ನು ಅವರು ನೆನಪಿಸಿಕೊಂಡಿದ್ದಾರೆ. ಆದರೂ, ಬಾಲಿವುಡ್ ಮತ್ತು ಟಾಲಿವುಡ್ ಚಿತ್ರರಂಗಕ್ಕೆ ಹೋಲಿಸಿದರೆ ಸಾಂಸ್ಕೃತಿಕವಾಗಿ ಸಣ್ಣಪುಟ್ಟ ವ್ಯತ್ಯಾಸಗಳಿದ್ದರೂ, ಕೆಲಸದ ಶೈಲಿ ಮತ್ತು ಭಾರತೀಯ ಚಿತ್ರರಂಗದ ಮೂಲ ಸ್ವರೂಪ ಎಲ್ಲೆಡೆ ಒಂದೇ ಆಗಿರುವುದರಿಂದ ತಮಗೆ ಕನ್ನಡ ಉದ್ಯಮದಲ್ಲಿ ಕೆಲಸ ಮಾಡುವುದು ಅಪರಿಚಿತವಾಗಿ ಕಾಣಲಿಲ್ಲ ಎಂದು ಕಿಯಾರಾ ಹೇಳಿದ್ದಾರೆ. ಗೀತು ಮೋಹನ್ ದಾಸ್ ನಿರ್ದೇಶನದ ಈ ಬಿಗ್ ಬಜೆಟ್ ಚಿತ್ರದಲ್ಲಿ ಯಶ್ ಜೊತೆಗೆ ನಯನತಾರಾ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

